Advertisement

ಬಡ ಮಹಿಳೆಯ ಪಿಂಚಣಿಯಲ್ಲೂ ಅನ್ಯಾಯ : ಜಿಲ್ಲಾ ಗ್ರಾಹಕ ನ್ಯಾಯಾಲಯ ಐತಿಹಾಸಿಕ ತೀರ್ಪು

12:02 PM Aug 23, 2022 | Team Udayavani |

ಉಡುಪಿ : ತನ್ನದಲ್ಲದ ತಪ್ಪಿಗಾಗಿ ಪಿಂಚಣಿ ಕಡಿತದ ಶಿಕ್ಷೆಗೊಳಗಾದ ಗೀತಾ ಕಾಂಚನ್‌ ಅವರಿಗೆ ಜಿಲ್ಲಾ ಬಳಕೆದಾರರ ನ್ಯಾಯಾಲಯವು ರಕ್ಷಣೆ ನೀಡಿ ತೀರ್ಪು ಪ್ರಕಟಿಸಿದೆ ಎಂದು ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್‌ ಶ್ಯಾನುಭಾಗ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಪಿಂಚಣಿದಾರರನ್ನೇ ಹೊಣೆಯಾ ಗಿರಿಸಿ ಶಿಕ್ಷೆ ನೀಡಿದ ಪ್ರಾವಿಡೆಂಟ್‌ ಫ‌ಂಡ್‌ (ಇಪಿಎಫ್ಒ) ಸಂಸ್ಥೆ ಎರಡು ವರ್ಷದಿಂದ ತಡೆ ಹಿಡಿದ ಎಲ್ಲ ಪಿಂಚಣಿ ಹಣವನ್ನು ಈ ಕೂಡಲೇ ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ ಎಂದ ಅವರು ಪ್ರಕರಣದ ಹಿನ್ನೆಲೆಯನ್ನು ವಿವರಿಸಿದರು. ಗೀತಾ ಕಾಂಚನ್‌ ಉಪಸ್ಥಿತರಿದ್ದರು.

ಹೆಜಮಾಡಿಯ ವಿಧವೆ ಗೀತಾ ಕಾಂಚನ್‌(68) ಅವರು ಕಷ್ಟಪಟ್ಟು ದುಡಿದು ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. 17 ವರ್ಷಗಳ ಕಾಲ ಹೆಜಮಾಡಿಯ ಖಾಸಗಿ ಬ್ಯಾಂಕ್‌ನಲ್ಲಿ ಅಟೆಂಡರ್‌ ಆಗಿ ಸೇವೆ ಸಲ್ಲಿಸಿ 2014ರಲ್ಲಿ ನಿವೃತ್ತಿ ಹೊಂದಿದರು. ಸೇವಾವಧಿಯುದ್ದಕ್ಕೂ ವೇತನದ ಮೊತ್ತದಲ್ಲಿ ಪಿಎಫ್ ಕಡಿತವಾಗುತ್ತಿತ್ತು. ನಿವೃತ್ತಿಯ ಮರು ತಿಂಗಳಿನಿಂದ ಸಿಗುತ್ತಿದ್ದ 1,756 ರೂ. ಪಿಂಚಣಿ ಮೊತ್ತದಲ್ಲಿ ಜೀವನ ಸಾಗಿಸುವುದು ಅಸಾಧ್ಯವಾದರೂ, ಔಷಧ, ಮತ್ತಿತರೆ ಖರ್ಚಿಗೆ ಈ ಮೊತ್ತ ಸಾಕಾಗುತ್ತಿತ್ತು.

ಇದಾಗಿ 6 ವರ್ಷಗಳ ಅನಂತರ ಮಹಿಳೆಗೆ ಇಪಿಎಫ್ಒ ಕಚೇರಿಯಿಂದ 2020ರ ಮೇ ತಿಂಗಳಿನಿಂದ ನಿಮ್ಮ ಮಾಸಿಕ ಪಿಂಚಣಿಯಲ್ಲಿ 500 ರೂ. ಕಡಿತಗೊಳಿಸಲಾಗಿದೆ ಎಂಬ ಸೂಚನೆ ಬಂತು. ಈ ಬಗ್ಗೆ ಪಿಎಫ್ ಕಚೇರಿಯಲ್ಲಿ ವಿಚಾರಿಸಿದಾಗ “ಕಳೆದ ಆರು ವರ್ಷಗಳಿಂದ ನಿಮಗೆ ಪ್ರತಿ ತಿಂಗಳೂ 500 ರೂ. ಗಳಷ್ಟು ಅಧಿಕ ಪಿಂಚಣಿ ಹಣವನ್ನು ಪಾವ ತಿಸಿರುವುದರಿಂದ ಈಗಾಗಲೇ ಪಾವತಿಸಿರುವ ಅಧಿಕ ಹಣ 50,147 ರೂ.ಗಳನ್ನು ಡಿಮಾಂಡ್‌ ಡ್ರಾಫ್ಟ್ ಮೂಲಕ ಹಿಂದಿರುಗಿಸಬೇಕು ಎಂದು ಹೇಳಿದರು. ಏಕೆಂದು ವಿಚಾ ರಿಸಿದಾಗ ಜಂಟಿ ಡಿಕ್ಲರೇಶನ್‌ (ಉದ್ಯೋಗದಾತರು ಕಾರ್ಮಿಕರಿಂದ ಪಿಂಚ ಣಿ ಸಂಬಂಧಿತ ವಂತಿಗೆಯನ್ನು ಪ್ರಾವಿಡೆಂಟ್‌ ಫ‌ಂಡ್‌ ಕಚೇರಿಗೆ ಸಲ್ಲಿಸುವ ಮೊದಲು ಅವರಿಂದ ಅನುಮತಿ ಕೇಳಿ ಸಲ್ಲಿಸುವ ದಾಖಲೆ) ದಾಖಲೆ ನಮ್ಮ ಕಡತದಲ್ಲಿಲ್ಲ. ಆಡಿಟ್‌ನಲ್ಲಿ ಆಕ್ಷೇಪಣೆಯಾಗಿದೆ. ಆ ಪ್ರತಿಯನ್ನು ಒದಗಿಸಿದಲ್ಲಿ ನಿಮಗೆ ಪಿಂಚಣಿ ನೀಡಬಹುದು ಎಂದರು. ಈ ದಾಖಲೆ ಬಗ್ಗೆ ತಾವು ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆ ದಾಖಲೆ ನಮ್ಮ ಬಳಿ ಇಲ್ಲವೆಂದು ತಿಳಿಸಿದರು. ಕಾನೂನು ರೀತಿಯಲ್ಲಿ ಹಣ ವಸೂಲಿ ಮಾಡುವ ಬಗ್ಗೆ ಇಪಿ ಎ ಫ್ಒ ಎಚ್ಚರಿಕೆ ನೀಡಿದಾಗ ಮಹಿಳೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು.

ಪಿಂಚಣಿ ತಡೆದಿದ್ದು ಅನ್ಯಾಯ
ಬ್ಯಾಂಕ್‌ನವರು ನೀಡಿದ್ದ ಜಂಟಿ ಡಿಕ್ಲರೇಶನ್‌ ದಾಖಲೆ ಆಧಾರದಲ್ಲಿಯೇ ಇಪಿಎಫ್ಒ ಸಂಸ್ಥೆ 1,755 ರೂ. ಪಿಂಚಣಿ ಎಂದು ನಿರ್ಧರಿಸಲಾಗಿದೆ. ಇಪಿಎಫ್ಒ ಅವರ ಕಡತದಿಂದ ದಾಖಲೆ ಕಾಣೆಯಾಗಿರುವುದಕ್ಕೆ ಗೀತಾ ಕಾಂಚನ್‌ ಅವರನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ. ದಾಖಲೆಯ ಪ್ರತಿಗಳು ಒಂದೋ ಅದನ್ನು ಈ ಹಿಂದೆ ತಯಾರಿಸಿದ ಖಾಸಗಿ ಬ್ಯಾಂಕ್‌ನಲ್ಲಿರಬೇಕು. ಅಥವಾ ಈ ಹಿಂದೆ ಅದನ್ನು ಪಡೆದಿದ್ದ ಪಿಂಚಣಿ ಕಚೇರಿಯಲ್ಲಿರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಅದು ಅವಿದ್ಯಾವಂತೆಯಾಗಿರುವ ಗೀತಾ ಕಾಂಚನ್‌ರೊಂದಿಗೆ ಇರುವುದು ಸಾಧ್ಯವೇ ಇಲ್ಲ. ನಿವೃತ್ತಳಾಗಿ 7 ವರ್ಷದ ಅನಂತರ ಕಾಣೆಯಾದ ದಾಖಲೆಯ ಪ್ರತಿ ತಂದು ಕೊಡಿ ಎಂದು ವಯೋವೃದ್ಧೆ ಗೀತಾ ಕಾಂಚನ್‌ರನ್ನು ಸತಾಯಿಸುವುದು ನ್ಯಾಯವಲ್ಲ. ಈ ಅನ್ಯಾಯದ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿ, ಒಂಬತ್ತು ತಿಂಗಳು ಕಾಲ ವಿಚಾರ‌ಣೆ ನಡೆಸಿದ ನ್ಯಾಯಾಲಯವು ಮಹಿಳೆಗೆ 1,756 ರೂ. ಮಾಸಿಕ ಪಿಂಚಣಿ ಮುಂದುವರಿಸಬೇಕು ಎಂದು ಇಪಿಎಫ್ ಒಗೆ ಆದೇಶಿಸಿದೆ. ಕಳೆದೆರಡು ವರ್ಷಗಳಿಂದ ಕಡಿತಗೊಳಿಸಿದ್ದ 500 ರೂ., ಮಾಸಿಕ ಪಿಂಚಣಿ ಬಾಕಿ ಆಕೆಗೆ ಪಾವತಿಸಬೇಕು ಹಾಗೂ ಹೆಚ್ಚು ವರಿಯಾಗಿ ಪಾವತಿಸಿದೆ ಎನ್ನಲಾದ 50,147 ರೂ. ಮೊತ್ತವನ್ನು ಆಕೆಯಿಂದ ವಸೂಲಿ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಕಳೆದ ಎರಡು ವರ್ಷಗಳಿಂದ ಮಾನಸಿಕವಾಗಿ ಜರ್ಝರಿತವಾಗಿರುವ ಗೀತಾ ಕಾಂಚನ್‌ರಿಗೆ ಪರಿಹಾರವಾಗಿ 25,000 ರೂ. ಹಾಗೂ ದಾವೆಗಾಗಿ ವ್ಯಯಿಸಿದ 10,000 ರೂ.ಗಳ ನ್ನು ಒಂದು ತಿಂಗಳೊಳಗಾಗಿ ನೀಡ ಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ. ಕೋರ್ಟ್‌ ಆದೇಶದಂತೆ ಮಹಿಳೆಗೆ ಸೂಕ್ತ ಪರಿಹಾರ ಕಲ್ಪಿಸಲು ಇಪಿಎಫ್ಒ ಮುಂದಾಗಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಎಂದು ಪ್ರತಿಷ್ಠಾನ ಎಚ್ಚರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next