ಉಡುಪಿ: ನಾನು ಮಾಂಸಾಹಾರಿ ವಿರೋಧಿಯಲ್ಲ, ಉತ್ತೇಜನವನ್ನೂ ನೀಡುವುದಿಲ್ಲ. ಆದರೆ ಗೋಮಾಂಸ ಭಕ್ಷಣೆಗೆ ವಿರೋಧವಿದೆ. ಬ್ರಾಹ್ಮಣರು ಮಾತ್ರ ಮಾಂಸಾಹಾರ ಸ್ವೀಕರಿಸಬಾರದು. ಮದ್ಯ ಸೇವನೆಗೆ ಸಂಪೂರ್ಣ ವಿರೋಧವಿದೆ ಎಂದು ಪರ್ಯಾಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ರಾಕೆಟ್ ಕ್ರಿಯೇಷನ್ಸ್ ಅರ್ಪಿಸುವ ನಟ ರಜನೀಶ್‌ರವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ “ಕೋರಿ ರೊಟ್ಟಿ’ ತುಳು ಸಿನಿಮಾದ ಮುಹೂರ್ತವನ್ನು ರವಿವಾರ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ದೇವರ ಗುಡಿ ಎದುರು ಶ್ರೀಪಾದರು ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ನೆರವೇರಿಸಿದರು.
ಮಧ್ವ ಮಂಟಪದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು ತುಳು ಕರಾವಳಿ ಜನರ ಆಡುಭಾಷೆಯಾಗಿದೆ. ಸ್ಥಳೀಯ ಭಾಷೆಗೆ ಹೆಚ್ಚಿನ ಉತ್ತೇಜನ ಸಿಗಬೇಕು.
ಆಡುಭಾಷೆಯಲ್ಲಿ ಸಿನೆಮಾ ನಿರ್ಮಾಣವಾದಾಗ ಜನರ ಮೇಲೆ ಪ್ರಭಾವ ಹೆಚ್ಚಿಸುತ್ತದೆ ಎಂದರು. ತುಳು ಸಿನೆಮಾದಿಂದ ಲಾಭ ಕಡಿಮೆ. ಭಾಷೆಯ ಉಳಿವಿಗಾಗಿ ರಿಸ್ಕ್ ಮೂಲಕ ಮಾಡಬೇಕಾಗುತ್ತದೆ. ಕಷ್ಟವನ್ನು ಸವಾಲಾಗಿ ಸ್ವೀಕರಿಸಿದವರಿಗೆ ಯಶಸ್ಸು ಸಿಗುತ್ತದೆ. ತುಳು ಸಿನಿಮಾವನ್ನು ಕನ್ನಡ, ತಮಿಳು, ತೆಲಗು ಅಥವಾ ಇನ್ನಾéವುದೋ ಭಾಷಿಕರು ನೋಡುತ್ತಾರೆ ಎನ್ನುವ ಭಾವನೆ ಸರಿಯಲ್ಲ. ತುಳುವರು ಹಣಕೊಟ್ಟು ತುಳು ಸಿನಿಮಾ ನೋಡುವಂತಾಗಬೇಕು. ಇಲ್ಲದಿದ್ದರೆ ತುಳು ಸಾಹಿತ್ಯ, ಕಲೆ, ಹಾಗೂ ಭಾಷೆಗೆ ನಾವೇ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರಮೋದ್ ಮಧ್ವರಾಜ… ಹೇಳಿದರು. ಮಾಂಸಹಾರಿಗಳು ಮಾಂಸಾಹಾರವನ್ನು, ಸಸ್ಯಾಹಾರಿಗಳು ಸಸ್ಯಾಹಾರವನ್ನು ಸೇವಿಸುತ್ತಾರೆ. ಆಹಾರ ಮನುಷ್ಯನ ಹಕ್ಕು ಎಂದರು. ಚಿತ್ರದ ನಟ ರಜನೀಶ್, ನಟಿ ಅನುಶ್ರೀ, ಗಣ್ಯರಾದ ಅಮೃತ್ ಶೆಣೈ, ಅಲೆವೂರು ಹರೀಶ ಕಿಣಿ, ತುಳುಕೂಟದ ಯಶೋದಾ ಕೇಶವ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಮೊಹಮ್ಮದ್ ಅನ್ಸಾರಿ ಉಪಸ್ಥಿತರಿದ್ದರು.