Advertisement

Council By Poll: ಬಿಜೆಪಿ ಸರಕಾರವಿದ್ದಾಗ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ: ಬಿವೈವಿ

12:09 AM Oct 16, 2024 | Team Udayavani |

ಬಂಟ್ವಾಳ: ಬಿಜೆಪಿ ಸರಕಾರವು ಪ್ರತಿ ಬಾರಿ ಪಂಚಾಯತ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಗೌರವ ನೀಡುವ ಕಾರ್ಯ ಮಾಡಿದೆ. ಆದರೆ ಈಗಿನ ಕಾಂಗ್ರೆಸ್‌ ಸರಕಾರವು ಅಭಿವೃದ್ಧಿ ಶೂನ್ಯ ಸರಕಾರ ಎನಿಸಿಕೊಂಡಿದೆ. ದ.ಕ.ಜಿಲ್ಲೆಯ ಜನತೆಯ ರಕ್ತದಲ್ಲಿ ಹಿಂದುತ್ವವೇ ತುಂಬಿರುವುದರಿಂದ ಸಿಎಂ ಸಿದ್ಧರಾಮಯ್ಯರಿಗೆ ಜಿಲ್ಲೆಯ ಜನರೆಂದರೆ ಅಲರ್ಜಿಯಾಗಿದೆ. ಹೀಗಾಗಿ ಅನುದಾನವೂ ಇಲ್ಲ, ಯಾವುದೇ ಸಚಿವರು ಕೂಡ ಜಿಲ್ಲೆಗೆ ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

Advertisement

ಅವರು ಮಂಗಳವಾರ ಬಿ.ಸಿ.ರೋಡು ಬಳಿಯ ಬಂಟವಾಳದ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಮಾಣಿಕ ಕಾರ್ಯಕರ್ತ ಕಿಶೋರ್‌ಕುಮಾರ್‌ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ. ಸಜ್ಜನಿಕೆಯ ರಾಜಕಾರಣಿ ಆಗಿರುವ ಅವರು ಕೋಟ ಅವರ ಸ್ಥಾನವನ್ನು ತುಂಬುವ ಮೂಲಕ ಪಂಚಾಯತ್‌ ಸದಸ್ಯರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಕಾಂಗ್ರೆಸ್‌ ಸರಕಾರವು ಮದ್ಯ, ಪೆಟ್ರೋಲ್‌, ಹಾಲಿನ ದರ ಜಾಸ್ತಿ ಮಾಡಿ ಗ್ಯಾರಂಟಿಗೆ ಹಣ ಹೊಂದಿಸುತ್ತಿದ್ದು, ಸಿದ್ದರಾಮಯ್ಯರ ಅವಧಿಯಲ್ಲಿ ಅಭಿವೃದ್ಧಿಗೆ ಹಣ ತರುವುದು ಕನಸಿನ ಮಾತಾಗಿದೆ ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರಕಾರದಲ್ಲಿ ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹೇಳುವವರು ದೇಶಪ್ರೇಮಿಗಳು ಎಂಬ ಸ್ಥಿತಿ ಬಂದಿದ್ದು, ಲೂಟಿಯಲ್ಲಿ ಸಿಕ್ಕಿ ಹಾಕಿಕೊಂಡು ವಾಪಸ್‌ ಕೊಟ್ಟರೆ ಅವರು ನಿರಪರಾಧಿಗಳು ಎಂಬ ಹೊಸ ಕಾನೂನನ್ನು ಕೂಡ ಕಾಂಗ್ರೆಸ್‌ ಜಾರಿಗೆ ತಂದಿದೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಬ್ರಿಜೇಶ್‌ ಚೌಟ, ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಕಿಶೋರ್‌ಕುಮಾರ್‌ ಪುತ್ತೂರು ಮಾತನಾಡಿದರು.

Advertisement

ರಾಜ್ಯ ಕಾರ್ಯದರ್ಶಿ ವಿ. ಸುನೀಲ್‌ ಕುಮಾರ್‌, ಶಾಸಕರಾದ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಡಿ. ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಉಮಾನಾಥ ಕೋಟ್ಯಾನ್‌, ಭಾಗೀರಥಿ ಮುರುಳ್ಯ, ಡಾ| ವೈ.ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮೇಯರ್‌ ಮನೋಜ್‌ ಕುಮಾರ್‌, ಉಪಮೇಯರ್‌ ಭಾನುಮತಿ, ಪ್ರಮುಖರಾದ ಉದಯಕುಮಾರ್‌ ಶೆಟ್ಟಿ, ರಾಜೇಶ್‌ ಕಾವೇರಿ, ಪ್ರೇಮಾನಂದ ಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ವೇದಿಕೆಯಲ್ಲಿದ್ದರು. ಸತೀಶ್‌ ಕುಂಪಲ ಸ್ವಾಗತಿಸಿದರು. ಕ್ಯಾ| ಗಣೇಶ್‌ ಕಾರ್ಣಿಕ್‌ ವಂದಿಸಿದರು. ಬಿ.ದೇವದಾಸ್‌ ಶೆಟ್ಟಿ ಹಾಗೂ ರಾಕೇಶ್‌ ರೈ ಕೆಡೆಂಜಿ ನಿರ್ವಹಿಸಿದರು.

ಪ್ರಾಮಾಣಿಕ ಸಿಎಂ: ಬಿವೈವಿ ವ್ಯಂಗ್ಯ
ವಾಲ್ಮೀಕಿ ಹಗರಣದಲ್ಲಿ 87 ಕೋ.ರೂ.ಭ್ರಷ್ಟಾಚಾರ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲೇ ಒಪ್ಪಿಕೊಂಡಿದ್ದು,  ಮುಡಾ ಹಗರಣದಲ್ಲಿ ನಿವೇಶನವನ್ನು ಹಿಂದಿರುಗಿಸುವುದಾಗಿ ಒಪ್ಪಿಕೊಳ್ಳುವ ಮೂಲಕ ಅವರು ಪ್ರಾಮಾಣಿಕ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next