Advertisement

ಧೂಮಪಾನಿಗಳಿಗೆ ಸೋಂಕು ಆಪತ್ತು

03:16 AM Jul 30, 2020 | Hari Prasad |

ಹೊಸದಿಲ್ಲಿ: ಧೂಮಪಾನಿಗಳೇ ಎಚ್ಚರ! ನಿಮ್ಮನ್ನು ಕೋವಿಡ್ 19 ಸೋಂಕು ಮುತ್ತಿಕೊಳ್ಳುವ ಸಾಧ್ಯತೆಯೇ ಹೆಚ್ಚು.

Advertisement

ಧೂಮಪಾನ ಹಾಗೂ ತಂಬಾಕು ಪದಾರ್ಥಗಳನ್ನು ಸೇವಿಸುವವರಿಗೆ ಕೋವಿಡ್ 19 ಸೋಂಕು ಅತ್ಯಂತ ವೇಗವಾಗಿ ಹರಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ.

ತಂಬಾಕು ಉತ್ಪನ್ನಗಳ ಬಳಕೆದಾರರ ಕೈಯಿಂದ ಬಾಯಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಮಾತ್ರವಲ್ಲ ಅವರಲ್ಲಿ ಶ್ವಾಸಕೋಶದ ಸೋಂಕಿನ ತೀವ್ರತೆಯೂ ಅಧಿಕವಾಗಿರುತ್ತದೆ. ಹಾಗಾಗಿ, ಸೋಂಕು ತಗುಲಿದರೆ ಅಪಾಯ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ 19 ಸೋಂಕು ಆರಂಭದಲ್ಲಿ ದಾಳಿ ನಡೆಸುವುದೇ ಶ್ವಾಸಕೋಶದ ಮೇಲೆ. ಹೀಗಾಗಿ, ಧೂಮಪಾನಿಗಳಲ್ಲಿ ರೋಗದ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು ಅಥವಾ ಸಾವೂ ಸಂಭವಿಸಬಹುದು. ಧೂಮಪಾನ ಮಾಡುವಾಗ ಬೆರಳುಗಳು ತುಟಿಗಳನ್ನು ಸ್ಪರ್ಶಿಸುವ ಕಾರಣ ಸುಲಭವಾಗಿ ವೈರಸ್‌ ದೇಹದೊಳಕ್ಕೆ ಪ್ರವೇಶಿಸುತ್ತದೆ. ಹೀಗಾಗಿ ತಂಬಾಕು ಉತ್ಪನ್ನಗಳನ್ನು ಬಳಸದಿರುವುದೇ ಉತ್ತಮ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

24 ಗಂಟೆಗಳಲ್ಲಿ 48,513 ಪ್ರಕರಣ
ದೇಶದ ಕೋವಿಡ್ 19 ಸೋಂಕಿತರ ಸಂಖ್ಯೆ ಕೇವಲ ಎರಡೇ ದಿನಗಳಲ್ಲಿ 14ರಿಂದ 15 ಲಕ್ಷಕ್ಕೇರಿದ್ದು, 24 ಗಂಟೆಗಳ ಅವಧಿಯಲ್ಲಿ ಮತ್ತೆ 48,513 ಮಂದಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರದಿಂದ ಬುಧವಾರದವರೆಗೆ 768 ಸೋಂಕಿತರು ಅಸುನೀಗಿದ್ದಾರೆ.

Advertisement

ಸಮಾಧಾನ ಪಟ್ಟುಕೊಳ್ಳುವ ಸಂಗತಿಯೆಂದರೆ, ಗುಣಮುಖ ಪ್ರಮಾಣದಲ್ಲಾಗುತ್ತಿರುವ ಸುಧಾರಣೆ. ಈವರೆಗೆ 9.88 ಲಕ್ಷಕ್ಕೂ ಹೆಚ್ಚು ಮಂದಿ ವಾಸಿಯಾಗಿ ಮನೆಗೆ ಮರಳಿದ್ದು, ಗುಣಮುಖ ಪ್ರಮಾಣ ಶೇ. 64.51ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೇವಲ 59 ರೂ.ಗೆ ಫೆವಿವಿರ್‌ ಟ್ಯಾಬ್ಲೆಟ್‌
ಹೆಟಿರೋ ಔಷಧ ಕಂಪೆ‌ನಿಯು ಅಲ್ಪಪ್ರಮಾಣದಿಂದ ಮಧ್ಯಮ ಪ್ರಮಾಣದ ಕೋವಿಡ್ 19 ಸೋಂಕಿತರಿಗೆ ನೀಡಲು ಫೆವಿವಿರ್‌ ಎಂಬ ಮಾತ್ರೆಯನ್ನು ಬುಧವಾರ ಬಿಡುಗಡೆ ಮಾಡಿದೆ. ಈ ಜೆನೆರಿಕ್‌ ಮಾತ್ರೆ ಕೇವಲ 59 ರೂ.ಗಳಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಫೆವಿಪಿರವಿರ್‌ ಔಷಧಕ್ಕೆ ಸಂಬಂಧಿಸಿ ಈಗಾಗಲೇ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯದಿಂದ ಕಂಪೆನಿಗೆ ಅನುಮತಿ ದೊರೆತಿದೆ. ಫೆವಿವಿರ್‌ ಎನ್ನುವುದು ಕೊವಿಫಿರ್‌ ಬಳಿಕ ಕಂಪೆನಿ ತಯಾರಿಸಿರುವ ಎರಡನೇ ಔಷಧವಾಗಿದೆ. ಬುಧವಾರದಿಂದಲೇ ಎಲ್ಲ ಔಷಧ ಅಂಗಡಿಗಳಲ್ಲಿ ಹಾಗೂ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಇದು ಲಭ್ಯವಿರಲಿದೆ ಎಂದು ಕಂಪೆನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next