ಬೆಟ್ಟಂಪಾಡಿ: ಜಲಜೀವನ್ ಮಿಷನ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ.ಅಸಮರ್ಪಕ ಕಾಮಗಾರಿ ನಡೆಸಿ ಅರ್ಧದಲ್ಲಿ ಬಿಟ್ಟು ಹೋದ ಎಂಜಿನಿಯರ್‌ವಿರುದ್ಧ ಕಠಿನಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ನಡೆಯಿತು.
ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪ್ರಕಾಶ್ ಬೋರ್ಕರ್ ಮಾತನಾಡಿ, ಸಭೆಗೆ ಜಿಲ್ಲಾ ಪಂಚಾಯತ್ ಎಂಜಿನಿಯರ್ ಬರಬೇಕಿತ್ತು. ಅವರು ಬರದೆ ಸಭೆ ಮುಗಿಸಲು ಬಿಡುವುದಿಲ್ಲ ಎಂದಾಗ ಸತ್ಯನಾರಾಯಣ ರೈ , ಹರೀಶ್ ಕುಮಾರ್, ನಾರಾಯಣ ನಾಯ್ಕ ಅವರು ಮಾತನಾಡಿ, ಕೇವಲ ನಳ್ಳಿ ಹಾಕಿ ಹೋಗಿದ್ದಾರೆ. ನೀರು ಬರುತ್ತಿಲ್ಲ. ಅದೂ ಎಲ್ಲೆಲ್ಲೊ ಹಾಕಿದ್ದಾರೆ ಎಂದರು. ಎಂಜಿನಿಯರ್ ಅವರನ್ನು ಅಮಾನತು ಮಾಡಬೇಕು ಎಂದು ಪ್ರಕಾಶ್ ಬೋರ್ಕರ್ ಮತ್ತಿತರರು ಆಗ್ರಹಿಸಿದರು.ಅಧ್ಯಕ್ಷರು ಮಾತನಾಡಿ ಸಮರ್ಪಕವಾಗಿ ಕಾಮಗಾರಿ ಮಾಡದೆ ಬಿಲ್ಲು ಮಂಜೂರು ಮಾಡದಂತೆ ಇಲಾಖೆಗೆ ಪತ್ರ ಬರೆಯುವ ಎಂದರು. ಜತೆಗೆ ಎಂಜಿನಿಯರ್ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆಯುವ ಬಗ್ಗೆ ನಿರ್ಣಯಿಸಲಾಯಿತು. ಎಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸತ್ಯನಾರಾಯಣ ರೈ ವಿಚಾರಿಸಿದ ಘಟನೆಯೂ ನಡೆಯಿತು.
ಆರೋಗ್ಯ ಕಾರ್ಯಕರ್ತೆ ಎ.ವಿ.ಕುಸುಮಾವತಿ, ಉಪವಲಯ ಅರಣ್ಯಾಧಿಕಾರಿ ಮದನ್.ಬಿ.ಕೆ, ಹಿರಿಯ ಪಶು ವೈದ್ಯ ಪರೀಕ್ಷಕ ವೀರಪ್ಪ, ಗ್ರಾಮಾಂತರ ಪೊಲೀಸ್ ಠಾಣಾ ಎ.ಎಸ್‌ಐ ಮಹಮ್ಮದಾಲಿ, ಮೆಸ್ಕಾಂ ಕಿರಿಯ ಎಂಜಿನಿಯರ್ ಪುತ್ತು ಜೆ., ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ ಕುಮಾರಿ ಕೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ಎಸ್. ಸುಜಾತ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪವಿತ್ರ ನಂದ್ರಾಳ, ಎಫ್ ಎಲ್‌ಸಿ ಗೀತಾ ವಿಜಯನ್ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಅರಣ್ಯ ಇಲಾಖೆಯ ಸಿಬಂದಿ ಪ್ರಜ್ಞಾ.ಬಿ., ಸುರೇಶ್ ಬಾಬು, ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯ ಮ್ಯಾನೇಜರ್‌ಅನೂಪ್ ಎಸ್.ನಾಯ್ಕ, ಪೊಲೀಸ್ ಸಿಬಂದಿ ಮಾರುತಿ ಕೆ., ಪಂಚಾಯತ್ ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಬಾಲಚಂದ್ರ ನಾಯ್ಕ, ಸತೀಶ್ ಶೆಟ್ಟಿ, ನಂದಿನಿ ರೈ, ಗ್ರೆಟಾ ಡಿ’ಸೋಜಾ, ಗೀತಾ ಡಿ., ತುಳಸಿ, ಸಿಎಚ್‌ಒ ಲಕ್ಷ್ಮೀ ಮತ್ತಿತರರಿದ್ದರು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಸಿಬಂದಿ ರೇವತಿ, ಸಂಶೀನಾ ವರದಿ ವಾಚಿಸಿದರು. ವಿನೀತ್ ಕುಮಾರ್ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯ ಪಟ್ಟಿ ವಾಚಿಸಿದರು.
ರಸ್ತೆ ಅಭಿವೃದ್ಧಿ ಅನುದಾನ ಏನಾಯಿತು ?
ಚೂರಿಪದವು ಶಾಲಾ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಾಸಕರ ಅನುದಾನ 10 ಲಕ್ಷ ರೂ. ಮತ್ತು ಸಮಾಜ ಕಲ್ಯಾಣ ಇಲಾಖೆಯ ಅನುದಾನ 10 ಲಕ್ಷ ರೂ. ಹೀಗೆ ಒಟ್ಟು 20 ಲಕ್ಷ ರೂ. ನಲ್ಲಿ ಕಾಂಕ್ರೀಟ್ ಮಾಡಲು ಅನುದಾನ ಬಿಡುಗಡೆ ಆಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅಲ್ಲಿ ಕೇವಲ 10 ಲಕ್ಷ ರೂ. ನ ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ಆಗಿದೆ ಎಂದು ಅಲ್ಲಿ ಫಲಕ ಹಾಕಿರುತ್ತದೆ. ಹಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಅನುದಾನ ಏನಾಯಿತು ಎಂದು ಕೆ.ಎನ್.ಪಾಟಾಳಿ ಪ್ರಶ್ನಿಸಿದರು.ಅವರಿಗೆ ಸರಿಯಾದ ಉತ್ತರ ಸಿಗಲಿಲ್ಲ.