ಕೋಸ್ಟಲ್‌ವುಡ್ ಈಗ ಬೇರೆ ಬೇರೆ ಕಾರಣಗಳಿಂದಾಗಿ ಸುದ್ದಿಯಲ್ಲಿದೆ ಹಾಗೂ ಸ್ವಾವಲಂಬಿಯಾಗುತ್ತ ಹೆಜ್ಜೆ ಇಟ್ಟಿದೆ. ಹಿಂದೆ ಸಿನೆಮಾದ ಬೇರೆ ಬೇರೆ ಕೆಲಸಗಳಿಗಾಗಿ ಬೆಂಗಳೂರನ್ನು ಆಶ್ರಯಿಸಬೇಕಾಗಿತ್ತು. ಆದರೆ, ಕಾಲ ಬದಲಾದಂತೆ ಮಂಗಳೂರಲ್ಲಿಯೇ ಎಲ್ಲವೂ ಸಿಗುವಂತಾಗಿದೆ.
ತುಳು ಸಿನೆಮಾ ಮಾಡಲು ಬೇರೆ ಬೇರೆ ನಗರಕ್ಕೆ ಪರದಾಡುವ ಪ್ರಮೇಯ ಈಗ ಇಲ್ಲ. ಕಲಾ ನಿರ್ದೇಶನ, ಸ್ಟುಡಿಯೋ, ಎಡಿಟಿಂಗ್ ಸಹಿತ ವಿವಿಧ ರೀತಿಯ ಸೌಕರ್ಯಗಳು ಇಲ್ಲೇ ಸಿಗುತ್ತಿವೆ. ಆದ್ದರಿಂದ ತುಳು ಚಿತ್ರರಂಗ ಹೊರಗಿನವರ ಸಹಾಯ ಪಡೆಯುವ ಅಗತ್ಯ ಕಡಿಮೆಯಾಗಿದೆ. ಈಗ ಆ ಸಾಲಿಗೆ ಕಾಸ್ಟ್ಯೂಮ್ ಡಿಸೈನಿಂಗ್ ಕೂಡ ಸೇರಿದೆ.
ಶರತ್ ಪೂಜಾರಿ ಅವರು ಈಗಾಗಲೇ ಕೆಲವು ಸಿನೆಮಾಗಳಲ್ಲಿ ಕಾಸ್ಟ್ಯೂಮ್ ಡಿಸೈನಿಂಗ್ ಮಾಡಿ ಸುದ್ದಿಯಲ್ಲಿದ್ದವರು. ಈಗ ಕಾಸ್ಟ್ಯೂ ಮ್ ಡಿಸೈನಿಂಗ್ ಮಂಗಳೂರು ವ್ಯಾಪ್ತಿಯಲ್ಲಿ ಸಿಗುವಂತೆ ಅವರು ಮಾಡಿದ್ದಾರೆ. ಪ್ರಸ್ತುತ ದೇವದಾಸ್ ಕಾಪಿಕಾಡ್ ಅವರ ಜಬರ್ದಸ್ತ್ ಶಂಕರ ಸಿನೆಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಅವರು ಈಗಾಗಲೇ, ಜುಗಾರಿ, ಅಂಬರ ಕ್ಯಾಟರರ್, ಪಮ್ಮಣ್ಣೆ ದಿ ಗ್ರೇಟ್, ತಂಬಿಲ, ಗಿರಿಗಿಟ್
ಮೊದಲಾದ ಸಿನೆಮಾಗಳಿಗೆ ಕಾಸ್ಟ್ಯೂ ಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ವಸ್ತ್ರ ವಿನ್ಯಾಸದ ಕುರಿತು ಅಪಾರ ಆಸಕ್ತಿ ಹೊಂದಿರುವ ಅವರು ಈಗಿನ ಕಾಲಮಾನಕ್ಕೆ ಹೊಂದಿಕೊಳ್ಳುವ ಮತ್ತು ತುಳುನಾಡಿನ ಮಣ್ಣಿಗೆ ಪೂರಕವಾಗುವಂಥ ಅತ್ಯಾಕರ್ಷಕ ವಸ್ತ್ರ ವಿನ್ಯಾಸ ಮಾಡುತ್ತಾರೆ.