Advertisement

ಜನಸೇವಕರ ಕಾರ್ಪೊರೇಟ್‌ ಸೇವೆ

10:10 AM Feb 14, 2019 | Team Udayavani |

ಬೆಂಗಳೂರು: ಪ್ರಸ್ತುತ ರಾಜಕಾರಣಿಗಳು ಜನ ಸೇವಕರಾಗಿಲ್ಲ, ಬದಲಾಗಿ ಕಾರ್ಪೊರೇಟ್‌ ಕಂಪನಿಗಳ ಸೇವಕರಾಗಿ ವರ್ತಿಸುತ್ತಿದ್ದಾರೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ನಡೆದ “ವೈಚಾರಿಕ ಸಮಾವೇಶ’ದಲ್ಲಿ ಮಾತನಾಡಿದ ಅವರು, ಪ್ರಸ್ತುತ ಎಲ್ಲೆಡೆ ಹಣದ ಆಳ್ವಿಕೆ ನಡೆಯುತ್ತಿದೆ. ರೈತರ ಪರ ಕೆಲಸ ಮಾಡಬೇಕಾದ ಜನ ನಾಯಕರು ಕೆಲ ಕಂಪನಿಗಳ ಪರ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣದ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಮಾರುತ್ತಾ, ದೇಶ ಮಾರಾಟವನ್ನೇ ದೇಶ ಪ್ರೇಮ ಎಂದು ಜನತೆಯನ್ನು ನಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಎಂ.ಡಿ.ನಂಜುಂಡಸ್ವಾಮಿಯವರು ಸುಂದರೇಶ್‌, ಪುಟ್ಟಣ್ಣಯ್ಯರೊಂದಿಗೆ ಒಟ್ಟುಗೂಡಿಕೊಂಡು ವ್ಯವಸ್ಥೆಯ ಜತೆ ರಾಜಿಯಾಗದೆ ಕಠೊರ ನಿಲುವು ಗಳಿಂದ ಚಳವಳಿ ನಡೆಸಿ ರೈತ ಸಂಘಕ್ಕೆ ಒಂದು ವರ್ಚಸ್ಸು ತಂದುಕೊಟ್ಟರು.

ಸ್ಥಳೀಯ ಸಮಸ್ಯೆ ಗಳೊಂದಿಗೆ ಜಾಗತಿಕ ವಿದ್ಯಮಾನ ಜತೆ ಕಾಣುವ ಒಳನೋಟವನ್ನು ಹೊಂದಿದ್ದರು ಎಂದು ಹೇಳಿದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಮಾತನಾಡಿ, ದೇಶದ ಕೃಷಿ ವಲಯ ತೀವ್ರವಾದ ಬಿಕ್ಕಟ್ಟಿನಲ್ಲಿದೆ. ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆಯು ಉತ್ಪಾದನೆಯ ವೆಚ್ಚಕ್ಕಿಂತ ಕಡಿಮೆ ಇದೆ. ರೈತ ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕಾದರೆ ಅಗತ್ಯ ಕಾನೂನು ತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. 

ಇದೇ ವೇಳೆ ಪ್ರೋ.ಎಂ.ಡಿ.ಎನ್‌. ಬಸವರಾಜ್‌ ಅವರು ಬರೆದ “ವಿಶ್ವ ರೈತ ಸಂತ ಪ್ರೊ.ಎಂ.ಡಿ. ನಂಜುಂಡಸ್ವಾಮಿ’ ಪುಸ್ತಕವನ್ನು ಚುಕ್ಕಿ ನಂಜುಂಡಸ್ವಾಮಿ ಅವರು ಲೋಕಾರ್ಪಣೆಗೊಳಿಸಿದರು. ರೈತರ ಕುರಿತ ರಣಹೇಡಿ ಸಿನಿಮಾದ ಆಡಿಯೋ ಬಿಡುಗಡೆಗೊಳಿಸಲಾಯಿತು. ನಂಜುಂಡ ಸ್ವಾಮಿ ಪುತ್ರಿ ಚುಕ್ಕಿ, ನಟ ಪ್ರಕಾಶ್‌ ರೈ, ರಾಜ್ಯ ರೈತ ಸಂಘದ ಸುನೀತಾ ಪುಟ್ಟಣ್ಣಯ್ಯ, ಸಮಿತಿಯ ಪ್ರೋ.ಕೆ.ಸಿ.ಬಸವರಾಜ್‌, ಸ್ವರಾಜ್ಯ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next