Advertisement
ಮಂಗಳವಾರ ಒಂದೇ ದಿನ 1,463 ಮಂದಿಗೆ ಸೋಂಕು ದೃಢಪಟ್ಟಿದೆ. ಸಮಾಧಾನದ ಸಂಗತಿಯೆಂದರೆ, ಈವರೆಗೆ 1,226 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 29 ಮಂದಿ ಸಾವಿಗೀಡಾಗಿದ್ದು, ಮಹಾರಾಷ್ಟ್ರದಲ್ಲಿ 11, ಮಧ್ಯಪ್ರದೇಶದಲ್ಲಿ 7, ದಿಲ್ಲಿಯಲ್ಲಿ ನಾಲ್ವರು, ಕರ್ನಾಟಕದಲ್ಲಿ ಮೂವರು, ಆಂಧ್ರದಲ್ಲಿ ಇಬ್ಬರು ಹಾಗೂ ಪಂಜಾಬ್ ಮತ್ತು ತೆಲಂಗಾಣದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಸಾಕಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಯಾರಿಗೆ ಪರೀಕ್ಷೆಯ ಅಗತ್ಯವಿದೆಯೋ ಅವರನ್ನಷ್ಟೇ ಪರೀಕ್ಷೆ ಮಾಡಲಾಗುತ್ತಿದೆ. ಸರಕಾರ ನಿರ್ಧರಿಸಿರುವ ಮಾನದಂಡದ ವ್ಯಾಪ್ತಿಯೊಳಗೆ ಯಾರೆಲ್ಲ ಬರುತ್ತಾರೋ, ಅವರೆಲ್ಲರನ್ನೂ ಪರೀಕ್ಷಿಸಲಾಗುತ್ತಿದೆ. ಮಾನದಂಡವೇ ಇಲ್ಲದೇ ಪರೀಕ್ಷೆ ನಡೆಸಿದರೆ ಪರೀಕ್ಷಾ ಕಿಟ್‌ಗಳನ್ನು ಅಸಮರ್ಪಕವಾಗಿ ಬಳಸಿದಂತಾಗುತ್ತದೆ, ಅವುಗಳು ವೇಸ್ಟ್ ಆಗುತ್ತವೆ ಎಂದಿದ್ದಾರೆ. ತಜ್ಞರ ಶಿಫಾರಸಿನ ಮೇರೆಗೆ ನಾವು ಗಂಭೀರ ಉಸಿರಾಟದ ಸಮಸ್ಯೆ ಹೊಂದಿರುವವರನ್ನು, ಜ್ವರದಂಥ ಲಕ್ಷಣ ಇರುವವರನ್ನು ಕೂಡ ಕೋವಿಡ್ 19 ವೈರಸ್ ಪರೀಕ್ಷೆಯ ವ್ಯಾಪ್ತಿಗೆ ತಂದಿದ್ದೇವೆ. ಇನ್ನು ಮುಂದೆ ನಾವು ಕ್ಷಿಪ್ರ ರೋಗ ಲಕ್ಷಣ ಪತ್ತೆ ಕಿಟ್ ಗಳನ್ನು ಕೂಡ ಬಳಸಲಿದ್ದೇವೆ ಎಂದೂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
Related Articles
Advertisement
ಮತ್ತೆ 20 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿರುವ ಹಿಂದಿನ ವೈಜ್ಞಾನಿಕ ಕಾರಣದ ಬಗ್ಗೆ ಪ್ರಶ್ನಿಸಿದಾಗ, ವೈರಸ್ ವ್ಯಾಪಿಸುವಿಕೆಯ ಸರಪಳಿಯನ್ನು ಮುರಿಯಬೇಕೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರ ವರ್ತನೆಯಲ್ಲೇ ಬದಲಾವಣೆ ಆಗಬೇಕಾಗುತ್ತದೆ. ಅಂಥ ಬದಲಾವಣೆ ಮುಂದುವರಿಯಬೇಕೆಂದರೆ ಲಾಕ್ ಡೌನ್ ವಿಸ್ತರಣೆ ಮಾಡಬೇಕಾಗುತ್ತದೆ ಎಂದಿದ್ದಾರೆ.
ಹೆಚ್ಚು ಸರ್ಚ್ ಆಗಿದ್ದೇನು?ಕಳೆದ 3 ವಾರಗಳಿಂದಲೂ ಭಾರತವಿಡೀ ಲಾಕ್ ಡೌನ್ ಆಗಿದ್ದು, ಜನರೆಲ್ಲರೂ ಮನೆಯೊಳಗೇ ಬಂಧಿಯಾಗಿದ್ದಾರೆ. ಇದರ ಜತೆಗೇ ಕೋವಿಡ್ 19 ವೈರಸ್ ಭೀತಿಯೂ ಮನಸ್ಸುಗಳನ್ನು ಆವರಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಯಾವುದೇ ಸಂದೇಹ ಬಂದರೂ, ಮೊದಲು ನೆನಪಾಗು ವುದು ಗೂಗಲ್ ಅದರಂತೆ, ಲಾಕ್ ಡೌನ್ ನ ಈ ಅವಧಿಯಲ್ಲಿ ಜನರು ಗೂಗಲ್ ಸರ್ಚ್ ಮಾಡುವ ಮೂಲಕ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ. ಅಂದ ಹಾಗೆ, 3 ವಾರಗಳಲ್ಲಿ ಜನರು ಅತಿ ಹೆಚ್ಚು ಸರ್ಚ್ ಮಾಡಿದ್ದು ಯಾವುದಕ್ಕಾಗಿ ಎಂಬ ಮಾಹಿತಿ ಇಲ್ಲಿದೆ:
1. ಕೋವಿಡ್ 19 ವೈರಸ್ – 1 ಕೋಟಿಗೂ ಅಧಿಕ ಸರ್ಚ್
2. ಲಾಕ್ ಡೌನ್ ವಿಸ್ತರಣೆ- 10 ಲಕ್ಷಕ್ಕೂ ಅಧಿಕ
3. ಕೋವಿಡ್-19 – 7 ಲಕ್ಷಕ್ಕೂ ಹೆಚ್ಚು
4. ಹೈಡ್ರಾಕ್ಸಿಕ್ಲೋರೋಕ್ವಿನ್- 6 ಲಕ್ಷ ಸರ್ಚ್
5. ಕೋವಿಡ್ 19 ವೈರಸ್ ರೋಗಲಕ್ಷಣಗಳು- 5 ಲಕ್ಷಕ್ಕೂ ಅಧಿಕ
6. ಆರೋಗ್ಯಸೇತು ಅಪ್ಲಿಕೇಷನ್- 3.2 ಲಕ್ಷ
7. ವೈರಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ- 2 ಲಕ್ಷಕ್ಕೂ ಹೆಚ್ಚು
8. ಕೋವಿಡ್ 19 ವೈರಸ್ ಚಿಕಿತ್ಸೆ- ಸುಮಾರು 20,000
9. ಪಿಪಿಇ ಕಿಟ್ – 50,000 ಕ್ಕೂ ಹೆಚ್ಚು
10. ಹಾಟ್‌ಸ್ಪಾಟ್- 10,000 ಕ್ಕೂ ಅಧಿಕ ಸರ್ಚ್ 28 ದಿನಗಳ ಬಳಿಕ ಘೋಷಣೆ
ಯಾವುದೇ ಜಿಲ್ಲೆಯಲ್ಲೂ ಕೊನೆಯ ಸೋಂಕಿತನ ವರದಿ ನೆಗೆಟಿವ್ ಎಂದು ಬಂದ 28 ದಿನಗಳ ಬಳಿಕವೂ ಯಾವುದೇ ಪ್ರಕರಣ ಪತ್ತೆಯಾಗದೇ ಹೋದರೆ, ಅಂಥ ಜಿಲ್ಲೆಯನ್ನು ಕೋವಿಡ್ 19 ವೈರಸ್ ಮುಕ್ತ ಎಂದು ಘೋಷಿಸಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಆದರೆ, ಏ.20ರ ಬಳಿಕ ಲಾಕ್ ಡೌನ್ ಸಡಿಲಿಕೆ ಎದುರಿಸುವ ಜಿಲ್ಲೆಗಳನ್ನು ಯಾವ ಮಾನದಂಡದಲ್ಲಿ ಗುರುತಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. 606 ಆಸ್ಪತ್ರೆಗಳು: ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ ಒಟ್ಟು 602 ಆಸ್ಪತ್ರೆಗಳನ್ನು ಕೋವಿಡ್ 19 ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲೆಂದೇ ನಿಗದಿಪಡಿಸಲಾಗಿದೆ. ಇವುಗಳಲ್ಲಿ 1,06,719 ಐಸೋಲೇಷನ್ ಬೆಡ್ ಗಳಿದ್ದು, 12,024 ಐಸಿಯು ಹಾಸಿಗೆಗಳಿವೆ. ಈವರೆಗೆ 2.31 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಕ್ಕಿಂನಲ್ಲಿ ರಿಲ್ಯಾಕ್ಸ್
ಲಾಕ್‌ಡೌನ್‌ಗೆ ರಿಲ್ಯಾಕ್ಸ್ ನೀಡಿ, ಏಪ್ರಿಲ್ 21ರಿಂದ ಕೃಷಿ ಚಟುವಟಿಕೆಗಳಿಗೆ, ನಿರ್ಮಾಣ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಡಲು ಸಿಕ್ಕಿಂ ಸರಕಾರ ತೀರ್ಮಾನಿಸಿದೆ. ಸಚಿವ ಪ್ರೇಮ್‌ಸಿಂಗ್ ತಮಾಂಗ್ ಮಾತನಾಡಿ, ರೈತರು ಮಾರ್ಗ ಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಗುತ್ತಿಗೆದಾರರು ಕೂಡ ತಮ್ಮ ಕ್ಷೇತ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಥಳೀಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರ್ಮಾಣ ಚಟುವಟಕೆಗಳನ್ನು ಪುನರಾರಂಭಿಸಬಹುದು ಎಂದು ಹೇಳಿದ್ದಾರೆ. ಜಗತ್ತಿನಾದ್ಯಂತ 20 ಲಕ್ಷದತ್ತ ಸೋಂಕಿತರು
ಜಗತ್ತಿನ 200ರಷ್ಟು ದೇಶಗಳನ್ನು ವ್ಯಾಪಿಸಿರುವ ಕೋವಿಡ್ 19 ವೈರಸ್ ಈವರೆಗೆ 1.23 ಲಕ್ಷಕ್ಕಿಂತ ಹೆಚ್ಚು ಜನರ ಪ್ರಾಣವನ್ನು ಕಿತ್ತುಕೊಂಡಿದೆ. ವಿಶ್ವಾದ್ಯಂತ ಬರೋಬ್ಬರಿ 20 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಶೇ.70ರಷ್ಟು ಸಾವುಗಳು ಐರೋಪ್ಯ ಒಕ್ಕೂಟ ಒಂದರಲ್ಲಿಯೇ ಸಂಭವಿಸಿದೆ. ಇಲ್ಲಿ 81,474 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ, ಇರಾನ್ ನಲ್ಲಿ ಮಂಗಳವಾರ ಸಾವಿನ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ ಮೂರಂಕಿಯಿಂದ ಎರಡಂಕಿಗೆ ಇಳಿದಿದೆ. ಮಂಗಳವಾರ ಇಲ್ಲಿ 98 ಮಂದಿ ಮೃತಪಟ್ಟು, ಸಾವಿನ ಸಂಖ್ಯೆ 4,683ಕ್ಕೇರಿದೆ. ಇನ್ನು ಸ್ಪೇನ್ ನಲ್ಲಿ 24 ಗಂಟೆಗಳಲ್ಲಿ 567 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 18,056 ಹಾಗೂ ಸೋಂಕಿತರ ಸಂಖ್ಯೆ 1,72,541 ಆಗಿದೆ. ಯು.ಕೆ.ಯಲ್ಲಿ ಮಂಗಳವಾರ 778 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 12 ಸಾವಿರ ದಾಟಿದೆ.