ಶಿವಮೊಗ್ಗ: ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಮತ್ತು ಕಾಲುವೆ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದರಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮನವಿ
ಸಲ್ಲಿಸಲಾಯಿತು.
ಶಿವಮೊಗ್ಗ ತಾಲೂಕು ಆಯನೂರು, ಕುಂಸಿ, ಹಾರನಹಳ್ಳಿ ಹೋಬಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 26 ಕರೆ ಮತ್ತು ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ 1,76,66,972 ರೂ. ಪ್ಯಾಕೇಜ್ ಟೆಂಡರ್ ಕರೆದಿದ್ದು, ಶೇ. 20.11ರಷ್ಟು ಕಡಿಮೆಗೆ ಬೆಂಗಳೂರಿನ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಒಂಬತ್ತು ತಿಂಗಳ ಗಡುವು ನೀಡಲಾಗಿತ್ತು ಎಂದು ಹೇಳಿದರು. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಮೂಲ ಗುತ್ತಿಗೆದಾರರು ಶಾಸಕರ ಆಪ್ತರಿಗೆ ಉಪಗುತ್ತಿಗೆ ನೀಡಿ ಕಳಪೆ ಕಾಮಗಾರಿ ನಡೆಸಲಾಗಿದೆ. ಕೆಲವೆಡೆ ಕೆಲಸವನ್ನೇ ಮಾಡದೆ ಬಿಲ್ ಮಂಜೂರು ಮಾಡಿಸಿಕೊಂಡು ಭ್ರಷ್ಟಾಚಾರ ಎಸಗಲಾಗಿದ್ದು, ರೈತರಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಜೊತೆ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಸ್ಥಳೀಯ ಶಾಸಕರು ಕೂಡ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಈ ಕುರಿತು ಬಿಜೆಪಿ ಹಿಂದೆಯೇ ಪ್ರತಿಭಟನೆ ನಡೆಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಜಿಲ್ಲಾಡಳಿತ ಕ್ರಮ ವಹಿಸದ ಕಾರಣ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಧೀರರಾಜ್ ಹೊನ್ನವಿಲೆ, ಎಂ.ಎಸ್. ಮಹೇಂದ್ರನಾಥ್, ನಾಗರಾಜ್, ಸುರೇಶ್, ಚೂಡಾನಾಯ್ಕ ಇದ್ದರು.