ಬೆಂಗಳೂರು: ಜೆಡಿಎಸ್ ನಿಂದ ಮತ್ತೊಬ್ಬ ರಾಜಕಾರಣಿ ಪಕ್ಷ ತೊರೆಯಲು ಮುಂದಾಗಿದ್ದು, ಪರಿಷತ್ ಸದಸ್ಯ ಮರಿತಿಬ್ಬೇಗೌಡ ವರಿಷ್ಠರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಜಯರಾಂಗೆ ನೀಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಮರಿತಿಬ್ಬೇಗೌಡ ಬೇಸರಗೊಂಡಿದ್ದಾರೆ. ನಮ್ಮ ಯಾರ ಅಭಿಪ್ರಾಯವನ್ನೂ ಕೇಳದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದು, ರಾಮು ಎಂಬುವರಿಗೆ ಟಿಕೆಟ್ ಘೋಷಿಸಿದ್ದಾರೆ. ಜಯರಾಂ ಬಳಿ ಹಣ ಇಲ್ಲವೆಂದು ರಾಮು ಎಂಬುವರಿಗೆ ಟಿಕೆಟ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾದರೆ ರಾಮು ಬಳಿ ಹಣ ಇರುವ ಕಾರಣಕ್ಕೆ ಮಣೆ ಹಾಕಿದ್ದಾರಾ? ಇಷ್ಟು ವರ್ಷ ಪಕ್ಷಕ್ಕಾಗಿ ದುಡಿಯುತ್ತಿರುವವರ ಮಾತಿಗೆ ಬೆಲೆಯೇ ಇಲ್ಲವೆ? ಶ್ರೀಕಂಠೇಗೌಡ ಕರೆದುಕೊಂಡು ಬಂದ ವ್ಯಕ್ತಿಗೆ ಅವಕಾಶ ನೀಡಿದ್ದಾರೆ. ಇದು ನಿಜಕ್ಕೂ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಪ್ರಾಧ್ಯಾಪಕರ ನಿಯೋಜನೆ ರದ್ದು, ವರ್ಗಾವಣೆ: ಸಚಿವರ ಕಚೇರಿ ಮುಂದೆ ಮರಿತಿಬ್ಬೇಗೌಡ ಧರಣಿ
ಮುಂದೆ ಪಕ್ಷದ ನಾಯಕರನ್ನು ಭೇಟಿ ಮಾಡುವುದಿಲ್ಲ. ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲವೆಂದಾದ ಮೇಲೆ ಯಾಕೆ ಭೇಟಿ ಮಾಡಬೇಕು? ಇಂದು ಜೆಡಿಎಸ್ ದಿನೇ ದಿನೇ ಕುಗ್ಗುತ್ತಿರುವುದಕ್ಕೆ ಪಕ್ಷದ ನಾಯಕರೇ ನೇರ ಹೊಣೆ ಎಂದು ಆಪಾದಿಸಿದ್ದಾರೆ.