Advertisement

ಐಪಿಎಲ್‌ ಹಬ್ಬಕ್ಕೆ ಕ್ಷಣಗಣನೆ ಆರಂಭ

12:30 AM Mar 20, 2019 | |

ಹೊಸದಿಲ್ಲಿ: ಐಪಿಎಲ್‌ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿದೆ. ಮಾ. 23ರಿಂದ ಮೇ 5ರ ತನಕ ಒಟ್ಟಾರೆ 56 ಲೀಗ್‌ ಪಂದ್ಯಗಳು ದೇಶಾದ್ಯಂತ ಹಲವು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದೇಶದೆಲ್ಲೆಡೆ ಚುನಾವಣೆಯ ಬಿಸಿ ಇರುವುದರಿಂದ 3 ಪ್ಲೇಆಫ್, ಒಂದು ಫೈನಲ್‌ ಪಂದ್ಯಗಳ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಶೀಘ್ರದಲ್ಲೇ ಉಳಿದ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿಯೂ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

Advertisement

ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿ ತೆಗೆದ ಬಿಸಿಸಿಐ
ಮಂಗಳವಾರ ಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿತ್ತು. ಆದರೆ ಕೊನೇ ಕ್ಷಣದಲ್ಲಿ ಕ್ವಾಲಿಫೈಯರ್‌ 1, ಎಲಿಮಿನೇಟರ್‌, ಕ್ವಾಲಿಫೈಯರ್‌ 2 ಹಾಗೂ ಫೈನಲ್‌ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿತು. ಒಟ್ಟಾರೆ 56 ಲೀಗ್‌ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಉಳಿಸಿಕೊಂಡಿದೆ. ಚುನಾ ವಣೆಯ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಹೊಂದಿಸಲು ಆಗಿಲ್ಲ. ಜತೆಗೆ ಪಂದ್ಯಗಳಿಗೆ ಅಗತ್ಯವಿರುವ ಭದ್ರತೆ ಯನ್ನೂ ಒದಗಿಸುವುದಕ್ಕೆ ಸಾಕಷ್ಟು ಕಷ್ಟವಾಗುವುದರಿಂದ ಬಿಸಿಸಿಐ ಕೊನೆಯ 4 ಪಂದ್ಯ ಆಡಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಲೋಕಸಭಾ ಚುನಾವಣೆಯ ದಿನಾಂಕದ ಜತೆಗಿನ ಸಂಘರ್ಷ ತಪ್ಪಿಸಲು ಬಿಸಿಸಿಐ ಮೊದಲು 17 ಪಂದ್ಯಗಳ ವೇಳಾಪಟ್ಟಿ (ಮಾ.23-ಎ.5) ಮಾತ್ರ ಪ್ರಕಟಿಸಿತ್ತು. ಮಾ.23ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಬಲಿಷ್ಠ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎದುರಿಸಲಿದೆ. ಮಾಜಿ ನಾಯಕ ಎಂ.ಎಸ್‌.ಧೋನಿ ಹಾಗೂ ಹಾಲಿ ನಾಯಕ ವಿರಾಟ್‌ ಕೊಹ್ಲಿ ನಡುವಿನ ಮುಖಾಮುಖೀ ಕುತೂಹಲ ಕೆರಳಿಸಿದೆ.

ಬೆಂಗಳೂರಿನಲ್ಲಿ  ಆರ್‌ಸಿಬಿಗೆ 7 ಪಂದ್ಯ
ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ ತವರಿನಲ್ಲಿ ಒಟ್ಟಾರೆ 7 ಪಂದ್ಯ ಆಡಲಿದೆ. ತವರಿನಿಂದ ಹೊರಗೆ ಕೂಡ 7 ಪಂದ್ಯಗಳ‌ನ್ನು ಆಡಲಿದೆ. ಒಟ್ಟಾರೆ 14 ಪಂದ್ಯಗಳಲ್ಲಿ ಆರ್‌ಸಿಬಿ ಕಣಕ್ಕೆ ಇಳಿಯಲಿದೆ.  ಈ ಹಿಂದಿನ 11 ಆವೃತ್ತಿಗಳಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲು ವಿಫ‌ಲವಾಗಿತ್ತು. ಈ ಸಲವಾದರೂ ಟ್ರೋಫಿ ಗೆಲ್ಲುವ ಛಲದೊಂದಿಗೆ ಆರ್‌ಸಿಬಿ ಆಡಬೇಕಿದೆ. ಆರ್‌ಸಿಬಿ ಕಳಪೆ ನಿರ್ವಹಣೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿತ್ತು. ಇದೀಗ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕೆ ಇಳಿಯುತ್ತಿರುವ ಕೊಹ್ಲಿ ಪಡೆ ಇತಿಹಾಸ ಬರೆಯಲು ಕಾತರದಿಂದ ಕಾಯುತ್ತಿದೆ. ಕಪ್‌ ನಮೆª ಎನ್ನುವುದನ್ನು ಸಾಬೀತುಪಡಿಸಲು ಕೊಹ್ಲಿ ಬಳಗದ ಮುಂದೆ ಒಂದೊಳ್ಳೆಯ ಅವಕಾಶ ಇದೆ.

ಮಾ. 22ಕ್ಕೆ ಬೆಂಗಳೂರಿಗೆ  ಐಪಿಎಲ್‌ ಟ್ರೋಫಿ
ಐಪಿಎಲ್‌ ಆರಂಭಕ್ಕೂ ಮೊದಲು ವಿವಿಧ ನಗರಗಳ ಕಡೆಗೆ ಟ್ರೋಫಿ ಸುತ್ತಾಟ ಆರಂಭವಾಗಲಿದೆ. ಮಾ. 22ರಂದು ಬೆಂಗಳೂರಿಗೆ ಟ್ರೋಫಿ ಆಗಮಿಸಲಿದೆ. ಈ ವೇಳೆ ಅಭಿಮಾನಿಗಳು ಟ್ರೋಫಿ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶ ಇದೆ. ಮಾ. 23ಕ್ಕೆ ಚೆನ್ನೈ, ಮಾ. 24ಕ್ಕೆ ಮುಂಬಯಿ, ಮಾ. 30ಕ್ಕೆ ಹೈದರಾಬಾದ್‌, ಎ. 6ಕ್ಕೆ ಜೈಪುರ ಹಾಗೂ ಎ.7ಕ್ಕೆ ಛತ್ತೀಸ್‌ಗಢ ನಗರಗಳಲ್ಲಿ ಟ್ರೋಫಿ ಪ್ರವಾಸ ನಡೆಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next