ಚೆನ್ನೈ: ಮೊದಲ ಅ-19 ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಗೆಲುವಿಗೆ 212 ರನ್ನುಗಳ ಗುರಿ ಪಡೆದ ಭಾರತ 3ನೇ ದಿನದಾಟದಲ್ಲೇ 61.1 ಓವರ್‌ಗಳಲ್ಲಿ 8 ವಿಕೆಟಿಗೆ 214 ರನ್ ಬಾರಿಸಿತು. ನಿತ್ಯ ಪಾಂಡ್ಯ 51 ರನ್, 7ನೇ ಕ್ರಮಾಂಕದಲ್ಲಿ ಆಡಲಿಳಿದ ಎಡಗೈ ಬ್ಯಾಟರ್ ನಿಖೀಲ್ ಕುಮಾರ್ ಅಜೇಯ 55 ರನ್ ಬಾರಿಸಿ ಭಾರತವನ್ನು ದಡ ಮುಟ್ಟಿಸಿದರು.
ಲೆಗ್‌ಸ್ಪಿನ್ನರ್ ಮೊಹಮ್ಮದ್ ಎನಾನ್ 79ಕ್ಕೆ 6 ವಿಕೆಟ್ ಉಡಾಯಿಸಿ ಆಸ್ಟ್ರೇಲಿಯಾದ ದ್ವಿತೀಯ ಸರದಿಗೆ ಕಡಿವಾಣ ಹಾಕಿದರು. ಆಸೀಸ್ 214ಕ್ಕೆ ಆಲೌಟ್ ಆಯಿತು. ಚೇಸಿಂಗ್ ವೇಳೆ, ಮೊದಲ ಸರದಿಯ ಶತಕವೀರ ವೈಭವ್ ಸೂರ್ಯವಂಶಿ ಅವರನ್ನು ಭಾರತ ಬೇಗನೇ ಕಳೆದುಕೊಂಡಿತು. ಸೂರ್ಯವಂಶಿ ಗಳಿಸಿದ್ದು ಒಂದೇ ರನ್.
ಬೌಲಿಂಗ್ ಆರಂಭಿಸಿದ ಆಫ್ಸ್ಪಿನ್ನರ್ ಥಾಮಸ್ ಬ್ರೌನ್ ಭರ್ಜರಿ ಯಶಸ್ಸು ಸಾಧಿಸಿದರು. ವಿಹಾನ್ ಮಲ್ಹೋತ್ರಾ 11 ರನ್ನಿಗೆ ಆಟ ಮುಗಿಸಿದರು. 25 ರನ್ನಿಗೆ 2 ವಿಕೆಟ್ ಬಿತ್ತು. ನಿತ್ಯ ಪಾಂಡ್ಯ ಮತ್ತು ಕೆ.ಪಿ. ಕಾರ್ತಿಕೇಯ (36) 3ನೇ ವಿಕೆಟಿಗೆ 71 ರನ್ ಪೇರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಭಾರತದ ಗೆಲುವಿಗೆ ಇನ್ನೂ 100ರಷ್ಟು ರನ್ ಅಗತ್ಯವಿದ್ದಾಗ ನಿಖೀಲ್ ಕುಮಾರ್ ಚಾರ್ಜ್ ತೆಗೆದುಕೊಂಡರು. ಆಸ್ಟ್ರೇಲಿಯದ ಗೆಲುವಿನ ಆಸೆ ಕಮರಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 293 ಮತ್ತು 214. ಭಾರತ 296 ಮತ್ತು 214/8.