ಮೈಸೂರು: ಜಿಲ್ಲೆಯಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಹೊಸದಾಗಿ ಸೋಂಕಿತರು ದಾಖಲಾಗದ ಹಿನ್ನೆಲೆ ಮೈಸೂರುಇನ್ನೊಂದು ದಿನದಲ್ಲಿ ಆರೆಂಜ್ ಝೋನ್‌ನತ್ತ ಹೊರಳಲಿದೆ. ಸಕ್ರಿಯ ಸೋಂಕಿತರ ಸಂಖ್ಯೆ ಶೂನ್ಯದತ್ತ ಸಾಗಿದೆ.
ರೆಡ್‌ಝೋನ್ ಹಣೆಪಟ್ಟಿ ಹೊತ್ತಿರುವ ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಆತಂಕ ಕಡಿಮೆಯಾಗುತ್ತಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 2ಕ್ಕೆ ಇಳಿಕೆಯಾಗಿದೆ. ಇದರ ಜೊತೆಗೆ ಕಳೆದ 14 ದಿನಗಳಿಂದ ಹೊಸ ಪ್ರಕರಣಗಳು ದಾಖಲಾಗದಿರುವುದು ಜಿಲ್ಲೆಯ ಜನತೆಯಲ್ಲಿ ನೆಮ್ಮದಿ ತಂದಿರುವುದರ ಜೊತೆಗೆ, ಕಿತ್ತಳೆ ವಲಯದತ್ತ ಹೊರಳುವ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಒಟ್ಟು 90 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡವು. ಅವುಗಳಲ್ಲಿ 74 ನಂಜನಗೂಡಿನ ಜ್ಯುಬಿಲಿ ಯಂಟ್ ಕಾರ್ಖಾನೆಗೆ ಸಂಬಂಧಿಸಿದ್ದಾಗಿದ್ದವು. ಇನ್ನುಳಿದವು ತಬ್ಲೀ ಜಮಾತೆ ಹಾಗೂ ಹೈದರಾಬಾದ್, ದುಬೈ ಮೂಲ ವಾಗಿದ್ದವು.
ಇಷ್ಟು ದೊಡ್ಡ ಸವಾಲನ್ನು ಮೈಸೂರಿನ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿ, ವೈರಾಣು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಿತು. ಹೀಗಾಗಿ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದರು. ಈಗ ಹೊಸ ಪ್ರಕರಣ ದಾಖಲಾಗದೇ ಇರುವುದು ಹಾಗೂ ಸೋಂಕಿತರ ಸಂಖ್ಯೆ 90 ಮೀರದಂತೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ.
ಆರೆಂಜ್ ಝೋನ್‌ಗೆ 1 ದಿನ ಬಾಕಿ: ರೆಡ್ ಝೋನ್ ಕಳಚಿ ಆರೆಂಜ್ ಝೋನ್‌ಗೆ ಬಡ್ತಿ ಪಡೆಯಲು ಮೈಸೂರಿಗೆ ಕೇವಲ ಒಂದು ದಿನವಷ್ಟೇ ಬಾಕಿಯಿದೆ. ಸತತ 14ನೇ ದಿನವೂ ಮೈಸೂರಲ್ಲಿ ಹೊಸ ಸೋಂಕಿತ ಪ್ರಕರಣ ಪತ್ತೆಯಾಗದೇ ಇರುವುದು ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಜನತೆಗೂ ಬಿಗ್ ರಿಲೀಫ್ ದೊರೆದಂತಾಗಿದೆ. ಕೋವಿಡ್-19 ಪ್ರೋಟೋಕಾಲ್ ಪ್ರಕಾರ ರೆಡ್‌ಝೋನ್ ಜಿಲ್ಲೆಯಲ್ಲಿ ಸತತ 14 ದಿನ ಹೊಸ ಸೋಂಕಿತ ಪ್ರಕರಣ ಕಂಡು ಬರದೇ ಇದ್ದರೆ, ಆ ಜಿಲ್ಲೆಯನ್ನು ಆರೆಂಜ್ ಝೋನ್ ಆಗಿ ಪರಿವರ್ತಿಸಲು ಅವಕಾಶವಿದೆ.
ಇದ ರಿಂದ ಜಿಲ್ಲೆಯ ಇನ್ನಷ್ಟು ಕ್ಷೇತ್ರಗಳಲ್ಲಿ ವಿನಾಯಿತಿ ದೊರೆಯಲಿದೆ. ವ್ಯಾಪಾರಕ್ಕೆ ಅವಕಾಶ ಸಾಧ್ಯತೆ: ಇದೀಗ ಮೈಸೂರಿನ 91 ವಾಣಿಜ್ಯ ರಸ್ತೆಗಳಲ್ಲಿ ದಿನಸಿ ಹಾಗೂ ಮೆಡಿಕಲ್ ಶಾಪ್ ಹೊರತು ಪಡಿಸಿ ಬೇರ್ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಆರೆಂಜ್ ಝೋನ್ ವ್ಯಾಪ್ತಿಗೆ ಬಂದರೆ ವ್ಯಾಪಾರ ವಹಿವಾಟಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಇಂದು ಇಬ್ಬರು ಗುಣಮುಖ: ಜಿಲ್ಲೆಯಲ್ಲಿ ಇದುವರೆಗೂ 5285 ಮಂದಿ ಮೇಲೆ ನಿಗಾ ಇಡಲಾಗಿದ್ದು, 4762 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಜೊತೆಗೆ ಕಳೆದ ನಾಲ್ಕೈದು ದಿನಗಳಿಂದ ಹೊರ ರಾಜ್ಯ, ವಿದೇಶಗಳಿಂದ ಆಗಮಿಸಿದ 521 ಮಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಒಟ್ಟು 90 ಮಂದಿ ಸೋಂಕಿತ ರಲ್ಲಿ 88 ಮಂದಿ ಗುಣಮುಖರಾಗಿದ್ದು, ಇಬ್ಬರು ಮಾತ್ರ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿರುವುದು ಗಮನಾರ್ಹ.
* ಸತೀಶ್ ದೇಪುರ