ಹಿರೇಬಾಗೇವಾಡಿ: ವರ್ಷಕ್ಕೊಮ್ಮೆ ಬರುವ ಮದುವೆ ಸೀಸನ್‌ಲ್ಲಿ ದುಡಿದು ಬದುಕು ಕಟ್ಟಿಕೊಂಡಿದ್ದ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್‌ಗಳ ಮಂದಹಾಸವನ್ನೇ ಕೋವಿಡ್ 19 ಕಸಿದುಕೊಂಡಿದೆ.
ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಛಾಯಾಗ್ರಹಣ ಮತ್ತು ಚಿತ್ರೀಕರಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ಗಳು ಬ್ಯಾಂಕ್ ಸಾಲ ಅಥವಾ ಕೈ ಸಾಲ ಮಾಡಿಕೊಂಡು ಸ್ಟುಡಿಯೋಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಇನ್ನು ಕೆಲವರು ಇತರೆ ಕೆಲಸದಲ್ಲಿದ್ದುಕೊಂಡು ಕೇವಲ ಮದುವೆ, ಜಾತ್ರೆ ಸಮಯದಲ್ಲಿ ಕೆಲಸ ಮಾಡುತ್ತಿದ್ದರು. ಫೋಟೋಗ್ರಾಫರ್‌ಗಳಿಗೆ ವರ್ಷದ ಎಲ್ಲ ದಿನವೂ ಕೆಲಸ ಇರುವುದಿಲ್ಲ. ಮೂರು ತಿಂಗಳು ಮಾತ್ರ ಸೀಸನ್ ಇರುತ್ತದೆ. ಮುಖ್ಯವಾಗಿ ಮದುವೆ, ಜಾತ್ರೆ ಮುಂತಾದ ಶುಭ ಕಾರ್ಯಗಳು ನಡೆಯುವುದು ಬೇಸಿಗೆ ವೇಳೆ. ಅದರಲ್ಲೂ ಪ್ರಮುಖವಾಗಿ ಮಾರ್ಚ್‌ನಿಂದ ಜೂನ್ ಆರಂಭದ ವರೆಗೆ ಮದುವೆ ಕಾರ್ಯಕ್ರಮ ನಡೆಯುವುದರಿಂದ ವರ್ಷದ ಸಂಪಾದನೆಯನ್ನೆಲ್ಲಾ ಈ ತಿಂಗಳುಗಳಲ್ಲೇ ದುಡಿಯುತ್ತಿದ್ದರು.
ಆದರೆ, ಈ ಬಾರಿಯ ಸೀಸನ್ ಇವರ ಆದಾಯದ ಮೂಲಕ್ಕೆ ಕೊರೊನಾ ಕೊಕ್ಕೆ ಹಾಕಿದೆ. ಇವರಿಗೆ ಪ್ರಮುಖ ಆದಾಯ ಬರುವ ತಿಂಗಳುಗಳಲ್ಲೇ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ಅದನ್ನೇ ನಂಬಿಕೊಂಡು ತನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯಿಂದ ಬ್ಯಾಂಕ್‌ನಿಂದ ಸಾಲ ಪಡೆದು ಮನೆ ನಿರ್ಮಿಸಿಕೊಂಡು, ಮಕ್ಕಳ ವಿದ್ಯಾಭ್ಯಾಸದ ಹಾಗೂ ಕುಟುಂಬದ ಹೊಣೆ ಹೊತ್ತ ಫೋಟೋಗ್ರಾಫರ್‌ಗಳ ಗತಿಯೇನು? ಎಂಬುದು ಪ್ರಶ್ನೆಯಾಗಿದೆ. ಇನ್ನುಳಿದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರವು ತೋರುವ ಕಾಳಜಿಯನ್ನು ಫೋಟೋ ಮತ್ತು ವೀಡಿಯೋಗ್ರಾಫರ್‌ಗಳಿಗೆ ತೋರಿಸಬೇಕಾಗಿದೆ.
ಛಾಯಾಗ್ರಾಹಕರ ವೃತ್ತಿ ಜೀವನದಲ್ಲಿ ಖರ್ಚು, ಸಾಲ ಅನಿವಾರ್ಯ. ಅಂತದ್ದರಲ್ಲಿ ಈ ಸಲದ ಲಾಕ್‌ಡೌನ್‌ನಿಂದ ಛಾಯಾಗ್ರಾಹಕರ ವೃತ್ತಿ ಬದುಕಿಗೆ ದೊಡ್ಡ ಬರೆ-ಹೊರೆ ಬಿದ್ದಂತಾಗಿದೆ. ಸರಕಾರ ಇತರೆ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸಿದಂತೆ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೂ ಪ್ಯಾಕೇಜ್ ಘೋಷಣೆ ಮಾಡಬೇಕು. –
ಸತೀಸ್ ಶಟ್ಟಿ, ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ
ಲಾಕ್‌ಡೌನ್ ಆದೇಶದಿಂದಾಗಿ ವೃತ್ತಿ ಬದುಕಿಗೆ ಭಾರಿ ಹೊಡೆತ ಬಿದ್ದಿದೆ. ಇದರಿಂದಾಗಿ ದೈನಂದಿನ ಜೀವನವೇ ಕಷ್ಟಕರವಾಗಿದೆ. ಇನ್ನು ಸಾಲ ತೀರಿಸುವದು ಹೇಗೆ? ಎಂಬ ಚಿಂತೆಯಾಗಿದೆ. –
ರುದ್ರಯ್ನಾ ಪೂಜಾರ, ತಿಗಡಿ ಗ್ರಾಮದ ಫೋಟೋಗ್ರಾಫರ್
-ಶಿವಾನಂದ ಮೇಟಿ