Advertisement

ಅನಿವಾಸಿ ಭಾರತೀಯರ ಅನುಭವ ಕಥನ- 3: ವರ್ಚುವಲ್‌ ಲೋಕದಲ್ಲೇ ಈಗ ಎಲ್ಲ ವ್ಯವಹಾರ!

11:10 AM Apr 18, 2020 | Hari Prasad |

ಎರಡು ಪಟ್ಟು ಹಣ ತೆತ್ತು ಥೈಲ್ಯಾಂಡ್‌ ರೈಸ್‌ ಖರೀದಿಸಿದೆ

Advertisement

ಬಾಹ್ಯಾಕಾಶ ವಿಜ್ಞಾನ ಓದಲೆಂದು ಇಂಗ್ಲೆಂಡಿಗೆ ಬಂದೆ. ಆದರೆ, ಈಗ ಬೇರೆ ಗ್ರಹಗಳಲ್ಲಿ ಏನಿದೆ? ಏನಿಲ್ಲ?- ಎನ್ನುವ ಚಿಂತೆಗಳನ್ನೆಲ್ಲ ಬಿಟ್ಟು, ನನ್ನ ಭೂಮಿಯ ಬಗ್ಗೆಯೇ ಯೋಚಿಸುವಂತಾಗಿದೆ.

ಚೀನ ನಂತರ ಇಟಲಿಯನ್ನು ಪ್ರವೇಶಿಸಿದ ಕೋವಿಡ್, ಯುಕೆಗೆ ಜನವರಿ ಕೊನೆಯ ವಾರದಲ್ಲಿ ಪ್ರವೇಶ ಕೊಟ್ಟಿತು.

ತಕ್ಷಣ ಭಾರತಕ್ಕೆ ಹೊರಡಲು ಅನುಕೂಲವಿದ್ದರೂ ಪ್ರಯಾಣದಲ್ಲಿ ಸೋಂಕು ತಗುಲುವ ಆತಂಕದಿಂದಾಗಿ ಇಲ್ಲಿಯೇ ಉಳಿದುಬಿಟ್ಟೆ. ಇಲ್ಲಿ ಕರ್ಫ್ಯೂ ಘೋಷಣೆಯಾದ ಮಾರನೆಯ ದಿನವೇ ಭಾರತೀಯ ಬಳಕೆಯ ವಸ್ತುಗಳು ಮಾರುಕಟ್ಟೆಯಲ್ಲಿ ಖಾಲಿಯಾದವು.

ಎಲ್ಲೆಡೆ panic buying ನಡೆದಿತ್ತು. ಸೂಪರ್‌ ಮಾರ್ಕೆಟ್ಟಿನ ಶೆಲ್ಫ್ ಗಳು ಖಾಲಿ ಖಾಲಿ. ಅನ್ನ ಊಟ ಮಾಡುವ ಅಭ್ಯಾಸವಿರುವ ನನಗೆ ಅಕ್ಕಿಯೇ ಸಿಗದಂತಾಯಿತು. ಕೊನೆಗೆ ಎರಡು ಪಟ್ಟು ಹಣ ತೆತ್ತು ಥೈಲ್ಯಾಂಡ್‌ ರೈಸ್‌ ಖರೀದಿಸಿದೆ.

Advertisement

ಅಗತ್ಯದ ವಸ್ತು ಖರೀದಿಸಲು ಹೊರಹೋಗದೆ ಒಂದು ತಿಂಗಳಾಯಿತು. ಲೋಕಲ್‌ ಲಂಡನ್‌ನ ಗೆಳತಿ ನನ್ನ ಜೊತೆ ಇದ್ದಾಳೆ. ಅವಳ ಮನೆಯವರ ಉತ್ತೇಜನದ ಮಾತುಗಳು ಸ್ಫೂರ್ತಿ ತುಂಬುತ್ತಿವೆ. ಪ್ರತಿದಿನ ಅಪ್ಪ- ಅಮ್ಮ, ಸಹೋದರಿಯ ಜೊತೆ ವಿಡಿಯೊ ಮಾತುಕತೆ ನಡೆಸುತ್ತೇನೆ. ಆತಂಕದ ದಿನಗಳು ಮುಂದುವರಿಯುತ್ತಿವೆ, ಆದರೂ ಧೈರ್ಯದಿಂದ ದಿನ ಕಳೆಯುತ್ತಿದ್ದೇನೆ.

– ದಾಮಿನಿ ಭಾಗವತ್‌

ಕರ್ಫ್ಯೂ ಮುರಿದರೆ ಒಂದೂವರೆ ಲಕ್ಷ ದಂಡ


ಸೌದಿ ಅರೇಬಿಯಾದ ಜನಸಂಖ್ಯೆ ಬಹಳ ಕಡಿಮೆ. ಆದರೆ, ಪ್ರತಿದಿನ ಮೆಕ್ಕಾ ಕ್ಷೇತ್ರಕ್ಕೆ ಜನಸ್ತೋಮ ಹರಿದುಬರುತ್ತದೆ. ಮಾರ್ಚ್‌ 2ರಂದು ಇಲ್ಲಿ ಮೊದಲ ಕೋವಿಡ್ ಕೇಸ್‌ ಪತ್ತೆಯಾಯಿತು. ಸೌದಿಯ ಮೊದಲ ಸೋಂಕಿತ ಪ್ರಜೆ ಇರಾನ್‌ನಿಂದ ಬಹ್ರೈನ್‌ ಮುಖಾಂತರ ತಾಯ್ನಾಡಿಗೆ ವಾಪಸಾದರು. ಈಗ ಇಲ್ಲಿ ಸೋಂಕು ಉಲ್ಪಣಗೊಂಡಿದೆ.

ಮೆಕ್ಕಾ ಮದೀನಾದ ಪ್ರವೇಶ ಬಂದ್‌ ಮಾಡಿ ಬಹಳ ದಿನಗಳೇ ಆದವು. ಹಲವು ನಗರಗಳಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಯಾಗಿದೆ. ಕರ್ಫ್ಯೂ ನಿಯಮ ಉಲ್ಲಂಘಿಸಿದರೆ, 10,000 ಸೌದಿ ರಿಯಾಲ್‌ ದಂಡ, ಅಂದರೆ ಸರಿ ಸುಮಾರು ಒಂದೂವರೆ ಲಕ್ಷ ರೂ. ಬೀಳುತ್ತೆ! ಎರಡನೇ ಸಲ ಉಲ್ಲಂಘಿಸಿದರೆ ಇದರ ಎರಡು ಪಟ್ಟು, ಮೂರನೇ ಬಾರಿ ಉಲ್ಲಂಘಿಸಿದರೆ ಜೈಲು ಶಿಕ್ಷೆಗೆ ಗುರಿಮಾಡುತ್ತಾರೆ.

ವರ್ಕ್‌ ಫ್ರಂ ಹೋಮ್‌ ಸಾಗುತ್ತಿದೆ. ಫ್ರೀ ಟೈಮ್‌ ಅಷ್ಟೊಂದು ಸಿಗುತ್ತಿಲ್ಲ. ಅಲ್ಪವಿರಾಮದಲ್ಲಿ ಚಲನಚಿತ್ರ ವೀಕ್ಷಣೆ, ಭಾರತದಲ್ಲಿ ನೆಲೆಸಿರುವ ಆತ್ಮೀಯರ ಜೊತೆ ಮಾತುಕತೆ ನಡೆಸುತ್ತೇವೆ.  ಸೌದಿಯ ಸ್ಥಿತಿ ಪ್ಯಾನಿಕ್‌ ಆಗಿಲ್ಲ. ಇಲ್ಲಿಯ ತನಕ ರಾಜಮನೆತನದ ಸರಕಾರ ಚೆನ್ನಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ.

ಸ್ಯಾನಿಟೈಸರ್‌, ಗ್ಲೌಸ್‌ ಇಲ್ಲದೆ, ಸೂಪರ್‌ ಮಾರ್ಕೆಟ್‌ ಪ್ರವೇಶಿಸುವಂತಿಲ್ಲ. ಆರೋಗ್ಯ ಸಚಿವಾಲಯ ನಮ್ಮ ಕಾಳಜಿಗಾಗಿ ನಿತ್ಯ ಎರಡು ಮೆಸೇಜುಗಳನ್ನು ಕಳಿಸುತ್ತದೆ. ಇಲ್ಲಿ ಎಲ್ಲರೂ ಜಾಗೃತರಾಗಿದ್ದಾರೆ. ಆತಂಕದ ವಾತಾವರಣ ಇಲ್ಲ.
– ಡಾ. ವಾಣಿ ಸಂದೀಪ್‌

ಅಮೆರಿಕ ತಡವಾಗಿ ಎಚ್ಚೆತ್ತುಕೊಂಡಿತೇ?


ಅವತ್ತು ಮಾರ್ಚ್‌ 10. ನಮ್ಮ ಸಮುದಾಯದಲ್ಲಿರುವ ಶಾಲೆಯ ವ್ಯಕ್ತಿಯೊಬ್ಬರು ಕೋವಿಡ್ ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಕಾರಣ, ಶಾಲೆಯನ್ನು ಮುಚ್ಚಲಾಯಿತು. ಇದು ನಮಗೆ ಬಂದ ಮೊದಲ ಎಚ್ಚರಿಕೆ ಗಂಟೆ. ಆದರೂ ಶರವೇಗದ ಸರದಾರನನ್ನು ಮೀರಿಸಿ ಹಬ್ಬುತಿದ್ದ ಸೋಂಕನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳೆಲ್ಲಾ ತಡವಾಯಿತೇನೋ ಎಂಬ ಆತಂಕ ನಮ್ಮೆಲ್ಲರಲ್ಲಿ ಮನೆಮಾಡಿತ್ತು.

ಮರುದಿನವೇ ಮುಂಜಾಗ್ರತೆಯಿಂದ ಅಗತ್ಯವಿದ್ದ ವಸ್ತುಗಳನ್ನು ಖರೀದಿಸಿ, ಗೂಡು ಸೇರಿದೆವು. ಅಂದಿನಿಂದ ಇಂದಿನವರೆಗೂ 2-3 ಬಾರಿಯಷ್ಟೇ ನೀರು, ಹಾಲು ಇತ್ಯಾದಿ ವಸ್ತುಗಳನ್ನು ತರಲು ಹೊರ ಹೋಗಿರುವುದು.

ಶಾಲೆಗಳೆಲ್ಲ ಆನ್‌ಲೈನ್‌ ತರಗತಿ ಆರಂಭಿಸಿವೆ. ಬೆಳಗ್ಗೆ 8.30ಕ್ಕೆ ತರಗತಿಗಳು ಆರಂಭವಾಗುತ್ತವೆ. ಟೀಚರ್‌ ಸಮಯಕ್ಕೆ ಸರಿಯಾಗಿ ಹಾಜರಾತಿ ತೆಗೆದುಕೊಂಡು ಅಂದಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿ, ಅಗತ್ಯವಿದ್ದರೆ ಸಂಪರ್ಕಿಸಲು ಸೂಚಿಸುತ್ತಾರೆ. ನಂತರ ಎಲ್ಲರೂ ಅವರವರ ಕಾರ್ಯದಲ್ಲಿ 4-5 ಗಂಟೆ ತಲ್ಲೀನರಾಗುತ್ತಾರೆ. ಇನ್ನು ಸಂಜೆ ವೇಳೆ ಪಠ್ಯೇತರ ಚಟುವಟಿಕೆಗಳು ಜೂಮ್‌ನಲ್ಲಿ ಚಾಲ್ತಿಯಲ್ಲಿದೆ . ಯೋಗ- ಧ್ಯಾನದ ಅಭ್ಯಾಸ ನಿರಂತರ ನಡೆಯುತ್ತಿದೆ.

ವಾಲ್‌ಮಾರ್ಟ್‌, ಕಾಸ್ಟ್ ಕೋ ಇನ್ನಿತರ ಅಂಗಡಿಗಳಲ್ಲಿ ಜನಸಂದಣಿ ಕಡಿಮೆಯಾಗಿದೆ. ಸಾವಿರಾರು ಮೈಲು ದೂರಲ್ಲಿರುವ ತಾಯ್ನಾಡಿನ ಬಗ್ಗೆ ಆತಂಕ ಹಾಗೂ ಅಲ್ಲಿರುವವರ ಅರೋಗ್ಯ ಕಾಳಜಿ ನಮಗೆ ಮೊದಲಿಗಿಂತ ಹೆಚ್ಚಾಗಿದೆ.
– ರೇಖಾ ದಯಾನಂದ್‌

ವರ್ಚುವಲ್‌ ಕ್ಲಾಸಸ್‌ಗಳಲ್ಲೇ ಶಿಕ್ಷಣ


ನಮ್ಮ ಫ್ಯಾಮಿಲಿ ಇರೋದು ಅಮೆರಿಕದ ಓಕ್ಲಾಹೋಮಾದ ತುಲ್ಸಾದಲ್ಲಿ. ನಾವಿರುವ ಪ್ರದೇಶವೀಗ ಲಾಕ್‌ ಡೌನ್‌ ಆಗಿದ್ದು, ತೀರಾ ಅಗತ್ಯವಿದ್ದರೆ ಅಥವಾ ಕೆಲಸಕ್ಕೆ ಮಾತ್ರ ಹೊರಗೆ ಹೋಗಬಹುದು.

ನನ್ನ ಹಿರಿಯ ಮಗಳು ಮೆಡಿಕಲ್‌ ಕಾಲೇಜ್‌ 1ನೇ ವರ್ಷದಲ್ಲಿದ್ದರೆ, ಎರಡನೇ ಮಗಳು 10ನೇ ತರಗತಿಯಲ್ಲಿದ್ದಾಳೆ. ಇಬ್ಬರೂ ಆನ್‌ಲೈನ್‌ ಮೂಲಕವೇ ತರಗತಿಗೆ ಹಾಜರಾಗುತ್ತಿದ್ದಾರೆ. ವರ್ಚುವಲ್‌ ಕ್ಲಾಸಸ್‌ಗಳಲ್ಲಿನ ಕೊರತೆಯೆಂದರೆ, ಮಕ್ಕಳಿಗೆ ಶಿಕ್ಷಕರಿಂದ ಹೆಚ್ಚು ನಿರ್ದೇಶನ ಸಿಗುವುದಿಲ್ಲ. ಅಲ್ಲದೇ ಗೆಳೆಯರ ಜತೆ ಒಡನಾಡಲು ಆಗುವುದಿಲ್ಲ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಭಾರತ ಮತ್ತು ಅನ್ಯದೇಶಗಳಲ್ಲಿರುವ ಸಂಬಂಧಿಗಳೊಂದಿಗೆ ವಿಡಿಯೋ ಚಾಟ್‌ ಮಾಡುತ್ತಿದ್ದೇವೆ. ಟೈಂಪಾಸ್‌ಗಾಗಿ ಗಾರ್ಡನಿಂಗ್‌ ಮಾಡುತ್ತೇವೆ ಇಲ್ಲವೇ ಸಿನೆಮಾ ನೋಡುತ್ತಿದ್ದೇವೆ. ನಮ್ಮ ದಿನನಿತ್ಯದ ಬದುಕಲ್ಲಿ ಎದುರಾಗುತ್ತಿರುವ ಸವಾಲುಗಳೆಂದರೆ, ಕಿರಾಣಿ ಸಾಮಾನು ತರುವುದಕ್ಕೂ ಹಿಂದೇಟು ಹಾಕುವಂತಾಗಿರುವುದು.

ನಾವಿರುವ ಏರಿಯಾದಲ್ಲಿ, ಅನೇಕ ಆನ್‌ಲೈನ್‌ ಪ್ಲಾಟ್‌ಫಾರ್ಮ್ಗಳನ್ನು ಸ್ಥಾಪಿಸಲಾಗಿದ್ದು, ಕಿರಾಣಿ ಮತ್ತು ಇತರೆ ಅಗತ್ಯವಸ್ತುಗಳು ನೇರವಾಗಿ ಮನೆಗೇ ಬರುತ್ತವೆ ಅಥವಾ ಕಾರ್‌ಪಿಕಪ್‌ನಲ್ಲಿ ಸಿಗುತ್ತಿವೆ. ಸದ್ಯಕ್ಕೆ, ಓಕ್ಲಾಹೋಮಾದಲ್ಲಿ 2000ಕ್ಕೂ ಅಧಿಕ ಕೋವಿಡ್ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ನೂರರ ಸನಿಹವಿದೆ.

– ರೇಖಾ ವೆಂಕಟೇಶ್‌

ಸಂಪೂರ್ಣ ಲಾಕ್‌ ಡೌನ್‌ ಇಲ್ಲ


ಚಿಕ್ಕದಾದರೂ ಸಸ್ಯಸಮೃದ್ಧ ದೇಶ ನಮ್ಮದು.ಕೋವಿಡ್‌ ಸೋಂಕು ಯುರೋಪನ್ನು ಬಿಗಿಯತೊಡಗಿದಾಗ ಫಿನ್ಲಂಡ್‌ ಅದನ್ನು ಸೂಕ್ಷ್ಮವಾಗಿ ಗಮನಿಸಿ ಕಳವಳಗೊಂಡಿತ್ತು. ನಿಯಂತ್ರಣ ಕಾರ್ಯ ಸ್ವಲ್ಪ ತಡವಾಗಿಯೇ ಶುರುವಾಗಿ, ಅತಿ ಹೆಚ್ಚು ವಿದೇಶೀಯರಿರುವ ಹೆಲ್ಸಿಂಕಿಯಲ್ಲಿ ಇದರ ಹಾವಳಿ ಹೆಚ್ಚಾಗಿದೆ.

ಇಲ್ಲಿನ ಜನಸಂಖ್ಯೆ ಕೇವಲ ಐವತ್ತು ಲಕ್ಷ. ಆ ಪ್ರಮಾಣದಲ್ಲಿ ನೋಡಿದರೆ ಈಗಾಗಲೇ ಮೂರು ಸಾವಿರ ಜನಕ್ಕೆ ಕೋವಿಡ್‌ ತಗುಲಿದೆ. (ಇದರಿಂದ ತೀರಿ ಹೋದ ಅರವತ್ತೈದು ಜನರ ವಯೋಪ್ರಮಾಣ 78 ರಿಂ 90.) ಚಿಕಿತ್ಸೆ ಈಗೀಗ ವೇಗ ಪಡೆದುಕೊಂಡಿದೆ.

ನಮ್ಮ ಯುವ ಪ್ರಧಾನಿ ಸನ್ನಾ ಮರಿನ್‌ ಕೊಂಚ ಅನನುಭವಿಯಾದರೂ ಈಗ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸ್ತಾ ಇದ್ದಾರೆ. ಹಾಗೆ ಇಲ್ಲಿ ಸಂಪೂರ್ಣ ಲಾಕ್‌ ಡೌನ್‌ ಇಲ್ಲ. ನಾವೆಲ್ಲ ಮನೆಯಿಂದ ಕೆಲಸ ಮಾಡುತ್ತೇವೆ, ಜನ ತಾವಾಗಿಯೇ ಸ್ವ ಇಚ್ಛೆಯಿಂದ ಅಂತರ ಕಾಯ್ದುಕೊಂಡೇ ಹೊರಗಿನ ಖರೀದಿ, ವಾಕಿಂಗ್‌ ಇತ್ಯಾದಿ ಮಾಡ್ತಾರೆ.

ಶಾಲೆ, ಕಾಲೇಜು ಪರೀಕ್ಷೆ ಎಲ್ಲವೂ ಆನ್‌ ಲೈನ್‌ ನಡೆಯುತ್ತಿವೆ. ಶಾಲೆಗಳಿಂದ ಈ  ಮೊದಲಿನ ಹಾಗೆಯೇ ಮಕ್ಕಳಿಗೆ ಆರೋಗ್ಯಕರ ಊಟ,  ಹಾಗೆಯೇ ಆಸ್ಪತ್ರೆ, ಪೋಲಿಸ್‌, ಅಥವಾ ಇನ್ನಾವುದೇ ಸಾಮಾಜಿಕ ಸರ್ವೀಸಿನಲ್ಲಿದ್ದವರ ಮಕ್ಕಳಿಗೆ ಅತ್ಯಂತ ಪುಷ್ಟಿಕರ ಊಟವನ್ನು ಒದಗಿಸುತ್ತಾರೆ!

ಇಷ್ಟೆಲ್ಲ ಇದ್ದರೂ ಕೋವಿಡ್ ದೇಶದ ಆರ್ಥಿಕತೆಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ಲೇ ಆಫ್ ಗಳು, ಚಿಕ್ಕ ಬಿಸಿನೆಸ್‌, ರೆಸ್ಟುರಾಗಳ ಮುಚ್ಚುವಿಕೆ ಇದೆಲ್ಲ ಅನಿವಾರ್ಯವಾಗಿವೆ. ಆದರೂ ಭಯವನ್ನು  ಹಿಮ್ಮೆಟ್ಟಿ ಕೋವಿಡ್‌ ಎದುರಿನ ಯುದ್ಧಕ್ಕೆ ಫಿನ್ಲಂಡ್‌ ಅಣಿಯಾಗಿದೆ.
– ವರ್ಷಾ ಶೂರ್ಪಾಲಿ

Advertisement

Udayavani is now on Telegram. Click here to join our channel and stay updated with the latest news.

Next