ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಶುಕ್ರವಾರ ಒಂದೇ ದಿನ ಘಟಾನುಘಟಿಗಳ ಸಹಿತ ಒಟ್ಟು 48 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈ ಉಪ ಚುನಾವಣೆ ಯಲ್ಲಿ ಒಟ್ಟು 83 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಒಟ್ಟು 83 ಅಭ್ಯರ್ಥಿಗಳಿಂದ 121 ನಾಮಪತ್ರಗಳು ಸಲ್ಲಿಕೆ ಯಾಗಿದ್ದು, ಈ ಪೈಕಿ 80 ಪುರುಷರು ಮತ್ತು ಮೂವರು ಮಹಿಳೆಯರಿದ್ದಾರೆ.
ಚನ್ನಪಟ್ಟಣದಿಂದ ಅತೀ ಹೆಚ್ಚು 50 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಶಿಗ್ಗಾಂವಿಯಲ್ಲಿ 7 ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಸಂಡೂರಿನಿಂದ 26 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸೋಮ ವಾರ ನಾಮ ಪತ್ರಗಳ ಪರಿ ಶೀ ಲನೆ ನಡೆಯಲಿದ್ದು, ಅ. 30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಅಂತಿಮ ಕಣದಲ್ಲಿ ಎಷ್ಟು ಹುರಿಯಾಳುಗಳು ಇರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಲಭಿಸಲಿದೆ. ನ. 13ರಂದು ಮೂರೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿ ಶುಕ್ರವಾರ ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನಿಂದ ಯಾಸಿರ್ ಅಹಮದ್ ಖಾನ್ ಪಠಾಣ್ ಸಹಿತ ವಿವಿಧ ಪಕ್ಷಗಳಿಂದ ಹಾಗೂ ಸ್ವತಂತ್ರವಾಗಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.