Advertisement

ಮೈಸೂರಲ್ಲಿ 3 ಕ್ಷೇತ್ರಗಳ ಮತ ಎಣಿಕೆ ಇಂದು

02:07 PM Jun 12, 2018 | Team Udayavani |

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದಿರುವ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ 8ರಿಂದ, ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಮೈಸೂರು ಪ್ರಾದೇಶಿಕ ಆಯುಕ್ತೆ ಪಿ.ಹೇಮಲತಾ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆಯ ಸಿದ್ಧತೆ ಕುರಿತು ವಿವರ ನೀಡಿ, ಮೂರು ಕ್ಷೇತ್ರಗಳಿಗೂ ಒಬ್ಬರೇ ಚುನಾವಣಾಧಿಕಾರಿಗಳಾಗಿರುವುದರಿಂದ ಒಂದೇ ಹಾಲ್‌ನಲ್ಲಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್‌ಗ‌ಳಂತೆ  ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮೂರು ಕ್ಷೇತ್ರಗಳ ವ್ಯಾಪ್ತಿಗೆ ಹತ್ತು ಜಿಲ್ಲೆಗಳು ಬರುವುದರಿಂದ ಸಹಾಯಕ ಚುನಾವಣಾಧಿಕಾರಿಗಳಾಗಿರುವ ಹತ್ತು ಜಿಲ್ಲಾಧಿಕಾರಿಗಳು ಹಾಜರಿರಲಿದ್ದಾರೆ ಎಂದರು.

ಎಷ್ಟೆಷ್ಟು ಸಿಬ್ಬಂದಿ: ಮತ ಎಣಿಕೆಗೆ 35 ಅಧಿಕಾರಿಗಳು, 145 ಮಂದಿ ಎಣಿಕೆ ಮೇಲ್ವಿಚಾರಕರು ಮತ್ತು ಸಹಾಯಕರು, 60 ಮಂದಿ ಎಣಿಕೆ ಸಿಬ್ಬಂದಿ, 50 ಮಂದಿ ಡಿ ದರ್ಜೆ ನೌಕರರು, 25 ಮಂದಿ ಇತರೆ ಸಿಬ್ಬಂದಿ, 120 ಮಂದಿ ಪೊಲೀಸರು ಸೇರಿದಂತೆ ಎಣಿಕೆ ಕಾರ್ಯಕ್ಕೆ 435 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮತ ಎಣಿಕೆ ಟೇಬಲ್‌ ಬಳಿ ಅಭ್ಯರ್ಥಿ ಅಥವಾ ಎಜೆಂಟ್‌ ಮಾತ್ರ ಹಾಜರಿರಬಹುದು. ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದ ಅಧಿಕಾರಿಗಳು, ಸಿಬ್ಬಂದಿ ಹೊರತುಪಡಿಸಿ ಇತರರು ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್‌ ಮತ್ತು ಕ್ಯಾಮರಾ ತರುವಂತಿಲ್ಲ. 

ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು ಅಥವಾ ಚುನಾವಣಾ ಏಜೆಂಟರ ಎದುರು ಭದ್ರತಾ ಕೊಠಡಿ ತೆರೆದು ಮತ ಪೆಟ್ಟಿಗೆಗಳನ್ನು ಎಣಿಕೆ ಕೊಠಡಿಗೆ ತರಲಾಗುವುದು, ಪದವೀಧರರ ಕ್ಷೇತ್ರದಲ್ಲಿ ಅಂಚೆ ಮತಪತ್ರಗಳನ್ನು ಮೊದಲಿಗೆ ಎಣಿಕೆ ಮಾಡಿದ ನಂತರ ಮತಪೆಟ್ಟಿಗೆಗಳನ್ನು ತೆರೆದು 25 ಮತಪತ್ರಗಳ ಮಿಶ್ರಣದ ಬಂಡಲ್‌ ಮಾಡಿ ಪ್ರತಿ ಟೇಬಲ್‌ಗೆ 500 ಮತಪತ್ರಗಳನ್ನು ಎಣಿಕೆಗೆ ನೀಡಲಾಗುವುದು. 

Advertisement

13ರ ಬೆಳಗ್ಗೆವರೆಗೂ ಮತ ಎಣಿಕೆ ಪ್ರಕ್ರಿಯೆ: ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಯಾರೊಬ್ಬರೂ ನಿಗದಿತ ಕೋಟಾ ತಲುಪದಿದ್ದಲ್ಲಿ, ಕಡಿಮೆ ಮತ ಪಡೆದವರ ಮತಗಳನ್ನು ವರ್ಗಾವಣೆ ಮಾಡುತ್ತಾ ಬರಲಾಗುವುದು, ಹೀಗಾಗಿ ಜೂ.13ರ ಬೆಳಗ್ಗೆವರೆಗೂ ಮತ ಎಣಿಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಒಟ್ಟು 20677 ಮತದಾರರ ಪೈಕಿ 16707 ಮಂದಿ ಮತಚಲಾಯಿಸಿದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದ 20481 ಮತದಾರರ ಪೈಕಿ 16477 ಮಂದಿ ಮತ ಚಲಾಯಿಸಿದ್ದಾರೆ. ನೈರುತ್ಯ ಪದವೀಧರರ ಕ್ಷೇತ್ರದ 67306 ಮತದಾರರ ಪೈಕಿ 47124 ಮಂದಿ ಮತಚಲಾಯಿಸಿದ್ದಾರೆ. ಇದರಲ್ಲಿ ತಿರಸ್ಕೃತಗೊಳ್ಳುವ ಮತಪತ್ರಗಳನ್ನು ಹೊರತುಪಡಿಸಿ  ಎಣಿಕೆಗೆ ಸಿಂಧುವಾದ ಮತಗಳ ಆಧಾರದ ಮೇಲೆ ಅಭ್ಯರ್ಥಿಯ ಕೋಟಾ ನಿಗದಿಪಡಿಸಲಾಗುವುದು ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next