Advertisement

ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ; ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ

06:22 PM May 30, 2022 | Team Udayavani |

ಮಂಡ್ಯ: ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿ ಪಾತ್ರ ವಹಿಸಬೇಕಾದ ನಾಲ್ಕು ಆಧಾರ ಸ್ಥಂಭಗಳೂ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದ್ದು ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಸಿ.ಎನ್‌.ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಹಳೇ ವಿದ್ಯಾರ್ಥಿಗಳ ವತಿಯಿಂದ ಕಾಲೇಜಿನ ಪ್ಲೇಸ್‌ ಮೆಂಟ್‌ ಸಭಾಂಗಣದಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಸಂವಿಧಾನ ಜಾರಿಗೊಳಿಸಲಾಯಿತು. ಅದರಲ್ಲಿ ಶಾಸಕಾಂಗ, ಕಾರ್‍ಯಾಂಗ, ನ್ಯಾಯಾಂಗ ಎಂಬ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಇದರೊಂದಿಗೆ 4ನೇ ಸ್ಥಂಭವಾಗಿ ಮಾಧ್ಯಮ ಸಹ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ನಾಲ್ಕೂ ಸಂಸ್ಥೆಗಳೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವ ಕಾರಣ ಭ್ರಷ್ಟಾಚಾರ ಎಂಬುದು ಮಿತಿ ಮೀರಿದೆ ಎಂದು ಹೇಳಿದರು.

ಯುವಕರಿಂದ ಸಾಧ್ಯ: ಸಾವಿರಾರು ವರ್ಷಗಳ ಸಂಸ್ಕೃತಿ ಇದ್ದಂತಹ ದೇಶದಲ್ಲಿ ಏಕೆ ಈ ರೀತಿ ಆಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ. ಇದು ಕೆಲವು ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದ ಅವರು, ನನ್ನಂತಹ ವಯಸ್ಸಾದವರಿಂದಲೇ ನಡೆದಿರುವ ಭ್ರಷಾcಚಾರವನ್ನು ಸರಿದಾರಿಗೆ ತರಲು ನನ್ನ ವಯಸ್ಸಿನವರಿಂದ ಸಾಧ್ಯವಿಲ್ಲ. ಈ ದೇಶದ ಬೆನ್ನೆಲುಬು ಎಂದಾಗಿರುವ ಯುವ ಸಮೂಹ, ಈ ದೇಶವನ್ನು ಸರಿದಾರಿಗೆ ತರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಸಮೂಹ ಮನಸ್ಸು ಮಾಡಿದರೆ ಇಂಥ ಭ್ರಷ್ಟಾಚಾರದ ದೇಶವನ್ನು ಸರಿದಾರಿಗೆ ತರಲು ಸಾಧ್ಯ. ಆದರೆ, ಅವರು ಕೆಲವು ಸಾಮಾಜಿಕ ಮೌಲ್ಯ ಅಳವಡಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಸಮಾಜವನ್ನು ಬದಲಾಯಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಯುವಜನರು ಪ್ರಯತ್ನಶೀಲರಾಗಬೇಕು ಎಂದು ತಿಳಿಸಿದರು.

Advertisement

2-3 ಹಗರಣ: ದುರಾಸೆಗೆ ಯಾವ ಮದ್ದೂ ಇಲ್ಲ. ಕೊರೊನಾದಂಥ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಇದೆ. ಬೇರೆ ಬೇರೆ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಆದರೆ, ಅಭಿವೃದ್ಧಿ ಹೆಸರಲ್ಲಿ ನಡೆಯುವ ದುರಾಸೆಗೆ ಯಾವುದೇ ಮದ್ದು ಇಲ್ಲ. 80ರ ದಶಕದಲ್ಲಿ 52 ಲಕ್ಷ ಯೋಧರಿಗೆ ಜೀಪ್‌ ವಾಹನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಯಿತು. ನಂತರದ ದಿನಗಳಲ್ಲಿ ಪ್ರತೀ ವರ್ಷವೂ ಒಂದು ಅಥವಾ ಎರಡು ಹಗರಣ ಕಂಡು ಬರುತ್ತಿದ್ದವು. ಹಗರಣಗಳಲ್ಲಿ ತೊಡಗಿರುವವರ ಅಭಿವೃದ್ಧಿಯಾಗುತ್ತಲೇ ಇತ್ತು. ಆದರೆ, ದೇಶ ಅಭಿವೃದ್ಧಿಯಲ್ಲಿ ಮಂದಗತಿ ಇತ್ತು ಎಂದು ವಿಷಾದಿಸಿದರು.

ಅಸಮಾಧಾನ: ಚೈನಾ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇತ್ತು. ಅದನ್ನು ಮಟ್ಟ ಹಾಕುವ ಸಲುವಾಗಿ ಅಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗುತ್ತಿದೆ. 2019ನೇ ಪಾರದರ್ಶಕ ಸಂಸ್ಥೆ ವರದಿ ಪ್ರಕಾರ ಚೈನಾದಲ್ಲಿ ನಮ್ಮ ದೇಶಕ್ಕಿಂತಲೂ ಹೆಚ್ಚು ಭ್ರಷ್ಟಾಚಾರ ಇದೆ. ನಮ್ಮಲ್ಲಿ ಭ್ರಷ್ಟರಿಗೆ 7 ವರ್ಷ ಶಿಕ್ಷೆ, ಒಬ್ಬನಿಗೆ ಶಿಕ್ಷೆಯಾಗಬೇಕಾದರೆ 50 ವರ್ಷ ಕಾಯಬೇಕು. ಅಪ್ಪಿ ತಪ್ಪಿ ಜೈಲಿಗೆ ಹೋದರೂ ಅದು ಶಿಕ್ಷೆಯಾಗುವುದಿಲ್ಲ. ಬದಲಿಗೆ ಎಲ್ಲಾ ಸೌಲಭ್ಯಗಳೂ ಸಿಗುತ್ತವೆ. ಅಂತಹ ವಾತಾವರಣ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಪಿಇಟಿ ಕಾರ್ಯದರ್ಶಿ ಎಸ್‌.ಎಲ್‌.ಶಿವ  ಪ್ರಸಾದ್‌, ಪ್ರಾಂಶುಪಾಲ ಡಾ.ಆರ್‌.ಎಂ.ಮಹಾಲಿಂಗೇಗೌಡ, ಡಾ.ಬಿ.ಎಸ್‌.ಜಯಶಂಕರ್‌ಬಾಬು, ನವೀನ್‌ ಕುಮಾರ್‌, ಶಿವರಾಜ್‌ ಕೀಲಾರ, ಚನ್ನಯ್ಯ, ಸಿದ್ದೇಗೌಡ, ಡಿ.ಎಸ್‌.ದೇವರಾಜು ಮತ್ತಿತರರಿದ್ದರು.

ಸಮಾಜದಲ್ಲಿ ಮೌಲ್ಯಗಳು ಕಾಣುತ್ತಿಲ್ಲ. ಜೈಲಿಗೆ ಹೋದವರ ಮನೆ ಬಳಿಗೆ ಯಾರೂ ಹೋಗಬೇಡಿ ಎನ್ನುವ ಕಾಲವಿತ್ತು. ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ
ಕುಟುಂಬವೂ ಶಿಕ್ಷೆ ಅನುಭವಿಸುವಂತಾಗುತ್ತಿತ್ತು. ಇಂದು ಸಮಾಜದಲ್ಲಿ ಶ್ರೀಮಂತಿಕೆ ಅಧಿಕಾರವನ್ನು ಪೂಜಿಸುವಂಥ ವಾತಾವರಣ ಇದೆ. ಇದರಿಂದ ಶಾಂತಿ ಸೌಹಾರ್ದತೆ ಸಾಧ್ಯವೇ?.
ಸಿ.ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next