ಮಸ್ಕಿ: ಈ ಹಿಂದೆ ಬಿಜೆಪಿ ನೇತೃತ್ವದಲ್ಲಿ ಅಸ್ತಿತ್ವದಲ್ಲಿದ್ದ ಪುರಸಭೆ ಆಡಳಿತ ಮಂಡಳಿ ಅಧಿಕಾರವಧಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಇದಕ್ಕೆ ದಾಖಲೆಗಳಿವೆ. ಇನ್ನಾದರೂ ಮತದಾರರು ಭ್ರಷ್ಟಾಚಾರದ ಆಡಳಿತಕ್ಕೆ ಕೊನೆ ಹಾಡಿ ಎಂದು ಕಾಂಗ್ರೆಸ್ ಮುಖಂಡ ಆರ್. ಸಿದ್ದನಗೌಡ ತುರುವಿಹಾಳ ಹೇಳಿದರು.
ಪಟ್ಟಣದ ಗ್ರೀನ್‌ಸಿಟಿಯಲ್ಲಿರುವ ಶಾಸಕ ಆರ್. ಬಸನಗೌಡ ತುರುವಿಹಾಳ ನಿವಾಸದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಸ ವಿಲೇವಾರಿಯ ಆಟೋ ಟಿಪ್ಪರ್, ಜೆಸಿಬಿ ಸೇರಿ ಇತರೆ ವಾಹನ ಖರೀದಿಯಲ್ಲಿ ಹಣ ದುರ್ಬಳಕೆಯಾಗಿದೆ. ಈ ವಾಹನಗಳಿಗೆ ನೋಂದಣಿಯೇ ಇಲ್ಲ. ನಗರೋತ್ಥಾನ ಅನುದಾನದಲ್ಲಿ ಸುಮಾರು 57 ಲಕ್ಷ ರೂ. ಅನುದಾನಕ್ಕೆ ಡಿಸಿಯಿಂದ ಅನುಮೋದನೆ ಪಡೆಯದೇ, ಟೆಂಡರ್ ಕರೆಯದೇ ನೇರವಾಗಿ ಪುರಸಭೆಯಿಂದಲೇ ಕೆಆರ್‌ಐಡಿಎಲ್‌ಗೆ ಕಾಮಗಾರಿ ಗುತ್ತಿಗೆ ನೀಡಿ, ಕಮಿಷನ್ ಪಡೆಯಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಹಂಚಿಕೆ, ಕೃಷಿ ಜಮೀನುಗಳನ್ನು ವಾಸದ ಉದ್ದೇಶಕ್ಕಾಗಿ(ಎನ್‌ಎ ಸೈಟ್) ಜಮೀನುಗಳಿಗೆ ಅನುಮೋದನೆ ನೀಡುವಲ್ಲಿಯೂ ಕಾನೂನು ಬಾಹಿರ ವಾಗಿ ಮಂಜೂರಾತಿ ನೀಡಲಾಗಿದೆ. ಖಾತಾ ನಕಲು ನೀಡಿಕೆಯಲ್ಲಿಯೂ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸ್ವತಃ ಅದೇ ಪಕ್ಷದವರಾದ ಪುರಸಭೆ ಹಿಂದಿನ ಅಧ್ಯಕ್ಷೆ ವಿಜಯಲಕ್ಷ್ಮೀ ಪೊ.ಪಾಟೀಲ್ ದೂರು ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಮಾತನಾಡಿ, ಮಸ್ಕಿ ಪುರಸಭೆ ಭ್ರಷ್ಟಾಚಾರದ ಕೂಪ. 23 ವಾರ್ಡ್‌ಗಳನ್ನು ನೋಡಿದರೆ ಯಾವ ಅಭಿವೃದ್ಧಿ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.