ವಿಧಾನಪರಿಷತ್ತು: ಧರಣಿ-ಧಿಕ್ಕಾರ ಘೋಷಣೆಗಳ ನಡುವೆಯೇ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ರೂಪಿಸಲಾಗಿರುವ “ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ-22ಕ್ಕೆ ಮೇಲ್ಮನೆಯಲ್ಲಿ ಮಂಗಳವಾರ ಅಂಗೀಕಾರ ದೊರಕಿತು.
ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಧಿಕ್ಕಾರ ಘೋಷಣೆಯ ನಡುವೆಯೇ ಪ್ರಶ್ನೋತ್ತರ ಕಲಾಪ ತರಾತುರಿಯಲ್ಲಿ ಮುಗಿಯಿತು. ಬಳಿಕ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ವಿಧೇಯಕ ಮಂಡಿಸಿ ಅನುಮೋದನೆಗೆ ಕೋರಿದರು.
ಗಲಾಟೆಯ ನಡುವೆಯೇ ವಿಧೇಯಕ ಬೆಂಬಲಿಸಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಕೆ.ಎ ತಿಪ್ಪೇಸ್ವಾಮಿ, ಬಿಜೆಪಿಯ ರುದ್ರೇಗೌಡ, ಹಣಮಂತ ನಿರಾಣಿ, ರವಿಕುಮಾರ್ ಮಾತನಾಡಿದರು.
ಜೆಡಿಎಸ್‌ನ ತಿಪ್ಪೇಸ್ವಾಮಿ, ವಿಧೇಯಕ ಸ್ವಾಗತಿಸುತ್ತೇನೆ. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಹೈಕೋರ್ಟ್ ಹಾಗೂ ಕಾನೂನು ಇಲಾಖೆಯ ಆದೇಶ-ಅಭಿಪ್ರಾಯಗಳಿಗೆ ವಿರುದ್ಧವಾಗಿ ಈ ವಿಧೇಯಕ ತರಲಾಗುತ್ತಿದೆ. ಇದು ಮತ್ತೂಂದು ಹಂತದ ಕಾನೂನು ಹೋರಾಟಕ್ಕೆ ಎಡೆ ಮಾಡಿಕೊಡಬಹುದು. ಅದಕ್ಕೆ ಸರ್ಕಾರ ಸಿದ್ಧವಿರಬೇಕು ಎಂದರು. ಈ ಅಂಶವನ್ನು ಸರ್ಕಾರ ಗಮನಿಸಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
15 ನಿಮಿಷದಲ್ಲಿ ನಾಲ್ಕು ಬಿಲ್ ಪಾಸ್:
“ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ-22 ಸೇರಿದಂತೆ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ-2022, ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ವಿಧೇಯಕ-2022, ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ-1944 (ಕರ್ನಾಟಕ ತಿದ್ದುಪಡಿ) ವಿಧೇಯಕ-2022 ಗಳನ್ನು ಕೇವಲ 15 ನಿಮಿಷಗಳಲ್ಲಿ ಅಂಗೀಕರಿಸಲಾಯಿತು. ಕೆಪಿಎಸ್‌ಸಿ ವಿಧೇಯಕ ಹೊರತುಪಡಿಸಿದೆ. ಬೇರೆ ಯಾವ ವಿಧೇಯಕದ ಬಗ್ಗೆ ಚರ್ಚೆ ಆಗಿಲ್ಲ.