Advertisement

ಪಿಯು ವಿದ್ಯಾರ್ಥಿಗಳಿಗೆ ತಜ್ಞರಿಂದ ಕೌನ್ಸೆಲಿಂಗ್‌

09:13 AM Feb 03, 2018 | Team Udayavani |

ಬೆಂಗಳೂರು: ಮಾರ್ಚ್‌ನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಲ್ಲಿ ಇರಬಹುದಾದ 
ಪರೀಕ್ಷಾ ಭಯ, ಆತಂಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ. ಆಯಾ ಕಾಲೇಜುಗಳಲ್ಲಿ ಪಾಲಕ- ಪೋಷಕರ ಸಮ್ಮುಖದಲ್ಲೇ ಕೌನ್ಸೆಲಿಂಗ್‌ ನಡೆಯುತ್ತಿದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಸಲಹೆ ಸಹ ನೀಡಲಾಗುತ್ತಿದೆ.

Advertisement

ಉನ್ನತ ವ್ಯಾಸಂಗ ಮತ್ತು ಉದ್ಯೋಗಾವಕಾಶಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿಯೇ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಆತಂಕ ಸಹಜವಾಗಿರುತ್ತದೆ. ಇದನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೌನ್ಸೆಲಿಂಗ್‌ ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯುಸಿ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶಿಸಿತ್ತು. 

ಸಲಹೆಗಳು: ಈ ಹಿನ್ನೆಲೆಯಲ್ಲಿ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳ ಪಾಲಕ-ಪೋಷಕರ, ಉಪನ್ಯಾಸಕರ ಸಭೆ ಕರೆದು
ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದ್ದರು. ಅದರಂತೆ ಕೌನ್ಸೆಲಿಂಗ್‌ ಆರಂಭಗೊಂಡಿದೆ. ಪರೀಕ್ಷಾ ಸಂದರ್ಭದಲ್ಲಿ
ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು. ಮಿತ ಆಹಾರದ ಸೇವನೆ, ನಿಯಮಿತ ನಿದ್ದೆ, ಓದಿನ ಜತೆಗೆ ಸಕಾಲದಲ್ಲಿ ವಿಶ್ರಾಂತಿ ಪಡೆಯುವುದು, ಧನಾತ್ಮಕ ಚಿಂತನೆಗಳೊಂದಿಗೆ ಮಾನಸಿಕ ಆರೋಗ್ಯ ಸದಾ ಉತ್ಸಾಹದಿಂದ ಇಟ್ಟುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿವಳಿಕೆ ನೀಡುವುದು. ಭಯ, ಆತಂಕ ಮತ್ತು ಖನ್ನತೆಗೆ ಒಳಗಾಗದೇ ಪರೀಕ್ಷೆ ಹೇಗೆ ಎದುರಿಸಬೇಕು, ಏಕಾಗ್ರತೆಗಾಗಿ ಧ್ಯಾನ
ಮಾಡುವುದು, ಅಂಕ ಸೇರಿದಂತೆ ವಾರ್ಷಿಕ ಪರೀಕ್ಷೆಯ ಉತ್ತೀರ್ಣಕ್ಕೆ ನಿರ್ದಿಷ್ಟ ಗುರಿ ಹೊಂದುವುದು, ಸಮಯದ ನಿರ್ವಹಣೆಯ
ಜತೆಗೆ ಶಿಸ್ತು ಮೈಗೂಡಿಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ತಂಡ ಮಾರ್ಗದರ್ಶನ ನೀಡುತ್ತಿದೆ.

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವ ಜತೆಗೆ ಆತಂಕ ಹಾಗೂ ಭಯ ನಿವಾರಿಸುವ ನಿಟ್ಟಿನಲ್ಲಿ ಪಾಲಕ-
ಪೋಷಕರು ತೆಗೆದುಕೊಳ್ಳಬೇಕಾದ ತುರ್ತು ಕ್ರಮದ ಬಗ್ಗೆಯೂ ತಿಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು
ಫೆ.10ರೊಳಗೆ ಪೂರೈಸಿ ವರದಿಯನ್ನು ಇಲಾಖೆಗೆ ನೀಡುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಮಾ.1ರಿಂದ 17ರವರೆಗೆ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯದ ಸುಮಾರು ಸಾವಿರ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಡ್ರಾಪ್‌ ಔಟ್‌ ಆಗದಂತೆ ಎಚ್ಚರ:
ಪಿಯುಸಿಯ ನಂತರ ಏನು ಎಂಬುದರ ಬಗ್ಗೆಯೂ ಕೌನ್ಸೆಲಿಂಗ್‌ನಲ್ಲಿ ಗಂಭೀರವಾಗಿ ಚರ್ಚಿಸ ಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ
ಬಹುತೇಕ ವಿದ್ಯಾರ್ಥಿಗಳು ಪಿಯುಸಿ ನಂತರ ಶೈಕ್ಷಣಿಕ ಜೀವನ ಮುಂದುವರಿಸುವುದಿಲ್ಲ. ಉದ್ಯೋಗ ಅರಸಿ, ಪಟ್ಟಣ ಅಥವಾ ನಗರ
ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪಿಯುಸಿ ಪೂರೈಸಿದ ಪ್ರತಿ ವಿದ್ಯಾರ್ಥಿಯೂ ಪದವಿ ಅಥವಾ
ತತ್ಸಮಾನ ಕೋರ್ಸ್‌ಗಳಿಗೆ ಸೇರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ವಿದ್ಯಾರ್ಥಿ ಕೌನ್ಸೆಲಿಂಗ್‌ನಲ್ಲಿ ಪಾಲಕ- ಪೋಷಕರ
ಸಮ್ಮುಖದಲ್ಲೇ ಪಿಯುಸಿ ನಂತರ ಏನು ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಉನ್ನತ ಶಿಕ್ಷಣ ಅವಕಾಶಗಳು, ಸೌಲಭ್ಯ ದೊರೆಯುವ ಸ್ಥಳ, ವೃತ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ.

Advertisement

ಪರೀಕ್ಷಾ ಅಕ್ರಮಕ್ಕೆ ತಡೆ 
ವಿದ್ಯಾರ್ಥಿಗಳು ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಪ್ರಶ್ನೆ  ಪತ್ರಿಕೆ ಸೋರಿಕೆ, ಖರೀದಿ, ಮಾರಾಟ ಅಥವಾ ಮಾರಾಟಕ್ಕೆ ಪ್ರಯತ್ನಿಸುವುದು, ಪ್ರಚೋದಿಸುವ, ಮೊಬೈಲ್‌ ಸೇರಿ ಎಲೆಕ್ಟ್ರಾನಿಕ್‌ ಉಪಕರಣದ ಮೂಲಕ ದಾರಿತಪ್ಪಿಸುವ ಮಾಹಿತಿ ನೀಡುವ ವಿದ್ಯಾರ್ಥಿ ಅಥವಾ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ಠಾಣೆಗೆ ದೂರು ನೀಡಲು ವಿದ್ಯಾರ್ಥಿ, ಪಾಲಕ-ಪೋಷಕ ಹಾಗೂ
ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಆರೋಪ ಸಾಬೀತಾದರೆ 5 ವರ್ಷ ಜೈಲು ಹಾಗೂ 5 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಅತಿಮುಖ್ಯ ಘಟ್ಟವಾಗಿದ್ದು, ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ, ಆತಂಕ ನಿವಾರಣೆಗೆ ಕಾಲೇಜಿನಲ್ಲೇ ಕೌನ್ಸೆಲಿಂಗ್‌ ನಡೆಸಲು ಎಲ್ಲಾ ಪ್ರಾಂಶುಪಾಲರಿಗೆ ಆದೇಶ ನೀಡಿದ್ದೇವೆ.
 ● ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next