ಮಣಿಪಾಲ: ಕೋವಿಡ್-19 ಸೋಂಕು ಪ್ರಸರಣ ಕುರಿತಾಗಿ ದಿನ ಕಳೆದಂತೆ ಹೊಸ ಸಂಗತಿಗಳು ಬಯಲಾಗುತ್ತಿದ್ದು, ಕೆಲವು ದೇಶಗಳಲ್ಲಿ ಮೊದಲ ಪ್ರಕರಣ ದಾಖಲಾಗುವ ಮುನ್ನವೇ ಸೋಂಕು ಹರಡುವಿಕೆ ಪ್ರಾರಂಭವಾಗಿತ್ತು ಎನ್ನಲಾಗುತ್ತಿದೆ. ಈ ಹಿಂದೆ ಇದೇ ಅಭಿಪ್ರಾಯವನ್ನು ಜಪಾನ್ ಹೇಳಿದ್ದು, ಇದೀಗ ಫ್ರಾನ್ಸ್ ಸಹ ದೇಶದ ಮೊದಲ ಸೋಂಕಿತ ವ್ಯಕ್ತಿ ಬೇರೆಯೇ ಇದ್ದಾನೆ ಎಂದಿದೆ.
ಹೌದು ಈ ಕುರಿತು ಫ್ರೆಂಚ್ ವಿಜ್ಞಾನಿಗಳೇ ಸ್ವತಃ ಮಾಹಿತಿ ಹಂಚಿಕೊಂಡಿದ್ದು, ದೇಶದಲ್ಲಿ ಡಿಸೆಂಬರ್ 27ರಂದೇ ವ್ಯಕ್ತಿಯೊರ್ವನಿಗೆ ಸೋಂಕು ಪತ್ತೆಯಾಗಿದ್ದು, ಪ್ಯಾರಿಸ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಷ್ಟ್ರಗಳು ತಾವು ಭಾವಿಸಿದಕ್ಕಿಂತ ಮೊದಲೇ ಸೋಂಕಿಗೆ ತುತ್ತಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ಯಾರಿಸ್‌ನ ಆಸ್ಪತ್ರೆಗೆ ಡಿಸೆಂಬರ್ 27ರಂದು ಫಿಶ್‌ಮಾಂಗರ್ (42) ಎಂಬ ವ್ಯಕ್ತಿ ದಾಖಲಾಗಿದ್ದು, ಆತ ತೀವ್ರವಾದ ಕೆಮ್ಮು, ತಲೆನೋವು ಮತ್ತು ಜ್ವರವನ್ನು ಹೊಂದಿದ್ದ . ಆತನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದು, ವೇಗವಾಗಿ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಡಿಸೆಂಬರ್ 29ರಂದೇ ಡಿಸ್ಟಾರ್ಜ್ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆತ ಬಿಡುಗಡೆಗೊಂಡ ಕೆಲ ದಿನಗಳ ನಂತರ ಪರೀಕ್ಷೆ ವರದಿ ಬಂದಿದ್ದು, ಆತನಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು ಎನ್ನಲಾಗಿದೆ.
ಅಮೆರಿಕದಲ್ಲೂ ಮೊದಲ ಪ್ರಕರಣ ದಾಖಲಾಗುವುದಕ್ಕಿಂತ ಬಹಳ ಹಿಂದೆಯೇ ಸೋಂಕು ಪ್ರಸರಣ ಆರಂಭವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ ರಾಜ್ಯಗಳು ಇದಕ್ಕೆ ಹೊರತಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದು, ಸೋಂಕಿನಿಂದ ಫೆಬ್ರವರಿ ಆರಂಭದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂದು ಇಲ್ಲಿನ ವೈದ್ಯಕೀಯ ಪರೀಕ್ಷಕರ ಕಚೇರಿ ಇತ್ತೀಚೆಗಷ್ಟೇ ತಿಳಿಸಿದೆ.