ನವದೆಹಲಿ: ಕೋವಿಡ್ 19 ಸೋಂಕು “ಅದೃಶ್ಯ ಶತ್ರು” ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹರಡುತ್ತಿರುವ ಮಾರಣಾಂತಿಕ ಕೋವಿಡ್ ಎರಡನೇ ಅಲೆ ವಿರುದ್ಧ ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಈ ಹೋರಾಟದಲ್ಲಿ ಗೆಲುವು ಸಾಧಿಸುವುದಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು
ಶುಕ್ರವಾರ(ಮೇ 14) ಪ್ರಧಾನಮಂತ್ರಿ ಕಿಸಾನ್ ಯೋಜನೆಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ನೂರು ವರ್ಷಗಳ ಬಳಿಕ ಮತ್ತೆ ಜಗತ್ತನ್ನು ಪರೀಕ್ಷೆಗೊಡ್ಡಲು ಭೀಕರ ಸೋಂಕು ಹರಡತೊಡಗಿದೆ. ನಮ್ಮ ಮುಂದೆ ಈಗ ಅದೃಶ್ಯ ಶತ್ರು ಇದೆ. ಅದು ಕೂಡಾ ವಿವಿಧ ರೂಪದಲ್ಲಿದೆ. ನಾವು ಈ ಎರಡನೇ ಅಲೆ ಸೋಂಕಿನ ವಿರುದ್ಧ ಕ್ರಿಪ್ರವಾಗಿ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈವರೆಗೆ ದೇಶದಲ್ಲಿ 18 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಜನರಿಗೆ ಆದಷ್ಟು ಶೀಘ್ರವಾಗಿ ಲಸಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಶ್ರಮವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಕೋವಿಡ್ ಶತ್ರುವಿನಿಂದಾಗಿ ಜನರು ತಮ್ಮ ಆಪ್ತರನ್ನು ಕಳೆದುಕೊಳ್ಳುವಂತಾಗಿದೆ. ದೇಶಾದ್ಯಂತ ಸಾವಿರಾರು ಮಂದಿ ಇದೇ ನೋವನ್ನು ಅನುಭವಿಸಿದ್ದಾರೆ. ನನಗೂ ಕೂಡಾ ನೋವಾಗುತ್ತಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.