ಆಗೆಲ್ಲಾ ಕೂಡು ಕುಟುಂಬ ಇದ್ದುದರಿಂದ ದರ್ಜಿ ಮನೆಗೇ ಬಂದು, ಎಲ್ಲರ ಅಳತೆ ತೆಗೆದುಕೊಂಡು ಹೋಗುತ್ತಿದ್ದ. ಅಮ್ಮನೂ ಅಷ್ಟೆ, ನಮಗೆಲ್ಲ ಲಂಗ ಹೊಲಿಸುವಾಗ, “ಬೆಳೆಯುವ ಹುಡುಗಿಯರು ಒಂದೆರಡು ಇಂಚು ಉದ್ದ ಹೊಲಿಯಪ್ಪ, ಹಾಗೇ ಒಂದೆರಡು ಇಂಚು ಮಡಚಿಯೂ ಹೊಲಿ. ಬ್ಲೌಸ್‌ಗೂ ಸೈಡ್‌ಗೆ ಒಂದಿಷ್ಟು ಬಟ್ಟೆ ಬಿಟ್ಟು ಹೊಲಿಗೆ ಹಾಕು, ಬೇಕಾದಾಗ ಬಿಚ್ಚಿಕೊಳ್ಳಬಹುದು’ ಎನ್ನುತ್ತಿದ್ದರು…
ಮೊನ್ನೆ ಬಟ್ಟೆ ಖರೀದಿಸಲು ಅಂಗಡಿಗೆ ಹೋಗಿದ್ದೆವು. ನನ್ನ ತಂಗಿಯ ಮಗ, ಏಳನೇ ತರಗತಿಯಲ್ಲಿ ಓದುತ್ತಿರುವ ಜೀತೂ ಹೇಳುತ್ತಿದ್ದ- “ದೊಡ್ಡಮ್ಮ, ನನ್ನ ಪ್ಯಾಂಟು ಶರ್ಟು ನೋಡು ಎಷ್ಟು ಚಿಕ್ಕದಾಗಿದೆ. ಈ ಅಮ್ಮನಿಗೆ ಗೊತ್ತಾಗುವುದೇ ಇಲ್ಲ. ಖರೀದಿಸುವಾಗ- ಎರಡು ಇಂಚು ದೊಡ್ಡದು ಕೊಡಿ. ಬೆಳೆಯುವ ಹುಡುಗ ಅಂತ ಹೇಳಿ ದೊಡ್ಡ ಸೈಜು ತೆಗೆದುಕೊಳ್ಳುತ್ತಾರೆ. ಅದನ್ನು ಹಾಕಿಕೊಂಡರೆ ದೊಗಲೆ ದೊಗಲೆಯಾಗಿರುತ್ತದೆ. ಈಗ ಇರುವ ಬಟ್ಟೆಗಳನ್ನೇ ಹಾಕಿಕೋ, ಈ ಹೊಸ ಬಟ್ಟೆಯನ್ನು ಮುಂದಿನ ವರ್ಷ ಹಾಕಿಕೊಳ್ಳುವೆಯಂತೆ ಎಂದು ಅದನ್ನು ಹಾಗೆಯೇ ಬೀರೂನಲ್ಲಿ ಮಡಚಿಡುತ್ತಾರೆ. ಅದನ್ನು ಮತ್ತೆ ಅಮ್ಮ ಹಾಕಿಕೊಳ್ಳಲು ಕೊಟ್ಟಾಗ ಪ್ಯಾಂಟು ಒಂದಿಂಚು ಮೇಲೇರಿರುತ್ತದೆ, ಶರ್ಟ್ ಗಿಡ್ಡಾಗಿ ಟೈಟಾಗಿರುತ್ತದೆ. ತಂಗಿಯದೂ ಅಷ್ಟೆ, ಫ್ರಾಕ್ ಅನ್ನು ಲಂಗದ ಸೈಜು ತೆಗೆದುಕೊಂಡಿರುತ್ತಾರೆ. ಅದನ್ನು ಮತ್ತೆ ಹಾಕಿಕೊಳ್ಳಲು ಕೊಟ್ಟಾಗ ಮಿನಿಸ್ಕರ್ಟ್ ಆಗಿರುತ್ತೆ. ಚಿಕ್ಕದಾಯಿತು ಅಂದರೆ, ಅದರ ಕೆಳಗೊಂದು ಪ್ಯಾಂಟು ಹಾಕುತ್ತಾರೆ. ಒಟ್ಟಿನಲ್ಲಿ ಸರಿಯಾದ ಸೈಜಿನ ಡ್ರೆಸ್ ಹಾಕಿಕೊಂಡೇ ಇಲ್ಲ ನೋಡು ನಾವು’ ಎಂದು ಮೂತಿ ಉಬ್ಬಿಸಿ ಹೇಳಿದಾಗ ನಕ್ಕೂ ನಕ್ಕೂ ಸುಸ್ತಾಯ್ತು.
ಮರುಕ್ಷಣವೇ ನಮ್ಮ ಬಾಲ್ಯ ನೆನಪಾಯಿತು. ಆಗೆಲ್ಲಾ ರೆಡಿಮೇಡ್ ಬಟ್ಟೆಗಳನ್ನು ಕೊಳ್ಳುತ್ತಿದ್ದುದು ಕಡಿಮೆ. ಏನಿದ್ದರೂ ತಾನ್‌ನಲ್ಲಿ ಹರಿಸಿ ತಂದ ಬಟ್ಟೆಯನ್ನು ಪರಂಪರಾಗತವಾಗಿ ಹೊಲಿಸುತ್ತಿದ್ದ ಟೈಲರ್‌ಗೆà ಕೊಡುತ್ತಿದುದು. ಆಗೆಲ್ಲಾ ಕೂಡುಕುಟುಂಬ ಇದ್ದುದರಿಂದ ದರ್ಜಿ ಮನೆಗೇ ಬಂದು, ಎಲ್ಲರ ಅಳತೆ ತೆಗೆದುಕೊಂಡು ಹೋಗುತ್ತಿದ್ದ. ಅಮ್ಮನೂ ಅಷ್ಟೆ, ನಮಗೆಲ್ಲ ಲಂಗ ಹೊಲಿಸುವಾಗ, “ಬೆಳೆಯುವ ಹುಡುಗಿಯರು ಒಂದೆರಡು ಇಂಚು ಉದ್ದ ಹೊಲಿಯಪ್ಪ, ಹಾಗೇ ಒಂದೆರಡು ಇಂಚು ಮಡಚಿಯೂ ಹೊಲಿ. ಬ್ಲೌಸ್‌ಗೂ ಸೈಡಿಗೆ ಒಂದಿಷ್ಟು ಬಟ್ಟೆ ಬಿಟ್ಟು ಹೊಲಿಗೆ ಹಾಕು, ಬೇಕಾದಾಗ ಬಿಚ್ಚಿಕೊಳ್ಳಬಹುದು’ ಎನ್ನುತ್ತಿದ್ದರು. ಹಬ್ಬಕ್ಕೆ ಅವನು ಹೊಲಿದ ಬಟ್ಟೆ ಹಾಕಿಕೊಂಡಾಗ, ಲಂಗ ಕಾಲಿಗೆ ತೊಡರಿ ಎಷ್ಟೋ ಸಲ ಬಿದ್ದದ್ದೂ ಇದೆ. ಇಂಥ ಹೊಸ ಬಟ್ಟೆಗಳಿಗಿಂತ ರಿಪೇರಿ ಮಾಡಿದ ಅಕ್ಕಂದಿರ ಗಿಡ್ಡನೆಯ ಲಂಗವೇ ತುಂಬಾ ಹಿತವೆನಿಸುತ್ತಿತ್ತು. ಶಾಲೆಯ ಸಮವಸ್ತ್ರವೂ ಅಷ್ಟೆ, ಒಂದೇ ಸರ್ಕಾರಿ ಶಾಲೆಯಲ್ಲಿ ಎಲರೂ ಕಲಿಯುತ್ತಿದ್ದುದರಿಂದ ದೊಡ್ಡವರದು, ಚಿಕ್ಕವರಿಗೆ ವರ್ಗಾವಣೆ ಆಗುತ್ತಿತ್ತು. ಸ್ವಲ್ಪ ಎತ್ತರ ಬೆಳೆದಾಗ ಕೆಳತುದಿಗೆ ಮಡಚಿದ ಸ್ಕರ್ಟ್‌ನ ಹೊಲಿಗೆ ಬಿಚ್ಚಿ, ಯೂನಿಫಾರ್ಮ್ನ ಮೇಲೆ ಮಾಸಲು ಬಣ್ಣ, ಕೆಳಗೆ ಬಾರ್ಡರ್‌ಗೆ ಡಾರ್ಕ್ ಕಲರ್ ಹಚ್ಚಿದಂತೆ ವಿಚಿತ್ರವಾಗಿ ಕಾಣಿಸುತ್ತಿತ್ತು.
ತಮ್ಮಂದಿರಿಗೂ ಅಷ್ಟೆ; ದೊಡ್ಡವರ ಶರ್ಟನ್ನೇ ಚಿಕ್ಕದು ಮಾಡಿ ದರ್ಜಿ ಹೊಲಿದುಕೊಡುತ್ತಿದ್ದ, ಅವೇ ಆರಾಮದಾಯಕವೆನಿಸುತ್ತಿತ್ತು ಕೂಡ. ಮನೆಯ ದೊಡ್ಡ ಗಂಡುಮಕ್ಕಳಿಗಂತೂ ಒಬ್ಬರ ಅಳತೆ ತೆಗೆದುಕೊಂಡು ಒಂದಿಪ್ಪತ್ತು ಪಟ್ಟಾಪಟ್ಟಿ ಚಡ್ಡಿ ಹೊಲಿದುಬಿಡುತ್ತಿದ್ದ. ಹೇಗಿದ್ದರೂ ಕಟ್ಟಿಕೊಳ್ಳಲು ಲಾಡಿ ಇರುತ್ತಿದ್ದರಿಂದ ಅದು ಎಲ್ಲರ ಸೈಜಿಗೂ ಫಿಟ್‌ಆಗಿಬಿಡುತ್ತಿತ್ತು. ಹೆಂಗಸರ ಸೀರೆಗಳು ಒಂದೇ ತರಹದ ಅಂಚು, ಮುಸುಕು. ಬಣ್ಣ ಮಾತ್ರ ಬೇರೆ ಬೇರೆ ಇದ್ದುದ್ದರಿಂದ ಎಂದೂ ಕನ್‌ಫೂಸ್ ಆಗುತ್ತಿರಲಿಲ್ಲ. ಅವೂ ಹಳೆಯವಾದರೆ ನಮಗೆ ದಿನ ಉಡಲು ಲಂಗಗಳಾಗುತ್ತಿದ್ದವು. ಅಜ್ಜ ಯಾವಾಗಲೂ ಕಚ್ಚೆ ಪಂಚೆ ತೊಡುತ್ತಿದ್ದರು, ಅಜ್ಜಿ ಹದಿನಾರು ಗಜದ ವೈಥಿಯಮ್ ಸೀರೆ. ಅಜ್ಜಿಯ ಸೀರೆಯಂತೂ ಹಳತಾದಾಗ ಅಡುಗೆ ಮನೆಯಲ್ಲಿ ಮಸಿಬಟ್ಟೆಯಾಗಿ, ಒರಸುಬಟ್ಟೆಯಾಗಿ, ಚಿಕ್ಕಮಕ್ಕಳ ಲಂಗೋಟಿಯಾಗಿ, ದುಪ್ಪಡಿಯಾಗಿ, ಮನೆಯ ದಿಂಬುಗಳಿಗೆ ಕವರಾಗಿ, ಬೆಡ್‌ಕವರ್ ಆಗಿ, ಚಿಕ್ಕ ಕಂದಮ್ಮಗಳ ಜೋಲಿಯಾಗಿ, ಜೋಕಾಲಿಯಾಗಿ, ಚೀಲಗಳಾಗಿ, ಕಟೈìನ್ ಆಗಿ ಕೊನೆಗೆ ಹೆಣ್ಣುಮಕ್ಕಳ ತಿಂಗಳ ದಿನಗಳಿಗೆ ಆಸರೆಯಾಗುತ್ತಿದ್ದುದನ್ನು ನೆನೆಸಿಕೊಂಡರೆ ಈಗ ಅಚ್ಚರಿಯಾಗುತ್ತದೆ. ಇಂದಿನ ಬಹುತೇಕ ಬಟ್ಟೆಗಳು ಬರೀ ಯೂಸ್ ಅಂಡ್ ಥ್ರೋಗಳಾಗಿ, ಬಾಳಿಕೆಯೂ ಇಲ್ಲ, ತಾಳಿಕೆಯೂ ಇಲ್ಲದಂತಾಗಿ, ಬೇರೊಂದು ಕೆಲಸಕ್ಕೆ ಉಪಯೋಗವೂ ಆಗದೆ ಸೀದಾ ಕಸದ ಬುಟ್ಟಿಯನ್ನೇ ಸೇರುತ್ತವೆ.
ನಳಿನಿ ಟಿ. ಭೀಮಪ್ಪ, ಧಾರವಾಡ