Advertisement

ಮುಲ್ಲಾಮಾರಿ ಕಾಮಗಾರಿ ಕಳಪೆ ; ತನಿಖೆಗೆ ಆಗ್ರಹ

05:51 PM Jun 23, 2021 | Team Udayavani |

ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಮಗಾರಿಗಳು ಕಳಪೆಮಟ್ಟದಿಂದ ನಡೆಯುತ್ತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜಲಾಶಯದ ಹತ್ತಿರ ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ನೇತೃತ್ವದಲ್ಲಿ ಧರಣಿ ಉಪವಾಸ ಸತ್ಯಾಗ್ರಹ ನಡೆಯಿತು.

Advertisement

ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಮುಖಂಡ ಸಂಜೀವನ್‌ ಯಾಕಾಪುರ, ಹಿಂದುಳಿದ ಪ್ರದೇಶಕ್ಕೆ ಒಳಪಟ್ಟಿರುವ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಮುಖ್ಯಕಾಲುವೆ ಮತ್ತು ಜಲಾಶಯದ ವೇಸ್ಟವೇರ್‌ದಲ್ಲಿ ಕಳಪೆಮಟ್ಟದ ಕಾವåಗಾರಿ ನಡೆಯುತ್ತಿದೆ. ಕಾಲುವೆ ಆಧುನೀಕರಣ ಕಾಮಗಾರಿಗಳು ತಾಂತ್ರಿಕವಾಗಿ ನಡೆಯುತ್ತಿಲ್ಲ. ಕಾಲುವೆಗಳಲ್ಲಿ ನೀರು ಹರಿಯುವ ಮುನ್ನವೇ ಕಾಲುವೆಗಳು ಬಿರುಕು ಬಿಟ್ಟಿವೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

1973-74ನೇ ಸಾಲಿನಲ್ಲಿ ಬರಗಾಲ ಬರ ಪೀಡಿತಪ್ರದೇಶ ಯೋಜನೆ ಅಡಿಯಲ್ಲಿ ಪ್ರಾರಂಭವಾಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಕಳೆದ ನಾಲ್ಕು ದಶಕಗಳಿಂದ 450 ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಮುಖ್ಯಕಾಲುವೆ ಮತ್ತು ಜಲಾಶಯ ಆಧುನೀಕರಣ ಕಾಮಗಾರಿ ಸಂಪೂರ್ಣ ಕಳಪೆಮಟ್ಟದಿಂದ ನಡೆಯುತ್ತಿದೆ. ಇಷ್ಟಾದರೂ ಸಂಸದರು, ಶಾಸಕರು ಕಾಮಗಾರಿ ಗುಣಮಟ್ಟ ಪರಿಶೀಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರೆಡ್ಡಿ ಮುತ್ತಂಗಿ ಮಾತನಾಡಿ, ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆ ನಡೆಸಬೇಕು. ಯೋಜನೆಯ ಮುಖ್ಯಕಾಲುವೆ, ಉಪ ಕಾಲುವೆ, ಹೊಲ ಗಾಲುವೆಗಳು ಇನ್ನು ಪೂರ್ಣವಾಗಿಲ್ಲ. ಆದರೆ ಈಗಾಗಲೇ ಆದ ಕಾಮಗಾರಿಯ ಸಿಮೆಂಟ್‌ ಕಿತ್ತುಹೋಗಿದೆ ಎಂದು ಹೇಳಿದರು.

ಈ ಯೋಜನೆ ಪುರ್ನವಸತಿ ಕೇಂದ್ರಗಳಲ್ಲಿಯೂ ಕುಡಿಯುವ ನೀರು, ಸಿಮೆಂಟ್‌ ರಸ್ತೆ, ಸಮುದಾಯಭವನ, ಚರಂಡಿ, ದೇವಾಲಯ ಕಟ್ಟಡ, ಸರ್ಕಾರಿ ಕಟ್ಟಡಗಳು ಕಳಪೆಮಟ್ಟದಿಂದ ಕೂಡಿವೆ. ಈ ಕುರಿತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಉಪವಾಸ ಸತ್ಯಾಗ್ರಹದಲ್ಲಿ ಚೆನ್ನೂರ, ಗಡಿಲಿಂಗದಳ್ಳಿ, ಚಿಮ್ಮನಚೋಡ, ನಾಗರಾಳ, ನರನಾಳ, ಪುರ್ನವಸತಿ ಕೇಂದ್ರದ ನಿವಾಸಿಗಳು, ಯೋಜನಾ ನಿರಾಶ್ರಿತರು ಭಾಗವಹಿಸಿದ್ದರು. ಧರಣಿ ಸತ್ಯಾಗ್ರಹ ಪ್ರಾರಂಭಿಸುವ ಮುನ್ನ ಮುಲ್ಲಾಮಾರಿ ಜಲಾಶಯಕ್ಕೆ ಬಾಗಿಣ ಅರ್ಪಿಸಲಾಯಿತು.

Advertisement

ಸಾವಿರಾರು ಜನರು ಒಂದು ಕಿ.ಮೀ ದೂರದಿಂದ ಜಲಾಶಯದ ವರೆಗೆ ನಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್‌-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ್‌ಗೆ ಸಲ್ಲಿಸಲಾಯಿತು. ಹಣಮಂತ ಪೂಜಾರಿ, ಚಂದ್ರಕಾಂತ ಸಾಸರಗಾಂವ, ವಿಷ್ಣುರಾವ್‌ ಮೂಲಗೆ, ಮಾಜಿದ್‌ ಪಟೇಲ್‌, ಮಗದೂಮಖಾನ್‌, ಎಸ್‌.ಕೆ. ಮುಕ್ತಾರ, ರಾಹುಲ್‌ ಯಾಕಾಪುರ, ನಾಗೇಂದ್ರಪ್ಪ ಗುರಂಪಳ್ಳಿ, ಬಸವರಾಜ ಶಿರಸಿ, ಶಿವಬಸಪ್ಪ ರಟಕಲ್‌, ಸಿಕಂದರ ಮೋಮಿನ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next