Advertisement

ಶಕ್ತಿಸೌಧದಲ್ಲಿ ಕೋವಿಡ್‌ 19 ಕಾಟ: ಆತಂಕ

05:57 AM Jul 02, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ಸೋಂಕು ವೇಗವಾಗಿ ಹೆಚ್ಚುತ್ತಿದ್ದು, ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಗಳಲ್ಲಿ ಸೋಂಕು ಪ್ರಕರಣ ಕಂಡು ಬಂದಿರುವುದರಿಂದ ಶಕ್ತಿ ಕೇಂದ್ರದಲ್ಲಿ ಕಾರ್ಯ  ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ವರ್ಕ್‌ ಫ್ರಂ ಹೋಂ ಅವಕಾಶದ ಬಯಕೆಯಲ್ಲಿದ್ದಾರೆ.

Advertisement

ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಆರಂಭವಾದಾಗ ತುರ್ತು ಸೇವೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಶೇ.  33 ರಷ್ಟು ಮಾತ್ರ ಸಿಬ್ಬಂದಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮೇ 18 ಲಾಕ್‌ಡೌನ್‌ ಸಡಿಲಿಕೆ ಬಳಿಕ ಎಲ್ಲ ಇಲಾಖೆಗಳ ಶೇ. 100 ಸಿಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಿರುವಂತೆ ಸೂಚಿಸಲಾಯಿತು.

ಹೆಚ್ಚಿದ ಆತಂಕ: ಜೂ. 1ರಿಂದ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಸೋಂಕಿನ ಪ್ರಮಾಣದಲ್ಲೂ ಗಣನೀಯ ಏರಿಯಾಗಿದೆ. ಇದರ ಪರಿಣಾಮ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಶಾಸಕರ ಭವನ, ವಿಶ್ವೇಶ್ವರಯ್ಯ  ಟವರ್‌, ಸಿಎಂ ಗೃಹ ಕಚೇರಿ ಕೃಷ್ಣಾ, ಕನ್ನಡ ಭವನದಲ್ಲಿ ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿವೆ. ಇಲ್ಲಿ ಕಾರ್ಯನಿರ್ವಹಿಸುವ ಐವತ್ತು ವರ್ಷ ಮೀರಿದವರು, ಗರ್ಭಿಣಿ ಹೆಣ್ಣುಮಕ್ಕಳು ಆತಂಕಗೊಂಡಿದ್ದಾರೆ.

ಅಲ್ಲದೆ ಬಸ್‌ಗಳಲ್ಲಿ  ಸಂಚರಿಸುವ ಸಿಬ್ಬಂದಿ ಸೋಂಕು ಪ್ರಕರಣಗಳಿಂದ ಭಯಭೀತರಾಗಿದ್ದಾರೆ. ಸಮೂಹ ವಾಹನದಲ್ಲಿ ಎಷ್ಟೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಸೋಂಕು ಹೇಗೆ ಬರುತ್ತದೆ ಎಂಬ ಆತಂಕ ಹೆಚ್ಚಿರುವ ಕಾರಣ ಮನೆ  ಬಿಟ್ಟು ಕಚೇರಿಗೆ ಬರಲು ಭಯ ಆವರಿಸಿದೆ. ಅಲ್ಲದೆ ಹೊರಗಡೆ ಹೋಗಿ ಬರುವ ಸಿಬ್ಬಂದಿಗೆ ಮನೆಯಲ್ಲಿ, ನೆರೆಹೊರೆಯಲ್ಲಿ ಆತಂಕದಿಂದಲೇ ನೋಡುವ ಸ್ಥಿತಿಯಿದೆ.

ಲಾಕ್‌ಡೌನ್‌ಗೆ ಆಗ್ರಹ: ಈಗ ಸೋಂಕು ಹೆಚ್ಚುತ್ತಿರುವುದರಿಂದ ಇಲಾಖೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲರ ಆರೋಗ್ಯದ ದೃಷ್ಟಿಯಿಂದ ಲಾಕ್‌ ಡೌನ್‌ ಆರಂಭದಲ್ಲಿ ಜಾರಿಗೊಳಿಸಿದಂತೆ ಶೇ 33 ರಷ್ಟು ಸಿಬ್ಬಂದಿ ಮಾತ್ರ  ಕೆಲಸ ಮಾಡಲು ಅವಕಾಶ ಕಲ್ಪಿಸಿ ಉಪ ಕಾರ್ಯದರ್ಶಿ ಮೇಲಿನ ಶ್ರೇಣಿಯ ಸಿಬ್ಬಂದಿ ಮಾತ್ರ ಕಡ್ಡಾಯ ಹಾಜರಿಗೆ ಅವಕಾಶ ನೀಡಿ ಉಳಿದ ಸಿಬ್ಬಂದಿಗೆ ಅಗತ್ಯಬಿದ್ದಾಗ ಕಚೇರಿಗೆ ಬರುವಂತೆ ಸೂಚನೆ ನೀಡಬೇಕು ಎಂಬ ಮಾತುಗಳು ಶಕ್ತಿ  ಸೌಧದಲ್ಲಿ ಕೇಳಿ ಬರುತ್ತಿವೆ.

Advertisement

ಮನವಿಗೆ ಮುಂದಾದ ನೌಕರರ ಸಂಘ; ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಲು ರಾಜ್ಯ ಸರ್ಕಾರಿ  ನೌಕರರ ಸಂಘ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಹಣಕಾಸು ಇಲಾಖೆ ಈ ವ್ಯವಸ್ಥೆ ಜಾರಿಗೊಳಿಸಿರುವು ದರಿಂದ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತುರ್ತು ಸೇವೆ ಒದಗಿಸುವ ಇಲಾಖೆಗಳ ನ್ನು ಹೊರತು ಪಡೆಸಿ  ಉಳಿದ ಇಲಾಖೆಗಳ ಶೇ. 33 ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅವಕಾಶಕ್ಕಾಗಿ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸೌಧ, ವಿಕಾಸಸೌಧದಲ್ಲಿಯೇ ಕೋವಿಡ್‌ 19 ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ನೌಕರರಲ್ಲಿ ಆತಂಕ  ಚ್ಚಾಗಿದೆ. ಹೀಗಾಗಿ ಮೊದಲಿನಂತೆ ಶೇ. 33 ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಿಗೆ ಅವಕಾಶ ನೀಡಿ, ಉಳಿದವರನ್ನು  ಅಗತ್ಯಬಿದ್ದಾಗ ಕರೆಯಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸುವಂತೆ ಸಿಎಂ ಮತ್ತು ಮುಖ್ಯಕಾರ್ಯದರ್ಶಿಯನ್ನು ಮನವಿ ಮಾಡಲು ನಿರ್ಧರಿಸಿದ್ದೇವೆ.
-ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next