Advertisement
ಅಂತೂ ನಿರ್ಭಯಾಳಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಕ್ಕಿದೆ. ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಿದ ನ್ಯಾಯ ಪೀಠದ ಮೇಲೆ ಗೌರವ ಹೆಚ್ಚಾಗಿದೆ. ನಾಲ್ಕು ವರ್ಷವಾದರೂ ಸರಿ ಪಾತಕಿಗಳಿಗೆ ಶಿಕ್ಷೆಯಾಯಿತಲ್ಲಾ ಅದೇ ನ್ಯಾಯಕ್ಕೆ, ಹೆಣ್ಣಿಗೆ ಸಂದ ಗೌರವ. “ಸಮಾಜಕ್ಕೆ ಸಂದೇಶ ತಲುಪಿಸಲು ಯಾರನ್ನೋ ಗಲ್ಲಿಗೇರಿಸುವುದು ತರವಲ್ಲ, ಅಪರಾಧಿಗಳು ಇನ್ನೂ ಯುವಕರು, ಬಡತನದ ಮೂಲದವರು ಶಿಕ್ಷೆ ಪ್ರಮಾಣ ತಗ್ಗಿಸಬೇಕಿತ್ತು’ ಎಂದು ಹೇಳಿದ ಅಪರಾಧಿಗಳ ಪರ ವಕೀಲರಿಗೆ ತಮ್ಮ ಮನೆಯ ಹೆಣ್ಣುಮಕ್ಕಳ ನೆನಪಾಗಲಿಲ್ಲವೇ?
Related Articles
Advertisement
ನಿರ್ಭಯಾ ತನ್ನ ಭಾವಿ ಬದುಕಿನ ಬಗ್ಗೆ ಎಷ್ಟು ಕನಸು ಕಂಡಿದ್ದಳ್ಳೋ? ತನ್ನ ಕನಸುಗಳನ್ನು ತನ್ನ ತಾಯಿಯ ಬಳಿ ಎಷ್ಟು ಬಾರಿ ಹೇಳಿಕೊಂಡಿದ್ದಳೊ? ಅದನ್ನು ನೆನೆದು ಆ ತಾಯಿ ಎಷ್ಟು ವಿಲಪಿಸಿರಬಹುದು ಎಂಬುದನ್ನು ನೆನಸಿಕೊಂಡರೆ ಕಣ್ಣಲ್ಲಿ ನೀರು ಧಾರೆಯಾಗುತ್ತದೆ.
ಎಷ್ಟು ಬಾರಿ ನಿದ್ರೆಯಲ್ಲಿ ಮಗಳು ಕೂಗಿಕೊಂಡಂತೆ ಭಾಸವಾಗಿ ಬೆಚ್ಚಿ ಎದ್ದಿರಬಹುದು ಆ ತಾಯಿ? ಈ ವಿಲಕ್ಷಣ ಕೃತ್ಯದಿಂದ ತನ್ನ ಮಗಳಿಗೆ ಮನಸ್ಸಿಗೆ-ದೇಹಕ್ಕೆ ಎಷ್ಟು ಘಾಸಿಯಾಯಿತೋ ಎಂಬುದನ್ನು ಯೋಚಿಸುವಾಗ ತಾಯಿ ಕರುಳು ಎಷ್ಟು ಸಂಕಟಪಟ್ಟಿರಬಹುದು.
ಒಂದು ಹಬ್ಬ ಹರಿದಿನಗಳಲ್ಲಿ, ನಿರ್ಭಯಾಳ ಹುಟ್ಟಿದ ದಿನದಂದು ಆ ತಾಯಿ ಹೃದಯ ಪಡುವ ವೇದನೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ನಿರ್ಭಯಾ ಈ ಲೋಕದಲ್ಲಿಲ್ಲ. ಅವಳು ಎಲ್ಲ ಜಂಜಡಗಳಿಂದ ಮುಕ್ತಗೊಂಡು ಬೇರೆ ಲೋಕ ಸೇರಿಕೊಂಡಿದ್ದಾಳೆ. ಇನ್ನಾದರೂ ಅವಳ ಆತ್ಮಕ್ಕೆ ಚಿರಶಾಂತಿ ದೊರೆಯಬಹುದು.
ಆದರೆ ಬದುಕಿರುವ, ಇನ್ನೂ ಎಷ್ಟೋ ವರ್ಷಗಳು ಇಲ್ಲಿ ಬದುಕು ಸವೆಸಬೇಕಾದ ಆಶಾತಾಯಿಗೆ ಈ ನೋವು ನಿರಂತರ. ಪಾತಕಿಗಳಿಗೆ ಶಿಕ್ಷೆಯಾಯಿತೆಂದು ಕೊಂಚ ನೆಮ್ಮದಿ ಸಿಗಬಹುದು ಅಷ್ಟೆ ವಿನಾ ಮಗಳನ್ನು ಬರ್ಬರವಾಗಿ ಕಳೆದುಕೊಂಡ ನೋವನ್ನು ಮರೆಯುವುದೆಂತು? ನಾಲ್ಕು ವರ್ಷಗಳಾದರೂ ಆ ಹೆತ್ತಹೊಟ್ಟೆಯಲ್ಲಿ ದುಃಖದ ಕೆಂಡ ಜ್ವಲಿಸುತ್ತಲೇ ಇರುತ್ತದೆ. ಅದು ನಿರಂತರ ಕೂಡಾ. ಹೋಗಲಿ ಈ ಮಗಳನ್ನು ಕಳೆದುಕೊಂಡ ನೋವು ಇನ್ನೊಬ್ಬ ಮಗಳ ಬೆಳವಣಿಗೆಯನ್ನು ನೋಡುತ್ತ ಮರೆಯಬಹುದು ಎನ್ನುವುದಕ್ಕೆ ಆಕೆಗೆ ಇನ್ನೊಬ್ಬ ಹೆಣ್ಣುಮಗಳೂ ಇಲ್ಲ. ದೇವರೇ ಆಕೆಯ ಮನಸ್ಸಿಗೆ ತಂಪು ಕೊಡಬೇಕು. ಆ ಹೃದಯವನ್ನು ಗಟ್ಟಿಗೊಳಿಸಬೇಕು. ಆ ದೇವರಲ್ಲಿ ನನ್ನ ಪ್ರಾರ್ಥನೆ ಇಷ್ಟೇ: ಯಾವ ತಾಯಿಗೂ ಆಶಾದೇವಿಗೆ ಕೊಟ್ಟಂಥ ದುಃಖ ಕೊಡಬೇಡ. ತಾಯಿಯ ಎದುರಲ್ಲಿ ಮಕ್ಕಳನ್ನು ತಂಪಾಗಿಡದಿದ್ದರೂ ಪರವಾಗಿಲ್ಲ. ಎಷ್ಟೇ ಕಷ್ಟಕೋಟಲೆ ಕೊಟ್ಟರೂ ಪರವಾಗಿಲ್ಲ. ಆದರೆ ಇಂಥ ಒಂದು ಅಮಾನುಷ ಕೃತ್ಯ ಯಾವ ಮಕ್ಕಳಿಗೂ ಆಗದಿರಲಿ.
ನಿರ್ಭಯಾಳ ಬಾಳನ್ನು ಹೊಸಕಿಹಾಕಿದ ಪಾತಕಿಗಳಿಗೆ ಶಿಕ್ಷೆಯಾದದ್ದು ಹೆಣ್ಣುಮಕ್ಕಳು ಇನ್ನು ಮುಂದೆ ನಿರ್ಭಯವಾಗಿರಬಹುದು ಎಂಬ ನಮ್ಮೆಲ್ಲರ ಆಶಾಭಾವನೆಯನ್ನು ನ್ಯಾಯಪೀಠ ಎತ್ತಿಹಿಡಿದಿದೆ. ನಿರ್ಭಯಾಳಿಗಾದ ಅನ್ಯಾಯಕ್ಕೆ ಕೊಂಚಮಟ್ಟಿಗಾದರೂ ನ್ಯಾಯ ಒದಗಿಸಿಕೊಟ್ಟ ನ್ಯಾಯಪೀಠಕ್ಕೆ ನಾನು ತಲೆಬಾಗಿ ವಂದಿಸುತ್ತೇನೆ. ಆಶಾದೇವಿಯ ಹೆತ್ತಕರುಳು ಇನ್ನಾದರೂ ತಂಪಾಗಲಿ ಎಂದು ಹಾರೈಸುತ್ತೇನೆ. ಈ ನ್ಯಾಯ ವಿಶ್ವ ಅಮ್ಮಂದಿರ ದಿನಾಚರಣೆಗೆ ಸಿಕ್ಕ ಉಡುಗೊರೆ ಎಂದು ಭಾವಿಸೋಣವೇ?
– ವೀಣಾ ರಾವ್