Advertisement

ಭ್ರಷ್ಟಾಚಾರದ ಮೆಡಲ್‌ಗ‌ಳ ಸರಮಾಲೆ

10:12 AM Aug 15, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ನನ್ನ ಜೀವಮಾನದಲ್ಲಿ ಮತ್ತು ಸ್ವಾತಂತ್ರ್ಯನಂತರ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ತನ್ನ ಎದೆಯ ಮೇಲೆ ಭ್ರಷ್ಟಾಚಾರದ ಮೆಡಲ್‌ಗ‌ಳನ್ನು ಹೆಚ್ಚಿಸಿಕೊಂಡು ಇದೇ ನನ್ನ
ಸಾಧನೆ ಎನ್ನುವಂತೆ ಜನರ ಮುಂದೆ ಹೋಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಯಾವುದೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ

Advertisement

ಬಂದರೆ ಸಂಬಂಧಪಟ್ಟವರ ರಾಜೀನಾಮೆ ಪಡೆಯಲಾಗುತ್ತದೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಅದನ್ನು ಮೆಡಲ್‌ನಂತೆ ಎದೆ ಮೇಲೆ ಜೋಡಿಸಲಾಗುತ್ತದೆ. ಒಂದೊಂದು ಹಗರಣ ಹೊರಬಂದಂತೆಲ್ಲಾ ಮತ್ತೂಂದು ಮೆಡಲ್‌ ಬಂದಿದೆ ಎಂದು
ಹೇಳುತ್ತಾ ಜನರ ಬಳಿ ಹೋಗುತ್ತಿದೆ. ಇಂತಹ ಅತ್ಯಂತ ಭ್ರಷ್ಟ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು. 20 ಮಂದಿ ಕೊಲೆ: ನಾಲ್ಕು ವರ್ಷಗಳಲ್ಲಿ ಸಂಘ ಪರಿವಾರದ 20 ಮಂದಿ ಕೊಲೆಯಾಗಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವ ಎಸ್‌ಡಿಪಿಐ, ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅದರ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಸರ್ಕಾರ ವಾಪಸ್‌ ಪಡೆಯುತ್ತಿದೆ. ಇಂಥವರು ರಾಜ್ಯದ ಜನರಿಗೆ ಹೇಗೆ ರಕ್ಷಣೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರತ್ಯೇಕ ಧ್ವಜ: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಕುರಿತ ಸರ್ಕಾರದ ಕ್ರಮವನ್ನು ವೋಟ್‌ಬ್ಯಾಂಕ್‌ ರಾಜಕಾರಣ ಎನ್ನುತ್ತಿರುವ ಬಿಜೆಪಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾ, ಈ ಎಲ್ಲಾ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಆರಂಭದಲ್ಲಿ ನಿರ್ಧಾರ ಮಾಡಿದ್ದರೆ ಅದಕ್ಕೆ ಗಂಭೀರತೆ ಇರುತ್ತಿತ್ತು. ಆದರೆ, ಇದುವರೆಗೆ ಸುಮ್ಮನಿದ್ದು ಈಗ ಪ್ರಸ್ತಾಪಿಸುತ್ತಿದ್ದಾರೆ ಎಂದರೆ ಅದು ವೋಟ್‌ಬ್ಯಾಂಕ್‌ ರಾಜಕಾರಣವಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.

ಬೇನಾಮಿ ಆಸ್ತಿಯ ಬಗ್ಗೆ ಪ್ರಸ್ತಾಪಿಸುತ್ತಿಲ್ಲ: ಗುಜರಾತ್‌ ರಾಜ್ಯಸಭೆ ಚುನಾವಣೆ ವೇಳೆ ನಡೆದ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ನಮ್ಮ ತಪ್ಪೇನಿದೆ? ನಾವು ಯಾವ ಶಾಸಕರನ್ನು ಖರೀದಿಸಿದ್ದೇವೆ? ಗುಜರಾತ್‌ನಲ್ಲಿ ಅತಿವೃಷ್ಠಿಯಿಂದ ಜನ ಸಂಕಷ್ಟದಲ್ಲಿದ್ದರೂ
ಕಾಂಗ್ರೆಸ್‌ ಶಾಸಕರನ್ನು ಬೆಂಗಳೂರಿಗೆ ತಂದು ಇಟ್ಟುಕೊಂಡವರು ಇದಕ್ಕೆ ಉತ್ತರಿಸಬೇಕು. ಅದರ ಬದಲು ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ನಡೆದ ಆದಾಯ ತೆರಿಗೆ ದಾಳಿಯನ್ನು ಮುಂದಿಟ್ಟುಕೊಂಡು ಕೇಂದ್ರದ ಮೇಲೆ ಆರೋಪ ಮಾಡಲಾಗುತ್ತಿದೆ. ದಾಳಿಗೊಳಗಾದ ಸಚಿವರು ಹೊಂದಿರುವ ಬೇನಾಮಿ ಆಸ್ತಿಯ ಬಗ್ಗೆ ಅವರು ಪ್ರಸ್ತಾಪಿಸುತ್ತಿಲ್ಲ ಎಂದು ಹೇಳಿದರು.

ರಾಜಕಾರಣ ಮಾಡಬಾರದು: ಮಹದಾಯಿ ವಿವಾದ ಕುರಿತ ಪ್ರಶ್ನೆಗೆ, ಕೇಂದ್ರದಲ್ಲಿ ನಮ್ಮ ಸರ್ಕಾರ ಬರುವ ಮೊದಲು ವಿವಾದ ಯಾವ ಪರಿಸ್ಥಿತಿಯಲ್ಲಿತ್ತು? ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ ಸರ್ಕಾರವಿತ್ತು. ಆಗ ಯಾವುದೇ ಪ್ರಯತ್ನ ಮಾಡದವರು ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳು ಚರ್ಚೆ ಮೂಲಕ ಇಂತಹ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕೇ ಹೊರತು ರಾಜಕಾರಣ ಮಾಡಬಾರದು ಎಂದರು. ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಕುರಿತು, “ಇದು ರಾಜಕೀಯ ಆಟ ಎಂಬುದು ನಮ್ಮ ನಿಲುವು ಅಷ್ಟೇ’ ಎಂದು ಹೇಳಿ ಶಾ ಸುಮ್ಮನಾದರು.

Advertisement

ಸಿದ್ದರಾಮಯ್ಯ ಬದಲು ಯಡಿಯೂರಪ್ಪ ಹೆಸರು 
ಪತ್ರಿಕಾಗೋಷ್ಠಿಯಲ್ಲಿ “ಸಿದ್ದರಾಮಯ್ಯ ಆರೋಪಿಸುತ್ತಾರೆ’ ಎಂದು ಹೇಳುವ ಬದಲು “ಯಡಿಯೂರಪ್ಪ ಹೇಳುತ್ತಾರೆ’ ಎಂದ ಅಮಿತ್‌ ಶಾ ಮಾಧ್ಯಮದವರನ್ನು ನಗೆಗಡಲಲ್ಲಿ ತೇಲಿಸಿದರು. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳ ಕುರಿತಂತೆ ಅಂಕಿ ಅಂಶಗಳ ಸಹಿತ ವಿವರಣೆ ನೀಡುತ್ತಿದ್ದ ಅಮಿತ್‌ ಶಾ, “ಸಿದ್ದರಾಮಯ್ಯ ಹೇಳುತ್ತಾರೆ’ ಎನ್ನುವ ಬದಲು “ಯಡಿಯೂರಪ್ಪ ಹೇಳುತ್ತಾರೆ’
ಎಂದಾಗ ಪಕ್ಕದಲ್ಲಿದ್ದ ಕೇಂದ್ರ ಸಚಿವ ಅನಂತಕುಮಾರ್‌, “ಸಾರ್‌ ಅದು ಸಿದ್ದರಾಮಯ್ಯ, ಯಡಿಯೂರಪ್ಪ ಅಲ್ಲ’ ಎಂದರು. ಕೂಡಲೇ ತಪ್ಪು ಸರಿಪಡಿಸಿಕೊಂಡ ಅಮಿತ್‌ ಶಾ, “ಎರಡು ದಿನಗಳಿಂದ ಯಡಿಯೂರಪ್ಪ ಅವರೊಂದಿಗೇ ಇದ್ದುದರಿಂದ ಹೀಗಾಯಿತು’ ಎಂದು ಹೇಳಿ ಮಾತು ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next