Advertisement

ಕಾಂಗ್ರೆಸ್‌ ಭ್ರಷ್ಟಾಚಾರದ ಜನಕ ಎಂದಿದ್ದ ಸಿದ್ದರಾಮಯ್ಯನವರೂ ಈಗ ಭ್ರಷ್ಟ: ಕಾಗೇರಿ

05:58 PM Oct 22, 2024 | Team Udayavani |

■ ಉದಯವಾಣಿ ಸಮಾಚಾರ
ಶಿರಸಿ: ಹಿಂದೆಲ್ಲ ಇದ್ದ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ, ಹಗರಣಗಳ ದಾಖಲೆ ಮುರಿದು ಸಿದ್ದರಾಮಯ್ಯ ಅವರು ಮುಡಾ ಹಗರಣದ ಮೂಲಕ ಹೊಸ ದಾಖಲೆ ಬರೆದಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಸೋಮವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿ ಇಡಿ ಸಾಕಷ್ಟು ದಾಖಲೆ ಸಂಗ್ರಹಿಸಿದೆ. ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟು ಕೊಟ್ಟಿರುವುದು ನಿಜ. ಈ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ, ಇಡಿ ತನಿಖೆಗೆ ರಾಜ್ಯ ಸರಕಾರದ ಅ ಧಿಕಾರಿಗಳು ಸಹಕಾರ ಕೊಡಬೇಕು. ಹಾಗೂ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದಲ್ಲಿ ಇದ್ದಾಗ ಮಾಡಿದ ಆರೋಪಗಳೆಲ್ಲ ಈಗ ಸತ್ಯ ಅನ್ನಿಸುತ್ತಿದೆ. ಕಾಂಗ್ರೆಸ್‌ ಭ್ರಷ್ಟಾಚಾರದ ಜನಕ, ಮೊದಲಿನಿಂದಲೂ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಇದನ್ನು ಸಿದ್ದರಾಮಯ್ಯನವರು ಮೊದಲೆಲ್ಲ ಹೇಳಿದ್ದರು. ಆದರೆ ಕಾಂಗ್ರೆಸ್‌ ಸೇರಿದ ಬಳಿಕ ಅವರೂ ಭ್ರಷ್ಟಾಚಾರಿಯಾದರು. ಈಗ ಸಿದ್ದರಾಯಮಯ್ಯ ಅವರಿಗೆ ರಾಜೀನಾಮೆ ಕೊಡಲು ಮನಸ್ಸಿದ್ದರೂ ಹೈಕಮಾಂಡ್‌ ಕಾರಣದಿಂದ ರಾಜೀನಾಮೆ  ಕೊಡಲಾಗದ ಸ್ಥಿತಿ ಎದುರಾಗಿರಬೇಕು ಎಂದು
ಲೇವಡಿ ಮಾಡಿದರು.

ರಾಜ್ಯದಲ್ಲಿರೋದು ಮರ್ಯಾದಗೆಟ್ಟ ಸರಕಾರ. ಸಿದ್ದರಾಮಯ್ಯ ಅವರು ಸೈಟ್‌ ವಾಪಸ್‌ ಕೊಟ್ಟ ಬಳಿಕ ಹಗರಣ ಮುಗದೋಗತ್ತಾ? ರಾಜ್ಯದ ಜನರಲ್ಲಿ ಇಂತಹ ಭ್ರಮೆ ಸೃಷ್ಟಿಸುವುದು ಬಿಡಬೇಕು. ಕಾಂಗ್ರೆಸ್‌ನದ್ದು ಹತಾಶ ಸ್ಥಿತಿ ಆಗಿದೆ. ದ್ವೇಷ ರಾಜಕಾರಣ, ಎಫ್‌ಐಆರ್‌, ನ್ಯಾಯಾಲಯದಲ್ಲಿ ದಾವೆ ಇದನ್ನೇ ಮಾಡುತ್ತಿದ್ದು ಇದು ಕಾನೂನು ಕಟ್ಲೆ ಹೆಚ್ಚು ಮಾಡಿಕೊಂಡ ಸರಕಾರವಾಗಿದೆ.

ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್‌ ಕೇಂದ್ರ ಸಚಿವರ ವಿರುದ್ಧ ಬೇಜವಾಬ್ದಾರಿಯಿಂದ ಮಾತನಾಡುವುದು, ಬಿಜೆಪಿ ನಾಯಕರ ಮೇಲೆ ಮಸಿ ಬಳಿಯುವ ಕಾರ್ಯ ಮಾಡಲು ಮುಂದಾಗಿರುವುದು ಖಂಡನೀಯ ಎಂದರು. ಪ್ರಮುಖರಾದ ಗುರುಪ್ರಸಾದ ಹೆಗಡೆ, ಸದಾನಂದ ಭಟ್ಟ, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್ಟ, ಗಣಪತಿ ನಾಯ್ಕ, ನಂದನ ಸಾಗರ, ನಾಗರಾಜ್‌ ನಾಯ್ಕ, ಆರ್‌.ವಿ.ಹೆಗಡೆ, ರವಿಕಾಂತ ಶೆಟ್ಟಿ ಇತರರು ಇದ್ದರು.

Advertisement

ಅಡಿಕೆ ಅಕ್ರಮ ಆಮದಿಗೆ ಬಿಗಿ ಕ್ರಮ

ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ಬಂದಿರುವ ರೋಗ ನಿಯಂತ್ರಣ ಮಾಡಬೇಕಿದೆ. ರೈತ ಸಮುದಾಯದ ಹಿತ ಕಾಯಬೇಕು. ಅಂತಾರಾಷ್ಟ್ರೀಯ ಒಪ್ಪಂದದ ಕಾರಣದಿಂದ ಅನೇಕ ವಸ್ತುಗಳ ಆಮದು-ರಫ್ತು ಆಗುತ್ತಿದೆ. ಅಧಿಕೃತವಾಗಿ ತರುವುದಕ್ಕೆ ಅಧಿಕ ತೆರಿಗೆ ಹಾಕಲಾಗುತ್ತದೆ.

ಅಡಿಕೆ ಅಕ್ರಮ ಆಮದಿಗೆ ಕೇಂದ್ರ ಸರಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಿದೆ. ದರ ಹೆಚ್ಚಾಯಿತು ಎನ್ನುವ ಹೊತ್ತಿನಲ್ಲಿ
ನಿಯಂತ್ರಣ ತಪ್ಪಿ ಬೆಳೆ ಬೆಳೆದಿದ್ದರಿಂದಲೂ ಸಮಸ್ಯೆ ಆಗುತ್ತಿದೆ. ಕದ್ದು ತರೋದನ್ನು ನಿಯಂತ್ರಿಸಬಹುದು. ಆದರೆ ಅಡಿಕೆ
ಬೆಳೆಯ ಕ್ಷೇತ್ರ ವಿಸ್ತರಣೆ ಒಂದು ದೊಡ್ಡ ಸವಾಲು.

ಗ್ಯಾರಂಟಿ ಹೆಸರಲ್ಲಿ ಮೋಸ-ಅಶಿಸ್ತಿನ ಸರಕಾರ
ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತದೆ. ತೆರಿಗೆ ಹೆಚ್ಚಿಸಿ, ಬೆಲೆ ಏರಿಕೆಗೆ ಕಾರಣವಾಗಿ ಜನರ ಜೀವನ ದುಸ್ತರಗೊಳಿಸುತ್ತಿದೆ. ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಜನ ವಿರೋಧಿ  ಸರಕಾರ ಎನ್ನಲು ಹಾಪ್‌ಕಾಮ್ಸ್‌ ಮಳಿಗೆ ಬಂದ್‌ ಮಾಡಿದ್ದು ಉದಾಹರಣೆ. ರಾಜ್ಯದಲ್ಲಿ ನೂರಾರು ಮಳಿಗೆ ಬಂದ್‌ ಆಗಿದ್ದಕ್ಕೆ ರಾಜ್ಯ ಸರಕಾರ ಸರಕಾರಕ್ಕೆ ಏನು ಹೇಳುತ್ತದೆ? ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರು ಉದ್ಘಾಟನೆ ಮಾಡುವುದನ್ನು ನೋಡಿದ್ದೇವೆ. ಆದರೆ, ಭೂಮಿಪೂಜೆ ಮಾಡಿದ್ದು ಯಾವುದು ಇದೆ? ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಇದರ ಬಗ್ಗೆ ಯೋಚಿಸದ ಸರಕಾರ ದೇಶ  ದ್ರೋಹಿಗಳಿಗೆ, ಅಪರಾಧ ಮನೋವೃತ್ತಿಯವರಿಗೆ
ಬೆಂಬಲ, ರಕ್ಷಣೆ ಕೊಡುತ್ತಿದೆ. ಇದೊಂದು ಅಶಿಸ್ತಿನ ಸರಕಾರ ಎಂದು ಕಾಗೇರಿ ಕಿಡಿಕಾರಿದರು.

ಮುಡಾ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ನಲ್ಲಿ ಪರ್ಯಾಯ ಸಿಎಂ ಮಾಡಿಕೊಳ್ಳಲಿ. ಇಡೀ ಪ್ರಕರಣದ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಲಿ. ಶಿರಸಿ ಪ್ರತ್ಯೇಕ ಜಿಲ್ಲೆಗೆ ಜನಾಭಿಪ್ರಾಯ ರೂಪಿತವಾದರೆ ಸರಕಾರ ಆ ಕಾಲದ ತೀರ್ಮಾನ ಕೈಗೊಳ್ಳುತ್ತದೆ. ಜನಪ್ರತಿನಿ ಧಿಗಳಲ್ಲಿ, ಜನರಲ್ಲಿ ಹೋರಾಟಗಾರರು ಪ್ರತ್ಯೇಕ
ಜಿಲ್ಲೆಯ ಸ್ಪಷ್ಟತೆ ಮೂಡಿಸುವ ಕಾರ್ಯ ಆಗಲಿ.
●ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

 

Advertisement

Udayavani is now on Telegram. Click here to join our channel and stay updated with the latest news.

Next