Advertisement

Exclusive Interview: ನಾನೇ ಕಟ್ಟಿದ ಮನೆಯಲ್ಲಿ ಇರಲಾಗಲಿಲ್ಲ: ಯೋಗೇಶ್ವರ್‌

12:03 AM Oct 24, 2024 | Team Udayavani |

ರಾಮನಗರ: ಜೆಡಿಎಸ್‌ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವಂತೆ ಬಿಜೆಪಿ ರಾಷ್ಟ್ರ ನಾಯಕರು ಷರತ್ತು ಹಾಕಿದ್ದರು. ಆದರೆ ನಾನು ಅವರ ಮನವೊಲಿಸಿ ಮೈತ್ರಿ ಮಾಡಿಸಿದೆ. ನಾವು ಕಟ್ಟಿದ ಮನೆಯಲ್ಲಿ ನಾವೇ ವಾಸಮಾಡಲಾಗದಂತೆ ನಾನು ಇದೀಗ ನನ್ನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಸೇರಿದ್ದೇನೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಪಿ.ಯೋಗೇಶ್ವರ್‌ ತಮ್ಮ ಪಕ್ಷಾಂತರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Advertisement

ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಪ್ರಬಲ ಎಂಬ ಬಿಜೆಪಿ ಹೈಕಮಾಂಡ್‌ ನಾಯಕರ ಭಾವನೆಯನ್ನು ಈ ಚುನಾವಣೆಯಲ್ಲಿ ಸುಳ್ಳಾಗಿಸುತ್ತೇನೆ. ನನ್ನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಸೇರ್ಪಡೆಯಾಗಬೇಕಾಯಿತು. ವಿಜಯೇಂದ್ರ ನನ್ನ ಪರವಾಗಿ ಪ್ರಯತ್ನ ಪಟ್ಟರೂ ಟಿಕೆಟ್‌ ಕೊಡಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಸಂದರ್ಶನದ ವಿವರ ಇಂತಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳಿಸುತ್ತೇನೆಂದು ಕಾಂಗ್ರೆಸ್‌ ತೊರೆದ ನೀವು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರ ಮರ್ಮವೇನು?
-ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳಿಸಬೇಕೆಂದು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ. ಬಿಜೆಪಿ ಬಲಗೊಳಿ ಸುವ ಪರಿಶ್ರಮ ದಲ್ಲಿ ನಾನು ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಅನುಭವಿಸಬೇಕಾಯಿತು. 5 ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೆ. ಎನ್‌ಡಿಎಗೆ ಜೆಡಿಎಸ್‌ ಸೇರ್ಪಡೆಯಾಗಲು ಕಾರಣವಾಗಿದ್ದೇನೆ. ಆದರೆ ಬಿಜೆಪಿ ಜತೆ ಜೆಡಿಎಸ್‌ ಸೇರ್ಪಡೆಯಾದ ಬಳಿಕ ಕೆಲವೊಂದು ವ್ಯತ್ಯಾಸವಾಯಿತು. ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ.

ರಾಜ್ಯ ಬಿಜೆಪಿ ನಾಯಕರು ನಿಮ್ಮ ಪರ ನಿಂತರೂ ಹೈಕಮಾಂಡ್‌ ಕುಮಾರಸ್ವಾಮಿ ಮಾತು ಕೇಳುತ್ತಿದೆ ಎಂದರೆ ರಾಜ್ಯ ಬಿಜೆಪಿ ನಾಯಕರಿಗೆ ಬೆಲೆ ಇಲ್ಲವಾ?
-ಬಿಜೆಪಿ ರಾಜ್ಯ ನಾಯಕರು ಎಲ್ಲರೂ ನನ್ನ ಪರವಾಗಿ ಹೈಕಮಾಂಡ್‌ಗೆ ಹೇಳಿದ್ದಾರೆ. ಚನ್ನಪಟ್ಟಣ ಚುನಾವಣೆಯ ವಸ್ತುಸ್ಥಿತಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಆದರೆ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಹೈಕಮಾಂಡ್‌ ಕುಮಾರಸ್ವಾಮಿ ಪ್ರಬಲ ನಾಯಕ ಎಂದು ಭಾವಿಸಿದೆ. ಈ ನಂಬಿಕೆ ಇದೇ ಉಪಚುನಾವಣೆಯಲ್ಲಿ ಕಳಚಿ ಬೀಳಲಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ನಾನೇ ಮಾಡಿಸಿದ್ದು ಎಂದು ಹೇಳುತ್ತಿದ್ದೀರಿ. ಇದೀಗ ಈ ಮೈತ್ರಿಯನ್ನು ಬಿಟ್ಟು ಹೊರಬಂದಿದ್ದು ಯಾಕೆ?

– ಕೆಲವೊಮ್ಮೆ ನಾವು ಕಟ್ಟಿದ ಮನೆಯಲ್ಲಿ ನಾವು ವಾಸವಿರುವುದಕ್ಕೆ ಆಗುವುದಿಲ್ಲ. ರಾಜಕೀಯದಲ್ಲಿ ಇದು ವಿಪರ್ಯಾಸ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅನುಕೂಲವಾಗುತ್ತದೆ ಎಂದು ಜೆಡಿಎಸ್‌ ವಿರೋಧಿಸುತ್ತಿದ್ದ ನಾನೇ ಮೈತ್ರಿಗೆ ಮುಂದೆ ನಿಂತು ವರಿಷ್ಠರಿಗೆ ಪ್ರಸ್ತಾಪನೆ ಸಲ್ಲಿಸಿ ಪ್ರಕ್ರಿಯೆ ಪ್ರಾರಂಭವಾಗುವಂತೆ ಮಾಡಿದೆ. ಆದರೆ ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿಯಾದ ಬಳಿಕ ನನಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು.

ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಯೋಗೇಶ್ವರ್‌ ಕಾರಣವಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರಲ್ಲ?
– ಕುಮಾರಸ್ವಾಮಿ ಈಗ ಏನು ಬೇಕಾದರೂ ಹೇಳಬಹುದು. ಸತ್ಯ ಏನು ಎಂದು ಅವರ ಜತೆ ಇರುವ ಕೆಲವರಿಗೆ ಗೊತ್ತಿದೆ. ಬಿಜೆಪಿ ದಿಲ್ಲಿ ನಾಯಕರು ಜೆಡಿಎಸ್‌ ಜತೆಗಿನ ಮೈತ್ರಿಗೆ ಮೊದಲು ಒಪ್ಪಿರಲಿಲ್ಲ. ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಎಂದು ಹೇಳಿದ್ದರು. ಆದರೆ ನಾನು ದೇವೇಗೌಡರು ಇದಕ್ಕೆ ಒಪ್ಪುವುದಿಲ್ಲ, ಜೆಡಿಎಸ್‌ದೊಂದಿಗೆ ಮೈತ್ರಿ ಮಾಡಿಕೊಂಡರೆ ಅನುಕೂಲವಾಗುತ್ತದೆ ಎಂದು ವರಿಷ್ಠರನ್ನು ಒಪ್ಪಿಸಿದೆ.

ಬಿಜೆಪಿ ನಾಯಕರುಗಳೆಲ್ಲ ನಿಮ್ಮ ಪರ ಮಾತನಾಡಿದರೂ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುಮ್ಮನಿದ್ದರಲ್ಲಾ? ಅವರಿಗೆ ನಿಮ್ಮ ಬಗ್ಗೆ ವಿರೋಧವಿತ್ತಾ? ಯಡಿಯೂರಪ್ಪ ನಿಮಗೆ ಟಿಕೆಟ್‌ ನೀಡಲು ವಿರೋಧ ಮಾಡಿದರಾ?

-ಹಾಗೇನೂ ಇಲ್ಲ, ಯಡಿಯೂರಪ್ಪ ಅವರ ಬಗ್ಗೆ ನಾನು ಈ ಸಂದರ್ಭದಲ್ಲಿ ಯಾವುದೇ ಆಪಾದನೆ ಮಾಡುವುದಿಲ್ಲ. ಎರಡು ಕ್ಷೇತ್ರ ಬಿಜೆಪಿಗೆ ಬಿಟ್ಟು ಕೊಟ್ಟ ಮೇಲೆ ಜೆಡಿಎಸ್‌ ಗೆದ್ದಿರುವ ಈ ಕ್ಷೇತ್ರ ತಾಂತ್ರಿಕವಾಗಿ ಜೆಡಿಎಸ್‌ಗೆ ಸೇರಬೇಕಾದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಅವರು ಕೊನೇ ಕ್ಷಣದಲ್ಲಿ ಆ ಮಾತು ಹೇಳಬೇಕಿರಲಿಲ್ಲ. ಅವರ ಕೈಯಲ್ಲಿ ಯಾರು ಹೇಳಿಸಿದರು ಎಂಬುದು ನನಗೆ ಗೊತ್ತು. ಅದು ಇಲ್ಲಿ ಬೇಡ. ಆದರೆ ವಿಜಯೇಂದ್ರ ನನ್ನ ಪರವಾಗಿ ಟಿಕೆಟ್‌ಗೆ ಪ್ರಯತ್ನ ಪಟ್ಟರು. ಮಂಗಳವಾರ ಸಹ ದೂರವಾಣಿ ಕರೆ ಮಾಡಿ ಮಾತನಾಡಿದರು.

Advertisement

ಯೋಗೇಶ್ವರ್‌ ಪಕ್ಷಾಂತರಿ ಎಂದು ನಿಮ್ಮ ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರಲ್ಲ?
-ಹೌದು, ನಾನು ಪಕ್ಷಾಂತರಿ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಪಕ್ಷಾಂತರ ಮಾಡಿದ್ದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ಕ್ಷೇತ್ರದ ಜನರ ಅಭಿವೃದ್ಧಿಗಾಗಿ. ನಾನು ಪಕ್ಷಾಂತರ ಮಾಡಿದ್ದರಿಂದ ಇಂದು ನನ್ನ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು ಸಾಧ್ಯವಾಯಿತು. ಬಿಜೆಪಿಯವರು ಟಿಕೆಟ್‌ ಕೊಟ್ಟಿದ್ದರೆ ನಾನು ಅಲ್ಲೇ ಇರುತ್ತಿದ್ದೆ ಅಲ್ಲವೇ? ನನ್ನನ್ನು ಪಕ್ಷಾಂತರಿ ಮಾಡಿದ್ದು ಯಾರು?

ಜೆಡಿಎಸ್‌ನಿಂದ ಸ್ಪರ್ಧಿಸುವವಂತೆ ನಿಮಗೆ ನೀಡಿದ್ದ ಅವಕಾಶವನ್ನು ನಿರಾಕರಿಸಿದ್ದು ಯಾಕೆ?
ನಾನು 30 ವರ್ಷದಿಂದ ಜೆಡಿಎಸ್‌ ವಿರುದ್ಧ ವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಕಾರ್ಯಕರ್ತರು ಆ ಚಿಹ್ನೆಗೆ ವಿರುದ್ಧವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆ ಚಿಹ್ನೆಯಡಿ ಸ್ಪರ್ಧೆ ಮಾಡಲು ಸ್ವಾಭಾವಿಕವಾಗಿ ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ.

 ಡಿ.ಕೆ. ಶಿವಕುಮಾರ್‌ ಜತೆ ಸಾಕಷ್ಟು ರಾಜಕೀಯ ಸಂಘರ್ಷ ಮಾಡಿಕೊಂಡಿದ್ದೀರಿ, ಈಗ ಹೊಂದಾಣಿಕೆ ಸಾಧ್ಯವೇ?
ರಾಜಕಾರಣದಲ್ಲಿ ಯಾರೂ ಶಾಶ್ವತವಾಗಿ ಶತ್ರುವೂ ಅಲ್ಲ, ಮಿತ್ರನೂ ಅಲ್ಲ. ನಾನು ಡಿ.ಕೆ. ಶಿವಕುಮಾರ್‌ ಜೊತೆ ಸಂಘರ್ಷ ಮಾಡಿಕೊಂಡಿ ರುವುದು ಅಭಿವೃದ್ಧಿ ವಿಷಯದಲ್ಲಿ, ನಮ್ಮಿಬ್ಬರ ನಡುವೆ ವೈಯಕ್ತಿಕ ವಿರೋಧಗಳೇನೂ ಇಲ್ಲ.

 ಕಾಂಗ್ರೆಸ್‌ಗೆ ಸೇರ್ಪಡೆ ಬಗ್ಗೆ ಹಲವು ತಿಂಗಳ ಹಿಂದೆಯೇ ಮಾತುಕತೆ ನಡೆದಿತ್ತಾ?
ಇಲ್ಲ. ನನಗೆ ಕೊನೇ ಕ್ಷಣದವರೆಗೂ ಎನ್‌ಡಿಎ ನಾಯಕರು ನನಗೆ ಬಿಫಾರಂ ನೀಡುತ್ತಾರೆಂದು ನಂಬಿದ್ದೆ. ಅದಕ್ಕಾಗಿ ಕಾಯ್ದು ಕುಳಿತಿದ್ದೆ. ಕುಮಾರಸ್ವಾಮಿ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂಬ ಮಾಹಿತಿ ಸ್ಪಷ್ಟವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ.

ಬಿಜೆಪಿ ಟಿಕೆಟ್‌ ಕೊಡುವುದಾಗಿ ಹೇಳಿದ್ದರೂ ಪಕ್ಷ ಬಿಟ್ಟಿದ್ದು ಯಾಕೆ?
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸಮೀಪಿಸುತ್ತಿದೆ. ಒಂದೆಡೆ ಜೆಡಿಎಸ್‌ ಮುಖಂಡರು ನೀಡುತ್ತಿದ್ದ ಹೇಳಿಕೆ ನನ್ನ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿತ್ತು. ನಮ್ಮ ಪಕ್ಷದ ರಾಜ್ಯ ನಾಯಕರ ಮಾತು ನಂಬಿ ನಾನು ಮಂಗಳವಾರ ರಾತ್ರಿ 10 ಗಂಟೆಯವರೆಗೆ ಕಾಯುತ್ತಿದ್ದೆ. 10 ಗಂಟೆಯಾದರೂ ಎಚ್‌. ಡಿ.ಕುಮಾರಸ್ವಾಮಿ ಮಲಗಿದ್ದಾರೆ, ಅವರ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದರು. ಇವರ ಚಲನ ವಲನ ನೋಡಿ ನಾನು ಈ ನಿರ್ಧಾರ ಕೈಗೊಳ್ಳಬೇಕಾದ್ದು ಅನಿವಾರ್ಯವಾಯಿತು.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next