Advertisement
ಸ್ಥಳೀಯ ಮಟ್ಟದ ಆಡಳಿತದಲ್ಲಿ ಪಾರದರ್ಶಕತೆ ತರುವುದು ಮತ್ತು ಆಡಳಿತದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳುವಂತೆ ಮಾಡುವುದು ವಾರ್ಡ್ ಸಮಿತಿಯ ಪರಿಕಲ್ಪನೆಯಾಗಿದೆ. ಅದರ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಸ್ತರಗಳನ್ನು ಪ್ರತಿನಿಧಿಸುವವರು ಸಮಿತಿಯಲ್ಲಿರಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೆ ಅವಕಾಶ ನೀಡಲು ಸಿದ್ಧವಿರದ ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಸದಸ್ಯರಾಗಿ ನೇಮಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
Related Articles
Advertisement
ನೇಮಕ ಪ್ರಕ್ರಿಯೆಯೇ ಇಲ್ಲ!: ವಾರ್ಡ್ ಸಮಿತಿಗೆ ಸದಸ್ಯರ ಆಯ್ಕೆಗೆ ಬಿಬಿಎಂಪಿ ಮುಂದಾಗಿದೆ. ಆದರೂ, ಸದಸ್ಯರ ನೇಮಕವನ್ನು ಯಾವ ಪ್ರಕ್ರಿಯೆ ಮೂಲಕ ಮಾಡುತ್ತಿದೆ ಎಂಬುದನ್ನೇ ತಿಳಿಸಿಲ್ಲ. ಇದರೊಂದಿಗೆ ವಾರ್ಡ್ ಸಮಿತಿಗಳ ರಚನೆಗೆ ಮುಂದಾಗಿರುವ ಕುರಿತು ಪ್ರಚಾರ ನೀಡಲು ಅಧಿಕಾರಿಗಳು ಮುಂದಾಗಿಲ್ಲ. ಸದಸ್ಯರಾಗಲು ಬಯಸುವವರು ಯಾವೆಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು, ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹೀಗೆ ಯಾವುದೇ ನಿಯಮಗಳನ್ನು ರೂಪಿಸಿಲ್ಲ.
ಪಾಲಿಕೆಗೆ ಬಂದ ಸಾವಿರಾರು ಅರ್ಜಿಗಳು!: ಹೈಕೋರ್ಟ್ ಆದೇಶಕ್ಕೂ ಮೊದಲೇ ಪಾಲಿಕೆಗೆ ನೂರಾರು ನಾಗರಿಕರು ಸಮಿತಿಗೆ ಸದಸ್ಯರಾಗಲು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಆದೇಶದ ನಂತರವೂ ಸಾವಿರಾರು ಅರ್ಜಿಗಳು ಪಾಲಿಕೆಗೆ ಬಂದಿವೆ. ಪಾಲಿಕೆಗೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಅರ್ಜಿ ನೀಡಿದರೆ ಕಡೆಗಣಿಸುತ್ತಾರೆ ಎಂಬ ಸಂಶಯದಿಂದ ಹೆಚ್ಚಿನ ಸಂಖ್ಯೆಯ ನಾಗರಿಕರು ನೇರವಾಗಿ ತಮ್ಮ ಅರ್ಜಿಗಳನ್ನು ಬಿಬಿಎಂಪಿ ಆಯುಕ್ತರ ಕಚೇರಿಗೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಯಾವ ಮಾನದಂಡಗಳ ಆಧಾರದ ಮೇಲೆ ಸಮಿತಿಗೆ ಸದಸ್ಯರನ್ನು ನೇಮಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಪಾಲಿಕೆ ಸದಸ್ಯರ ಆತಂಕವೇನು?: ವಾರ್ಡ್ ಸಮಿತಿಯ ಸದಸ್ಯರು ವಾರ್ಡ್‌ನಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯ ಪರಿಶೀಲನೆ ಹಾಗೂ ಉಸ್ತುವಾರಿ ನಡೆಸುವ ಅವಕಾಶವಿದೆ. ಇದರೊಂದಿಗೆ ಕಾಮಗಾರಿಯಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಲೆಕ್ಕ ಪರಿಶೋಧನೆ ವರದಿ ಪಡೆದು ಪರಿಶೀಲನೆ ನಡೆಸಬಹುದು. ಇದರಿಂದ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರ ವರ್ಚಸ್ಸು ಕಡಿಮೆಯಾಗಲಿದೆ ಎಂಬ ಆತಂಕ ಒಂದೆಡೆ.
ಪಾಲಿಕೆ ಸದಸ್ಯರು ಸಾರ್ವಜನಿಕರ ಕುಂದು * ಕೊರತೆಗಳಿಗೆ ಸ್ಪಂದಿಸದಿದ್ದರೆ ಸಮಿತಿ ಸದಸ್ಯರು ಪಾಲಿಕೆ ಸದಸ್ಯರ ಹೊಣೆಗಾರಿಕೆಯನ್ನು ಪ್ರಶ್ನಿಸಬಹುದು. ಇಂತಹ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನೇ ಸಮಿತಿ ಸದಸ್ಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ವಾರ್ಡ್ ಸಮಿತಿಯಲ್ಲಿ ಯಾರಿರುತ್ತಾರೆ?: ವಾರ್ಡ್ ಸಮಿತಿಗೆ ಆಯಾ ವಾರ್ಡ್‌ನ ಚುನಾಯಿತ ಕಾರ್ಪೊರೇಟರ್ ಅಧ್ಯಕ್ಷರಾಗಿರಲಿದ್ದಾರೆ. ವಿವಿಧ ಸ್ತರಗಳನ್ನು ಪ್ರತಿನಿಧಿಸುವ 10 ಮಂದಿ ಸದಸ್ಯರು ಇರುತ್ತಾರೆ. ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 2 ಸದಸ್ಯರು, 3 ಮಹಿಳೆಯರು, 2 ನೋಂದಾಯಿತ ಸಂಘ ಸಂಸ್ಥೆಗಳು ಇರಲೇಬೇಕು. ಇದರೊಂದಿಗೆ ಇತರೆ 3 ಸದಸ್ಯರನ್ನು ನೇಮಿಸಿಕೊಳ್ಳಬಹುದಾಗಿದೆ.
ಆಯ್ಕೆ ಸಮಿತಿ ರಚಿಸಿಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ವಾರ್ಡ್ ಸಮಿತಿ ರಚನೆಗೆ ಮುಂದಾಗಿದೆ. ಆದರೆ, ಸಮಿತಿಗೆ ಸದಸ್ಯರ ಆಯ್ಕೆ ವಿಧಾನದ ಕುರಿತು ಈವರೆಗೆ ಯಾವುದೇ ಮಾಹಿತಿಯನ್ನು ಪಾಲಿಕೆ ನೀಡಿಲ್ಲ. ಜನಪ್ರತಿನಿಧಿಗಳು ಸೂಚಿಸುವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಸಮಾಜದ ಪ್ರಮುಖರ ಸಮಿತಿ ರಚಿಸಿ, ಆ ಮೂಲಕ ವಾರ್ಡ್ ಸಮಿತಿಗೆ ಸದಸ್ಯರನ್ನು ನೇಮಿಸಬೇಕು. ಜತೆಗೆ ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿರುವ ದಿನಾಂಕವನ್ನು ಜೂ.20ರವರೆಗೆ ವಿಸ್ತರಿಸಬೇಕು.
-ಕಾತ್ಯಾಯಿನಿ ಚಾಮರಾಜ್, ಸಿವಿಕ್ ಸಂಸ್ಥೆಯ ಕಾರ್ಯಕಾರಿಣಿ ಟ್ರಸ್ಟಿ ಪಾಲಿಕೆ ಸದಸ್ಯರು ತಮಗೆ ಬೇಕಾದವರನ್ನೇ ವಾರ್ಡ್ ಸಮಿತಿಗೆ ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಿರುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರೊಂದಿಗೆ ಸದಸ್ಯರಾಗಲು ಬಯಸುವವರು ನೇರವಾಗಿ ಕೇಂದ್ರ ಕಚೇರಿಗೆ ಅರ್ಜಿಗಳನ್ನು ನೀಡಬಹುದಾಗಿದೆ.
-ಸಫರಾಜ್ ಖಾನ್, ಜಂಟಿ ಆಯುಕ್ತ ಘನತ್ಯಾಜ್ಯ ಮತ್ತು ಆರೋಗ್ಯ ವಾರ್ಡ್ ಸಮಿತಿಯ ಅನುಕೂಲಗಳೇನು?
* ವಾರ್ಡ್‌ನ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸಮಿತಿ ವೇದಿಕೆಯಾಗಲಿದೆ
* ಪ್ರತಿ ತಿಂಗಳು ಸಮಿತಿ ಸಭೆ ನಡೆಯುವುದರಿಂದ ನಾಗರಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ
* ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಸಮಿತಿ ಕ್ರಮ ಕೈಗೊಳ್ಳಬಹುದು.
* ತಿಂಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಮೇಲೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಬಹುದು.
* ಸಾರ್ವಜನಿಕರು ಸಲ್ಲಿಸುವ ಕುಂದು ಕೊರತೆಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ವರದಿ ನೀಡಬೇಕು
* ಪಾಲಿಕೆ ಸದಸ್ಯರು ಸಭೆ ಕರೆಯದಿದ್ದರೆ 1/3ರಷ್ಟು ಸದಸ್ಯರು ಸಭೆ ನಡೆಸುವಂತೆ ಪಾಲಿಕೆ ಸದಸ್ಯರಿಗೆ ತಿಳಿಸಬಹುದು.
* ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸಮಿತಿ ಸದಸ್ಯರು ಪರಿಶೀಲನೆ ಮತ್ತು ಉಸ್ತುವಾರಿ ನಡೆಸಬಹುದು.
* ಕಾಮಗಾರಿಗಳ ಪರಿಶೀಲನೆ ವೇಳೆ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವುದು ಕಂಡು ಬಂದರೆ ಕ್ರಮಕ್ಕೆ ಮುಂದಾಗಬಹುದು.
* ಇದರಿಂದಾಗಿ ಕಾಮಗಾರಿಗಳಲ್ಲಿ ಗುಣಮಟ್ಟ ಹಾಗೂ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಲಿದೆ.
* ಲೆಕ್ಕ ಪರಿಶೋಧನೆ ವರದಿ ಪರಿಶೀಲನೆ ನಡೆಸಬಹುದು.
* ಪಾಲಿಕೆ ಸದಸ್ಯರ ಹೊಣೆಗಾರಿಕೆಯನ್ನು ಸದಸ್ಯರು ಪ್ರಶ್ನಿಸಬಹುದು.
* ವಾರ್ಡ್‌ನ ಎಲ್ಲ ಸದಸ್ಯರು ತಿಂಗಳ ಸಮಿತಿ ಸಭೆಯನ್ನು ವೀಕ್ಷಣೆ ಮಾಡಬಹುದು. * ವೆಂ.ಸುನೀಲಕುಮಾರ್