Advertisement

Council; ನನ್ನ ಯೋಗ್ಯತೆಗೆ ಸಿಕ್ಕ ವಿಪಕ್ಷ ನಾಯಕ ಸ್ಥಾನ: ಛಲವಾದಿ ನಾರಾಯಣಸ್ವಾಮಿ

12:46 AM Jul 25, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ನ ವಿಪಕ್ಷ ನಾಯಕರಾಗಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಹೆಸರನ್ನು ಸಭಾಪತಿ ಬಸವರಾಜ ಹೊರಟ್ಟಿ ಬುಧವಾರ ಪ್ರಕಟಿಸಿದರು.

Advertisement

ಸಭಾಪತಿ ಹೆಸರು ಹೇಳುತ್ತಿದ್ದಂತೆ ಛಲವಾದಿ ಅವರನ್ನು ವಿಪಕ್ಷ ನಾಯಕರ ಕುರ್ಚಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕರೆ ತಂದು ಕೂರಿಸಿದರು. ಸಭಾಪತಿ ಹೊರಟ್ಟಿ ಸೇರಿದಂತೆ ಸದನ ಛಲವಾದಿ ಅವರನ್ನು ಅಭಿನಂದಿಸಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು 1983ರಲ್ಲೇ ವಿಧಾನ ಪರಿಷತ್‌ ಪ್ರವೇಶಿಸುವ ಕನಸು ಕಂಡಿದ್ದೆ, ಸುಮಾರು 45 ವರ್ಷಗಳ ರಾಜಕೀಯ ಜೀವನದ ಬಳಿಕ ಇದು ಸಾಧ್ಯವಾಯಿತು. ತಳ ಸಮುದಾಯದಿಂದ ಬಂದಿರುವ ನನ್ನನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ.

ರವಿಕುಮಾರ್‌, ಸಿ.ಟಿ.ರವಿ ಹೆಸರಿದ್ದರೂ ನನ್ನ ಯೋಗ್ಯತೆಯನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದೆ ಎಂದು ಹೇಳಿದರು. ನಾನು ಮೂಲತಃ ಅಂಬೇಡ್ಕರ್‌ವಾದಿ. ಅವರ ಆಶಯಗಳನ್ನಿಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನನ್ನ ರಾಜಕೀಯ ಗುರು. ಅವರಲ್ಲಿದ್ದ ಕೆಚ್ಚು ನನ್ನಲ್ಲಿಯೂ ಇದೆ ಎಂದು ಭಾವಿಸಿದ್ದೇನೆ ಎಂದರು.

ಛಲವಾದಿ ಅವರ ಹೋರಾಟ, ಸಂಕಲ್ಪದ ಬಗ್ಗೆ ಅಭಿಮಾನವಿದೆ. ಜವಾಬ್ದಾರಿ ಸ್ಥಾನಗಳೆಂದರೆ ಕಷ್ಟಗಳು ಹೆಚ್ಚು. ಆ ಸ್ಥಾನದಲ್ಲಿ ಕುಳಿತು ಉತ್ತಮ ಕೆಲಸ ಮಾಡಲು ಪ್ರಯತ್ನಿಸಿ. ಸದನದ ಘನತೆ, ಗೌರವವನ್ನು ಕಾಪಾಡಿಕೊಂಡು ಬನ್ನಿ.
 -ಬಸವರಾಜ ಹೊರಟ್ಟಿ, ಸಭಾಪತಿ

Advertisement

ವಿಧಾನಪರಿಷತ್‌: 887 ಪ್ರಶ್ನೆ ; 280ಕ್ಕೆ ಮಾತ್ರ ಸರಕಾರದ ಉತ್ತರ!

ಬೆಂಗಳೂರು: ಸದನಕ್ಕೆ ಕೇಳಲಾದ ಪ್ರಶ್ನೆಗಳು, ಶೂನ್ಯ ವೇಳೆಯ ಪ್ರಸ್ತಾವಗಳಿಗೆ ಅಧಿಕಾರಿಗಳು ಎಷ್ಟು ಉತ್ತರಗಳನ್ನು ಕೊಡಬೇಕಿತ್ತು, ಎಷ್ಟು ಕೊಡಲಾಗಿದೆ, ಉಳಿದದ್ದು ಯಾಕೆ ಕೊಟ್ಟಿಲ್ಲ, ಉತ್ತರ ಕೊಡದ ಅಧಿಕಾರಿಗಳ ಮೇಲೆ ಕೈಗೊಂಡ ಕ್ರಮದ ಬಗ್ಗೆ ಗುರುವಾರ ಸದನಕ್ಕೆ ಮಾಹಿತಿ ಕೊಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನಲ್ಲಿ ಸರಕಾರಕ್ಕೆ ತಾಕೀತು ಮಾಡಿದರು.

ಈ ವಿಷಯ ಪ್ರಸ್ತಾವಿಸಿದ ಜೆಡಿಎಸ್‌ ನಾಯಕ ಎಸ್‌.ಎಲ್‌.ಭೋಜೇಗೌಡ, ಆಡಳಿತ ಮತ್ತು ವಿಪಕ್ಷದ ಸದಸ್ಯರು ಸೇರಿ ಲಿಖೀತ ಮೂಲಕ ಉತ್ತರಿಸುವ ಹಾಗೂ ಶೂನ್ಯವೇಳೆಯ ಪ್ರಸ್ತಾವಗಳು ಸೇರಿ ಒಟ್ಟು 887 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 280 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದೆ. ಇನ್ನೂ 607 ಪ್ರಶ್ನೆಗಳಿಗೆ ಸರಕಾರದಿಂದ ಉತ್ತರಗಳು ಬಂದಿಲ್ಲ ಎಂದರು. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಸೇರಿ ವಿಪಕ್ಷ ಬಿಜೆಪಿ-ಜೆಡಿಎಸ್‌ ಸದಸ್ಯರು ಸಹ ಧ್ವನಿಗೂಡಿಸಿದರು.

ಕ್ರಮದ ಮಾಹಿತಿ ಕೊಡಿ
ಮಧ್ಯೆ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿದಿನ ಹೇಳುತ್ತಿದ್ದೇನೆ. ಇನ್ನು ಯಾವ ಭಾಷೆಯಲ್ಲಿ ಹೇಗೆ ಹೇಳಬೇಕೆಂದು ನನಗಂತೂ ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಉತ್ತರಗಳನ್ನು ಕೊಡಿಸಲಾಗುವುದು ಎಂದು ಸಭಾನಾಯಕ ಎನ್‌.ಎಸ್‌. ಬೋಸರಾಜ್‌ ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಸಭಾಪತಿಗಳು, ಉತ್ತರ ಕೊಡದ ಅಧಿಕಾರಿಗಳ ಮೇಲೆ ಕೈಗೊಂಡ ಕ್ರಮದ ಬಗ್ಗೆ ಗುರುವಾರ ಸದನಕ್ಕೆ ಮಾಹಿತಿ ಕೊಡಬೇಕು ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next