Advertisement

ಅಗಲಿದ ಗಣ್ಯರಿಗೆ ಪಾಲಿಕೆ ಸಂತಾಪ

12:17 PM Nov 29, 2018 | Team Udayavani |

ಬೆಂಗಳೂರು: ಇತ್ತೀಚೆಗೆ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್‌, ಮಾಜಿ ಕೇಂದ್ರ ಸಚಿವರಾದ ಅಂಬರೀಶ್‌ ಹಾಗೂ ಜಾಫ‌ರ್‌ ಷರೀಫ್ ಅವರಿಗೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಇದೇ ವೇಳೆ ಮೂವರೂ ನಾಯಕರು ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಸದಸ್ಯರು ಸ್ಮರಿಸಿದರು.

Advertisement

ಬುಧವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಅವರು ಸಂತಾಪ ನಿರ್ಣಯವನ್ನು ಮಂಡಿಸಿ ಮಾತನಾಡಿ, ಅನಂತಕುಮಾರ್‌, ಅಂಬರೀಶ್‌ ಹಾಗೂ ಜಾಫ‌ರ್‌ ಷರೀಫ್ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನವೆಂಬರ್‌ ತಿಂಗಳು ರಾಜ್ಯದ ಪಾಲಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ಮಾಜಿ ಮೇಯರ್‌ಗಳಾದ ಬಿ.ಎಸ್‌.ಸತ್ಯನಾರಾಯಣ, ಪದ್ಮಾವತಿ, ಮಂಜುನಾಥ ರೆಡ್ಡಿ, ಪಾಲಿಕೆ ಸದಸ್ಯರಾದ ಆರ್‌.ಎಸ್‌.ಸತ್ಯನಾರಾಯಣ, ಉಮೇಶ್‌ ಶೆಟ್ಟಿ, ಡಾ.ರಾಜು, ವಾಜೀದ್‌ ಸೇರಿದಂತೆ ಹಲವು ಹಿರಿಯ ನಾಯಕರು ದನಿಗೂಡಿಸಿ ಅಗಲಿದ ನಾಯಕರ ಸಾಧನೆ ಸ್ಮರಿಸಿದರು.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಪರ್ಕ ಸೇತುವೆಯಂತಿದ್ದರು. ಹೃದ್ರೋಗಿ ಗಳಿಗೆ ಕಡಿಮೆ ದರದಲ್ಲಿ ಸ್ಟಂಟ್‌ಗಳನ್ನು ಒದಗಿಸುವ, ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ಸಿಗುವಂತಾಗಲು ಜನೌಷಧಿ ಕೇಂದ್ರಗಳು, ರೈತರಿಗೆ ಅನುಕೂಲವಾಗಲು ಬೇವು ಮಿಶ್ರಿತ ಯೂರಿಯಾ ನೀಡುವುದು ಸೇರಿ ಹಲವಾರು ಯೋಜನೆಗಳನ್ನು
ಜಾರಿಗೆ ತಂದಿದ್ದಾರೆ.

ಇದರೊಂದಿಗೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಕೊಡಿಸುವಲ್ಲೂ ಸಾಕಷ್ಟು ಶ್ರಮಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚಿಸಿದಾಗ ತಮ್ಮದೇ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಅದನ್ನು ಅನುಷ್ಠಾನವಾಗದಂತೆ ನೋಡಿಕೊಂಡಿದ್ದಾರೆ.

Advertisement

ಇದರೊಂದಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡರುವ ಮೇಕೆದಾಟು ಯೋಜನೆಗೂ ಅವರ ಬೆಂಬಲವಾಗಿನಿಂತಿದ್ದರು. ಜತೆಗೆ ನಮ್ಮ ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಬ್‌ಅರ್ಬನ್‌ ರೈಲು ಯೋಜನೆಗೆ ಅವರು ಕಾರಣಕರ್ತರಾಗಿದ್ದು, ಅದಮ್ಯ ಚೇತನ ಸಂಸ್ಥೆ ಮೂಲಕ 2 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಹಾಗೂ ಪರಿಸರ ಸಂರಕ್ಷಣೆಗೆ ಪ್ರತಿ ಭಾನುವಾರ ಸಸಿ ನೆಡುವ ಕಾರ್ಯಕ್ರಮವನ್ನು ಅವರು ಹಮ್ಮಿ  ಕೊಳ್ಳುತ್ತಿದ್ದರು ಎಂದು ಸದಸ್ಯರು ಬಣ್ಣಿಸಿದರು. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ರೆಬಲ್‌ ಸ್ಟಾರ್‌ ಎಂದೇ ಖ್ಯಾತಿ ಗಳಿಸಿದ್ದ ಅಂಬರೀಶ್‌ ಅವರು ಮೇಲ್ನೋಟಕ್ಕೆ ಒರಟಾಗಿ ಕಂಡರೂ ಹೃದಯ ಶ್ರೀಮಂತಿಕೆ ಇದ್ದವರು. ಸ್ನೇಹಜೀವಿಯಾಗಿದ್ದ ಅವರು ಕಷ್ಟದಲ್ಲಿರುವವರಿಗೆ ಸದಾ ನೆರವಿಗೆ ಧಾವಿಸುತ್ತಿದ್ದರು. ಕೇಂದ್ರ ಮಂತ್ರಿಯಾಗಿದ್ದಾಗ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ ಕಲಾವಿದರ ಬಗೆಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದರು ಎಂದು ಸ್ಮರಿಸಿದರು.

ಕನ್ನಡಿಗರಿಗೆ ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಡುವಲ್ಲಿ ಜಾಫ‌ರ್‌ ಷರೀಫ್ ಅವರ ಪಾತ್ರ ಅನನ್ಯವಾದದ್ದು. ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದು, ಅವರು ಎಲ್ಲ ಧರ್ಮದವರನ್ನು ಸೌಹರ್ದಯುತವಾಗಿ ಕಾಣುತ್ತಿದ್ದರು. 

ನಾಡಿನ ಅಭಿವೃದ್ಧಿಗೆ ಶ್ರಮಿಸಿದಂತಹ ಈ ಮೂವರು ಗಣ್ಯರ ಹೆಸರುಗಳನ್ನು ಅಜರಾಮರವಾಗಿ ಉಳಿಯುವಂತೆ ಮಾಡಲು
ನಗರದ ಕಟ್ಟಡಗಳು, ರಸ್ತೆ ಅಥವಾ ಪ್ರಮುಖ ಯೋಜನೆಗೆ ಅವರ ಹೆಸರು ಇಡಲು ಪಾಲಿಕೆ ನಿರ್ಣಯ ಕೈಗೊಳ್ಳಬೇಕೆಂದು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next