ಬೆಳಗಾವಿ: ಶಾಲಾ ಮಕ್ಕಳಿಗೆ ವಿತರಿಸುವ ಸಮವಸ್ತ್ರದಲ್ಲೂ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ವಿದ್ಯಾರ್ಥಿಗಳಿಗೆ ತುರ್ತಾಗಿ ಎರಡನೇ ಜತೆ ಸಮವಸ್ತ್ರ ವಿತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ರಕುಮಾರ್ ಆಗ್ರಸಿದರು.
ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ಅಭಿಯಾನದಡಿ ಪ್ರತಿ ಮಗುವಿಗೆ 2 ಜತೆ ಸಮವಸ್ತ್ರ ಖರೀದಿಸಲು ತಲಾ 600 ರೂ. ನಿಗದಿಪಡಿಸಿದೆ. ಸಮವಸ್ತ್ರ ಖರೀದಿಯನ್ನು ಶಾಲಾಭಿವೃದ್ಧಿ ಸಮಿತಿಗೆ ವಹಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ನೀಡುತ್ತಿದೆ. ಅದನ್ನು ಹೊಲಿಸಿ ಕೊಡುತ್ತಿಲ್ಲ. ಇದರಿಂದ ಬಡ ಕುಟುಂಬಕ್ಕೆ ಹೊರೆಯಾಗುತ್ತಿದೆ ಎಂದು ಗುರುವಾರ ಸುವರ್ಣಸೌಧದಲ್ಲಿ ಆರೋಪಿಸಿದರು.
ಕೇಂದ್ರವು ಪ್ರತಿ ಮಗುವಿನ ಒಂದು ಜತೆ ಸಮವಸ್ತ್ರಕ್ಕೆ ತಲಾ 300 ರೂ. ನಿಗದಿಪಡಿಸಿದರೂ ರಾಜ್ಯ ಸರ್ಕಾರ ಮಕ್ಕಳಲ್ಲಿ ಭೇದಭಾವ ತೋರಿ 1ರಿಂದ 5ನೇ ತರಗತಿ ಮಗವಿಗೆ 200 ರೂ. ಮತ್ತು 6ರಿಂದ 8ನೇ ತರಗತಿ ಮಗುವಿಗೆ 300 ರೂ. ನಿಗದಿ ಪಡಿಸುವ ಮೂಲಕ 1ರಿಂದ 5 ನೇ ತರಗತಿಯ ಪ್ರತಿಯೊಂದು ಮಗುವಿಗೆ ಕೇಂದ್ರ ನಿಗದಿಪಡಿಸಿದ ಮೊತ್ತದಿಂದ 100 ರೂ. ಗಳನ್ನು ಕಳವು ಮಾಡಿದೆ ಎಂದು ಆರೋಪಿಸಿದರು.
ಕೇಂದ್ರವು ಶಾಲಾ ಮಕ್ಕಳ ಸಮವಸ್ತ್ರಕ್ಕಾಗಿ 577.84 ಕೋಟಿ ರೂ. ಮೀàಸಲಿಟ್ಟಿದೆ. ಅದರಲ್ಲಿ 266.89 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ಹೊಲಿದು ಕೊಟ್ಟಿದ್ದರೂ 175.78 ಕೋಟಿ ರೂ. ಮಾತ್ರವೇ ವೆಚ್ಚವಾಗುತ್ತಿತ್ತು. ಕೇಂದ್ರ ಬಿಡುಗಡೆಗೊಳಿಸಿದ ಅನುದಾನದಲ್ಲಿ ಎರಡು ಜತೆ ಸಮವಸ್ತ್ರ ತರಿಸಿದ ಬಳಿಕವೂ 91.11 ಕೋಟಿ ರೂ.ಗಳಷ್ಟು ಉಳಿಯಬೇಕಾಗಿತ್ತು. ಆದರೆ, ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
2018-19ನೇ ಸಾಲಿನ 2ನೇ ಜತೆ ಸಮವಸ್ತ್ರ ಇನ್ನೂ ಮಕ್ಕಳಿಗೆ ತರಿಸಿಲ್ಲ. ಕಾರಣ ರಾಜ್ಯ ಸರ್ಕಾರವು ಕೇಂದ್ರಕ್ಕೆ ಬಳಕೆ ಪ್ರಮಾಣ ಪತ್ರ (ಯುಟಿಲೈಷೇಶನ್ ಸರ್ಟಿಫಿಕೇಟ್) ಸಲ್ಲಿಸಿಲ್ಲ. ಮಕ್ಕಳು ಶಾಲೆಗೆ ಒಂದೇ ಜತೆ ಸಮವಸ್ತ್ರದಲ್ಲಿ ವರ್ಷ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಮುಚ್ಚಿಟ್ಟು ಕೇಂದ್ರವನ್ನು ದೂರುವುದು ಸರಿಯಲ್ಲ. ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಬೇಕು ಮತ್ತು ಸೈಕಲ್ ಕೂಡ ವಿತರಣೆ ಮಾಡಬೇಕು. ಸಮವಸ್ತ್ರ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.