ಥಾಣೆ: ವಿಳಂಬವಾಗಿ ಗ್ರಾಹಕರೊಬ್ಬರಿಗೆ ಫ್ಲ್ಯಾಟ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆಯ ಗ್ರಾಹಕರ ನ್ಯಾಯಾಲಯವು ಬಿಲ್ಡರ್ ಒಬ್ಬರಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಆಯೋಗದ ಅಧಿಕಾರಿ ಎಸ್.ಝೆಡ್.ಪವಾರ್ ಮತ್ತು ಸದಸ್ಯೆ ಪೂನಂ ವಿ.ಮಹರ್ಷಿ ಈ ಆದೇಶ ನೀಡಿದ್ದಾರೆ. ಟಿಟ್ವಾಲಾ ಎಂಬ ಸ್ಥಳದಿಂದ ದಂಪತಿ ಮೆಸರ್ಸ್ ವಿಮಲ್ ಎಂಟರ್ ಪ್ರೈಸಸ್ ಎಂಬ ನಿರ್ಮಾಣ ಕಂಪನಿಯ ವಿರುದ್ಧ ದೂರು ನೀಡಿದ್ದರು.
ಘಾಟ್ಕೊಪರ್‌ನ ಕಂಪನಿ ವಿನಾಯಕ್ ಕೃಪಾ ಎಂಬ ವಸತಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಹಲವಾರು ಮಂದಿಯ ಪೈಕಿ ದೂರುದಾರರೂ 13 ಲಕ್ಷ ರೂ. ಮತ್ತು ಇತರ ವೆಚ್ಚಗಳು ಎಂದು 45, 261 ರೂ.ಗಳನ್ನು 2011ರ ಮೇನಲ್ಲಿ ಪಾವತಿ ಮಾಡಿ ಕಾಯ್ದಿರಿಸಿದ್ದರು.
ಇದನ್ನೂ ಓದಿ:ರಾಜ್ಯದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ :ಸಚಿವ ಸುಧಾಕರ್
ನೋಂದಣಿ ಪ್ರಕ್ರಿಯೆಯೂ ಮುಕ್ತಾಯವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. 2013ರ ಡಿಸೆಂಬರ್‌ನಲ್ಲಿ ಫ್ಲ್ಯಾಟ್ ಹಸ್ತಾಂತರಿಸುವ ಬಗ್ಗೆ ನಿರ್ಮಾಣ ಕಂಪನಿ ವಾಗ್ಧಾನ ಮಾಡಿತ್ತು. ಪೂರ್ಣ ಮೊತ್ತ ಪಾವತಿ ಮಾಡಿದ್ದರೂ, ಕಂಪನಿ ಫ್ಲ್ಯಾಟ್ ಹಸ್ತಾಂತರ ಮಾಡಿರಲಿಲ್ಲ. 2015ರ ಜನವರಿಯಲ್ಲಿ ಹಸ್ತಾಂತರ ಪತ್ರವಿಲ್ಲದೆ ಕಂಪನಿ ಫ್ಲ್ಯಾಟ್ ನೀಡಿತು. ಆದರೆ ವಿಳಂಬಕ್ಕೆ ಪರಿಹಾರ ನೀಡಲಿಲ್ಲ. ಜತೆಗೆ ಯೋಜನೆಯಲ್ಲಿ ಉಲ್ಲೇಖೀಸಿದ್ದ ಕೆಲವೊಂದು ವ್ಯವಸ್ಥೆಗಳೇ ಇರಲಿಲ್ಲ ಎಂದು ದಂಪತಿ ದೂರಿನಲ್ಲಿ ಆರೋಪಿಸಿದ್ದರು. ದೂರನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಗ್ರಾಹಕರ ಆಯೋಗ 1 ಲಕ್ಷ ರೂ. ದಂಡ, ಹೆಚ್ಚುವರಿಯಾಗಿ ದೂರುದಾರರಿಂದ ಪಡೆದಿದ್ದ 5 ಸಾವಿರ ರೂ. ಮೊತ್ತವನ್ನು 2015ರ ಜ.1ರಿಂದ ಅನ್ವಯವಾಗುವಂತೆ ವಾರ್ಷಿಕ ಬಡ್ಡಿ ದರ ಶೇ.12ರಂತೆ, ಕಾನೂನು ವೆಚ್ಚ ಹತ್ತು ಸಾವಿರ ರೂ.ಗಳನ್ನು ಕಂಪನಿ ನೀಡಬೇಕು ಎಂದು ಆಯೋಗ ಆದೇಶಿಸಿದೆ.