ಪಣಜಿ: ಡಿಸೆಂಬರ್ 17 ರಂದು ಬ್ರಿಟನ್‍ನಿಂದ ಗೋವಾಕ್ಕೆ ಆಗಮಿಸಿದ್ದ 8 ವರ್ಷದ ಬಾಲಕನಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಇದು ಗೋವಾದಲ್ಲಿ ಕಂಡುಬಂದ ಮೊದಲ ಕೋವಿಡ್ ರೂಪಾಂತರಿ ಪ್ರಕರಣವಾಗಿದೆ. ಪುಣೆಗೆ ಕಳುಹಿಸಿದ್ದ ಈ ಬಾಲಕನ ವರದಿ ಡಿಸೆಂಬರ್ 27 ರಂದು ಬಂದಿದೆ.
ಒಮಿಕ್ರಾನ್ ರೂಪಾಂತರಿಗೆ ಕಡಿವಾಣ ಹಾಕಲು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ ಮುಂಜಾಗೃತ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾದಲ್ಲಿ ಇದುವರೆಗೂ ನೈಟ್‍ಕರ್ಫ್ಯೂ ಯಾಕೆ ಜಾರಿಗೊಳಿಸಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
ಗೋವಾದಲ್ಲಿ ಈಗಷ್ಟೇ ಪ್ರವಾಸಿ ಸೀಜನ್ ಆರಂಭಗೊಂಡಿದ್ದು, ಲಾಕ್‍ಡೌನ್ ತೆರವಿನ ನಂತರ ಇದೀಗ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಗೋವಾ ಬೀಚ್ ಮತ್ತು ಪ್ರವಾಸಿ ತಾಣಗಳು ಹೊಸ ವರ್ಷ ಸಂಭ್ರಮಾಚರಣೆಯ ಕೇಂದ್ರವಾಗಿದೆ. ರಾಜ್ಯದಲ್ಲಿ ಎಲ್ಲ ಹೋಟೆಲ್‍ಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ಆದರೆ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಮಾತ್ರ ಕರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಕಂಡು ಬರುತ್ತಿದೆ.
ತಕ್ಷಣ ಕ್ರಮ ಕೈಗೊಳ್ಳುತ್ತೇವೆ: ರಾಣೆ
ರಾಜ್ಯದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ದೃಢಪಟ್ಟ ನಂತರ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಪ್ರತಿಕ್ರಿಯೆ ನೀಡಿ, ಪ್ರೋಟೋಕಾಲ್ ಗಳ ಪ್ರಕಾರ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಜನರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದಿದ್ದಾರೆ.