Advertisement

Hunsur: ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಂದ ಕಾರ್ಯಾಚರಣೆ

10:22 AM Aug 26, 2023 | Team Udayavani |

ಹುಣಸೂರು: ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳ ನೇತೃತ್ವದ ತಂಡ ಹುಣಸೂರಿನ ವಿವಿಧ ಅಂಗಡಿ, ಬಾರ್ ಆಂಡ್ ರೆಸ್ಟೋರೆಂಟ್,  ಟೀ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಅಕ್ರಮ ತಂಬಾಕು ಉತ್ಪನ್ನಗಳ ಮಾರಾಟ, ಕೋಟ್ಪಾ ಕಾಯ್ದೆ ಉಲ್ಲಂಘನೆ ಸೇರಿದಂತೆ 114 ಪ್ರಕರಣ ದಾಖಲಿಸಿ 14,400 ರೂ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದರು.

Advertisement

ಆ. 25ರ ಶುಕ್ರವಾರದಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್ ನೇತೃತ್ವದಲ್ಲಿ ನಗರದ ಬಜಾರ್ ರಸ್ತೆ, ಎಸ್.ಜೆ.ರಸ್ತೆ, ಹೊಸ ಮತ್ತು ಹಳೇ ಬಸ್ ನಿಲ್ದಾಣದ ಮುಂಬಾಗದ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡವು ಅಂಗಡಿಗಳಲ್ಲಿ ಚಿಲ್ಲರೆಯಾಗಿ ಬೀಡಿ-ಸಿಗರೇಟ್ ಮಾರುವುದು, ಅಂಗಡಿಗಳ ಮುಂದೆ ಸಿಗರೇಟ್‌ನಿಂದಾಗುವ ದುಷ್ಪರಿಣಾಮದ ಎಚ್ಚರಿಕೆ ಫಲಕ ಅಳವಡಿಸದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಕೋಟ್ಪಾ ಕಾಯ್ದೆ ಪ್ರಕರಣದಡಿ ದಂಡ ವಿಧಿಸಿದ್ದಾರೆ.

ಕುರುಕಲು ತಿಂಡಿಗೂ ದಂಡ:

ನಗರದ ವಿವಿಧ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೂ ದಾಳಿ ನಡೆಸಿದ ತಂಡ ಬ್ರಾಂಡೆಡ್ ಅಲ್ಲದ ಕುರುಕಲು ತಿಂಡಿಗಳನ್ನು ಪೂರೈಸುತ್ತಿದ್ದುದ್ದನ್ನು ಪತ್ತೆ ಹಚ್ಚಿ ಮೂರು ಮದ್ಯದಂಗಡಿಗಳಿಗೆ ತಲಾ ಮೂರು ಸಾವಿರ ರೂ. ದಂಡ ವಿಧಿಸಿದರು.

ಮನೆ ಬಳಕೆ ಸಿಲಿಂಡರ್ ಗೂ ದಂಡ:

Advertisement

ಹೋಟೆಲ್‌ನಲ್ಲಿ ಮನೆ ಬಳಕೆಯ ಸಿಲಿಂಡರನ್ನು ಬಳಸುತ್ತಿದ್ದ ಒಂದು ಪ್ರಕರಣ ಪತ್ತೆ ಹಚ್ಚಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಒಟ್ಟು 114 ಪ್ರಕರಣ ದಾಖಲಿಸಿ 14,400 ರೂ. ದಂಡ ವಿಧಿಸಲಾಗಿದೆ ಎಂದು  ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಮಾಹಿತಿ ನೀಡಿದರು.

ದಾಳಿ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ನವೀದುಲ್ಲಾ ಷರೀಫ್, ಆಪ್ತ ಸಮಾಲೋಚಕ ವಿಜಯ್‌ ಕುಮಾರ್,   ಎ.ಸಿ.ಡಿ.ಪಿ.ಓ.ವೀಣಾ, ನಗರಸಭೆ ಹಿರಿಯ ಆರೋಗ್ಯ  ನಿರೀಕ್ಷಕ ಶಶಿಕುಮಾರ್,  ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಹಾಗೂ ಮಹೇಶ್, ಮಲೇಶ್ವರ್,  ಕೆ.ವಿ.ರುದ್ರಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next