Advertisement

Desi Swara: ಕನ್ನಡ ಸಂಘ ಬಹ್ರೈನ್‌- ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

12:12 PM Jun 29, 2024 | Team Udayavani |

ಬಹ್ರೈನ್‌: ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಕನ್ನಡ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನಿಪೂಜೆ ಹಾಗೂ ನಾಡಿನ ಮತ್ತು ದ್ವೀಪದ ಯಕ್ಷಗಾನ ಕಲಾವಿದರುಗಳ ಸಮಾಗಮದೊಂದಿಗೆ ಪ್ರದರ್ಶನಗೊಂಡ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನದಲ್ಲಿ ಸುಮಾರು 800ಕ್ಕೂ ಹೆಚ್ಚಿನ ಜನರು ಪಾಲ್ಗೊಂಡು ಈ ಮೂರೂ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

Advertisement

ನಾಡಿನಿಂದ ವಿಶೇಷವಾಗಿ ಬಂದಂತಹ ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿಯ ಅರ್ಚಕರಾದ ವೇ|ಮೂ| ಕೃಷ್ಣ ಅಡಿಗರು ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನಿಪೂಜೆಯ ಪೂಜಾ ವಿಧಿ-ವಿಧಾನಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದ್ವೀಪದ ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ ಜರಗಿ ನೆರೆದ ಭಕ್ತರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದಿತ್ತು. ಇದೇ ಸಂದರ್ಭದಲ್ಲಿ ನಾಡಿನಿಂದ ಆಗಮಿಸಿದ್ದ ಅತಿಥಿ ಕಲಾವಿದರು ಹಾಗೂ ಸಂಘದ ಕಲಾವಿದರ ಸಮಾಗಮದೊಂದಿಗೆ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು.

ನಾಟ್ಯ ಗುರು ದೀಪಕ್‌ ರಾವ್‌ ಪೇಜಾವರ ಅವರ ನಿರ್ದೇಶನದಲ್ಲಿ ಜರಗಿದ ಈ ಯಕ್ಷಗಾನದಲ್ಲಿ ತಾಯ್ನಾಡಿಂದ ಆಗಮಿಸಿದ್ದ ಅತಿಥಿ ಕಲಾವಿದರಾದ ಕದ್ರಿ ನವನೀತ ಶೆಟ್ಟಿ ಹಾಗೂ ವಿಜಯ ಕುಮಾರ್‌ ಶೆಟ್ಟಿ ಮೊಯ್ಲೊಟ್ಟು ಇವರು ತಮ್ಮ ಕಲಾಪ್ರೌಢಿಮೆಯಿಂದ ದ್ವೀಪದ ಯಕ್ಷಪ್ರೇಮಿಗಳ ಮನಸೂರೆಗೊಂಡರು. ಅತಿಥಿ ಭಾಗವತರಾಗಿ ರೋಶನ್‌ ಎಸ್‌. ಕೋಟ್ಯಾನ್‌ ಅವರು ತಮ್ಮ ಕಂಠಸಿರಿಯಿಂದ ಎಲ್ಲರನ್ನೂ ಮೋಡಿ ಮಾಡಿದರು.

ಅನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪೂಜಾ ಅರ್ಚಕರಾದ ಕೃಷ್ಣ ಅಡಿಗ ಕದ್ರಿ, ಯಕ್ಷಗಾನದ ಅತಿಥಿ ಕಲಾವಿದರಾದ ಕದ್ರಿ ನವನೀತ್‌ ಶೆಟ್ಟಿ, ವಿಜಯ ಕುಮಾರ್‌ ಶೆಟ್ಟಿ ಮೊಯ್ಲೊಟ್ಟು, ಭಾಗವತ ರೋಶನ್‌ ಎಸ್‌.ಕೋಟ್ಯಾನ್‌, ಪ್ರಾಯೋಜಕ ಮುಖ್ಯರಾದ ಕರುಣಾಕರ್‌ ಶೆಟ್ಟಿ ಅಂಪಾರು, ಮನೋಜ್‌ ಆಳ್ವ ಮೊದಲಾದ ಇವರನ್ನು ಸಂಘದ ಅಧ್ಯಕ್ಷರಾದ ಅಮರನಾಥ್‌ ರೈ, ಉಪಾಧ್ಯಕ್ಷ ಮಹೇಶ್‌ ಕುಮಾರ್‌ ಹಾಗೂ ಪದಾಧಿಕಾರಿಗಳು ಸಾಂಪ್ರದಾಯಿಕವಾಗಿ ಶಾಲು, ಸ್ಮರಣಿಕೆಯ ಸಮ್ಮಾನದೊಂದಿಗೆ ಗೌರವಿಸಿದರು.

Advertisement

ಇದೇ ವೇದಿಕೆಯಲ್ಲಿ ಸಂಘದ ವತಿಯಿಂದ ಯಕ್ಷೋಪಾಸನ ಕೇಂದ್ರದ ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಅವರಿಗೆ “ಯಕ್ಷದೀಪಕ’ ಎಂಬ ಬಿರುದು ನೀಡಿ ಗೌರವ ಸಮ್ಮಾನದೊಂದಿಗೆ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಕನ್ನಡ ಸಂಘದ ಪೋಷಕರಲ್ಲಿ ಒಬ್ಬರಾದಂತಹ ನವೀನ್‌ ಶೆಟ್ಟಿ ರಿಫ ಉಪಸ್ಥಿತರಿದ್ದರು. ಸಮ್ಮಾನಕ್ಕೆ ಉತ್ತರವಾಗಿ ದೀಪಕ್‌ ರಾವ್‌ ಪೇಜಾವರ ಮಾತನಾಡಿ ತನ್ನ ಕಲಾಸಾಧನೆಯನ್ನು ಗುರುತಿಸಿ ನೀಡಿದ ಈ ಗೌರವವು ಖುಷಿಯನ್ನು ತಂದಿದೆ ಎಂದರು.

ಸಂಘದ ಅಧ್ಯಕ್ಷರಾದ ಅಮರನಾಥ್‌ ರೈ ಅವರು ಮಾತನಾಡಿ, ಸಂಘದ ಎಲ್ಲ ಸದಸ್ಯರು ಮತ್ತು ದ್ವೀಪದ ಸರ್ವಧರ್ಮದ ಕನ್ನಡಿಗರ ಸರ್ವ ರೀತಿಯ ಸಹಕಾರ ಕನ್ನಡ ಸಂಘಕ್ಕೆ ಅತ್ಯಗತ್ಯ ಎಂದರು. ಈ ಕಾರ್ಯಕ್ರಮದ ಕೊನೆಗೆ ನೆರೆದವರೆಲ್ಲರಿಗೂ ಮಹಾ ಪ್ರಸಾದದ ಅಂಗವಾಗಿ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದ್ದ ಸುಭಾಶ್ಚಂದ್ರ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.

ಶ್ರೀ ಸತ್ಯನಾರಾಯಣ ಹಾಗೂ ಶನಿಕಥಾ ಸಂಕಲ್ಪ, ಶ್ರವಣ,ವಾಚನ ಬಳಿಕ ಮಂಗಳಾರತಿಯ ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್‌ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next