ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋಚಿಮುಲ್ ವತಿಯಿಂದ ಸ್ಥಾಪನೆ ಮಾಡಿರುವ ಮೆಗಾ ಡೇರಿಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆದು ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲಾವು ಮೆರಿಟ್ ಆಧಾರದ ಮೇಲೆ ನಡೆದಿದೆ ಎಂದು ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ..
ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕರಾಗಿ ಸದ್ಯ ಕಾಂಗ್ರೆಸ್ ಮುಖಂಡರಾಗಿರುವ ಕೆ.ವಿ.ನಾಗರಾಜ್‌ಗೆ ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಸವಾಲು ಹಾಕಿದ ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕೆ.ವಿ.ನಾಗರಾಜ್ ಭ್ರಷ್ಟಾಚಾರದ ಪಿತಾಮಹ ಎಂದು ವಾಗ್ಧಾಳಿ ನಡೆಸಿದರು.
ಟಿಎಪಿಸಿಎಂಎಸ್ ಆಡಳಿತ ಮಂಡಳಿ ದುರಾಡಳಿ, ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂಬ ಶಾಸಕ ಸುಧಾಕರ್ ಆರೋಪಗಳಿಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ನಡೆಸಿದ ಕೆ.ಪಿ.ಬಚ್ಚೇಗೌಡ, ಕೆ.ವಿ.ನಾಗರಾಜ್ ವಿರುದ್ಧ ಹಾರಿಹಯ್ದರು. ಪಕ್ಷದಿಂದ, ದೇವೇಗೌಡರ ಕುಟುಂಬದಿಂದ ಎಲ್ಲಾವನ್ನು ಪಡೆದುಕೊಂಡು ಸ್ವಹಿತಾಸಕ್ತಿಗಾಗಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅವರು ಎಲ್ಲಿದ್ದರೂ ಚೆನ್ನಾಗಿರಲಿ. ಆದರೆ ಟಿಎಪಿಸಿಎಂಎಸ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಟೀಕಿಸಿರುವ ಕೆ.ವಿ.ನಾಗರಾಜ್ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅವರು ಪ್ರತಿನಿಧಿಸುವ ಕೋಚಿಮುಲ್‌ನಲ್ಲಿ ಏನು ನಡೆಯುತ್ತಿದೆ.
ಮೇಗಾ ಡೇರಿ ನೇಮಕಾತಿಯಲ್ಲಿ ಏನೇನು ಅಕ್ರಮಗಳು, ಭ್ರಷ್ಟಾಚಾರ ನಡೆದಿದೆ ಎಂಬುದರ ಬಗ್ಗೆ ನಮ್ಮ ಬಳಿ ದಾಖಲೆಗಳು ಇವೆ. ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೋಟ್ಯಂತ ರೂ. ಹಣ ಕೈ ಬದಲಾಗಿದೆ ಎಂಬುದನ್ನು ಸಾಭೀತುಪಡಿಸುತ್ತೇನೆ ಎಂದರು.
ಮೆಗಾ ಡೇರಿಯಲ್ಲಿ ನೇಮಕಾತಿ ಪಡೆದಿರುವ ಪ್ರತಿಯೊಬ್ಬರು ಹೇಳುತ್ತಾರೆ. 2ರಿಂದ 20 ಲಕ್ಷ ರೂ.ಗಳ ವರೆಗೂ ನೇಮಕಾತಿ ವೇಳೆ ಅವ್ಯವಹಾರ ನಡೆದಿದೆ. ಇದು ನಾನು ಹೇಳುವ ಮಾತಲ್ಲ. ಬಹಳಷ್ಟು ಮಂದಿ ನಮ್ಮ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಡೇರಿ ನೇಮಕಾತಿಯಲ್ಲಿ
ಅಕ್ರಮ ನಡೆದಿದೆ. ಕ್ಷೇತ್ರದಲ್ಲಿ ಐದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಎಂದೂ ಕೂಡ ಸಾರ್ವಜನಿಕ ಜೀವನದಲ್ಲಿ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ. ನಮ್ಮ ತಂದೆಯವರ ಹಾದಿಯಲ್ಲಿ ನಾವು ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆಂದು ಕೆ.ವಿ.ನಾಗರಾಜ್‌ಗೆ ತಿರುಗೇಟು ನೀಡಿದರು.
ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಲಿ ನನ್ನದು ತೆರೆದ ಪುಸ್ತಕ.ನನ್ನ ವಿರುದ್ಧ ಒಂದು ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಲಿ ಒಂದು ಕ್ಷಣ ಕೂಡ ನಾನು ಸಾರ್ವಜನಿಕ ಜೀವನದಲ್ಲಿ ಇರುವುದಿಲ್ಲ. ನಮ್ಮ ತಂದೆಯವರ ಕಾಲದಿಂದ ನಾನು ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ನಾನಾಗಲಿ ನಮ್ಮ ತಂದೆಯವರಾಗಲಿ ಎಂದೂ ಭ್ರಷ್ಟಾಚಾರಕ್ಕೆ ಅಂಟಿಕೊಂಡಿಲ್ಲ. ನಮ್ಮ ತಂದೆ ಬೆಳೆಸಿದ ಹಿಂಬಾಲಕರು ಕೂದ ಭ್ರಷ್ಟಾಚಾರದ ವಿರುದ್ಧವಾಗಿದ್ದಾರೆ. ಕೆ.ವಿ.ನಾಗರಾಜ್‌ಗೆ ತಾಕತ್ತು ಇದ್ದರೆ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಸಾಭೀತುಪಡಿಸಲಿ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್‌ಗೆ ಸವಾಲು ಹಾಕಿದರು.
ಕೋಚಿಮುಲ್ ನಿರ್ದೇಶಕ ಆತ್ಮ ವಂಚಕ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಒಬ್ಬ ಆತ್ಮವಂಚಕ ಎಂದು ತಮ್ಮ ಮಾಜಿ ಸ್ನೇಹಿತನ ವಿರುದ್ಧ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಟೀಕಿಸಿದರು. ನನ್ನ ಅವರ ಸ್ನೇಹ ಒಂದೇ ಆತ್ಮ, ಎರಡು ದೇಹಗಳಂತೆ ಇದ್ದವು. ಆದರೆ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟರು. ನಾನು ಜೆಡಿಎಸ್‌ನಲ್ಲಿ ಇದಿದ್ದರೆ ಪಕ್ಷದ ಅಭ್ಯರ್ಥಿಗಳ ಪರ ಟಿಎಪಿಸಿಎಂಎಸ್ ಚುನಾವಣಾ ಪ್ರಚಾರಕ್ಕೆ ಹೋಗುತ್ತಿರಲಿಲ್ಲ ಎಂದು ಕೆ.ವಿ.ನಾಗರಾಜ್ ನೀಡಿರುವ ಹೇಳಿಕೆ ಅವರ ಆತ್ಮವಂಚನೆ, ಪಕ್ಷ ದ್ರೋಹದ ಹೇಳಿಕೆ ಆಗಿದೆ ಎಂದರು. ಕ್ಷೇತ್ರದಲ್ಲಿ ಅವರಿಗೆ ಕಾವಡೆಕಾಸಿನ ಕಿಮ್ಮತ್ತು ಇಲ್ಲ
ಎಂದರು.