Advertisement

ದಿಕ್ಕುತಪ್ಪಿಸಲು ಕಾಮಗಾರಿಗಳಿಗೆ ಚಾಲನೆ

03:54 PM Mar 10, 2018 | Team Udayavani |

ಸಂತೆಮರಹಳ್ಳಿ: ಕೊಳ್ಳೇಗಾಲ ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕರು ತಮ್ಮ ಅಧಿಕಾರದ 4 ವರ್ಷಗಳನ್ನು ಆರಾಮವಾಗಿ ಕಳೆದು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಮಗಾರಿಗಳಿಗೆ ಚಾಲನೆ ನೀಡಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎನ್‌.ಮಹೇಶ್‌ ಆರೋಪಿಸಿದರು.

Advertisement

ಸಂತೆಮರಹಳ್ಳಿ ಗ್ರಾಮದ ಮೈಸೂರು ರಸ್ತೆಯಲ್ಲಿ ಬಿಎಸ್‌ಪಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಇದನ್ನು ಹಾಲಿ ಶಾಸಕರು ಕಿಂಚಿತ್ತೂ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಅವರು ಭೇಟಿ ನೀಡದ ಅನೇಕ ಗ್ರಾಮಗಳು ಇಂದು ಕ್ಷೇತ್ರ ವ್ಯಾಪ್ತಿಯಲ್ಲಿವೆ ಎಂದು ದೂರಿದರು.

ಸಾರ್ವಜನಿಕರು ಇವರ ಅಧಿಕಾರದಿಂದ ಬೇಸತ್ತಿದ್ದಾರೆ. ಆನಾರೋಗ್ಯದ ನೆಪವೊಡ್ಡಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಇವರು ಸಂಪೂರ್ಣ ವಿಫ‌ಲರಾಗಿದ್ದಾರೆ. ಆದರೆ, ಚುನಾವಣೆ ಸಮೀಪಿಸುತ್ತಿರುವಂತೆ ಇವರು ಫಿನಿಕ್ಸ್‌ನಂತೆ ಎದ್ದೂ ಬಿದ್ದು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಮುಗ್ಧ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಾನು ಕಳೆದ 3 ಚುನಾವಣೆಗಳಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದೇನೆ. ಇಲ್ಲಿನ ಪ್ರತಿ ನಾಗರಿಕರ ನಾಡಿಮಿಡಿತವೂ ಚೆನ್ನಾಗಿ ಗೊತ್ತಿದೆ. ಹಲವು ಗ್ರಾಮಗಳಲ್ಲಿ ಜನಸೇವಾ ಕೇಂದ್ರ ತೆರೆದು ಸಾರ್ವಜನಿಕರ ಕೆಲಸ ಮಾಡಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಶಾಸಕರ ಅಧಿಕಾರವನ್ನು ಅನುಭವಿಸಿರುವ ಇಲ್ಲಿನ ಮತದಾರರು ಇದರ ಬಗ್ಗೆ ಬೇಸತ್ತು ಈಗ ಬಿಎಸ್‌ಪಿಯತ್ತ ವಾಲುತ್ತಿದ್ದಾರೆ ಎಂದು ಹೇಳಿದರು.

ಪ್ರತಿ ಗ್ರಾಮಗಳಲ್ಲೂ ಪಕ್ಷದ ಬೆಂಬಲಿಗರ ಸಂಖ್ಯೆ ವೃದ್ಧಿಸುತ್ತಿದೆ. ಎಲ್ಲಾ ಸಮುದಾಯಗಳ ಸಾರ್ವಜನಿಕರು ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರ ಬಲವಂತವಿಲ್ಲದೆ ಸೇರ್ಪಡೆಯಾಗುತ್ತಿದ್ದಾರೆ. ವೀರಶೈವ ಮುಖಂಡರೂ ಪಕ್ಷಕ್ಕೆ
ಸೇರ್ಪಡೆಯಾಗುತ್ತಿದ್ದು, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಎಲ್ಲಾ ಸೂಚನೆಗಳೂ ಗೋಚರಿಸುತ್ತಿವೆ ಎಂದರು.

Advertisement

ಈ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ತೊರೆದು ಅನೇಕ ಮುಖಂಡರು ಬಿಎಸ್‌ಪಿಗೆ ಸೇರ್ಪಡೆಯಾದರು. ತಾಪಂ ಸದಸ್ಯ ವೈ. ಕೆ.ಮೋಳೆ ನಾಗರಾಜು, ನಗರಸಭೆ ಸದಸ್ಯ ನಂಜುಂಡಸ್ವಾಮಿ, ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಬಾಗಳಿರೇವಣ್ಣ, ಮಾದಪ್ಪ, ಕಮರವಾಡಿ ಶಂಕರಪ್ಪ, ಶಿವನಂಜಪ್ಪ,
ಗುರುರಾಜಾಚಾರ್‌, ಚಿಕ್ಕಬಸಪ್ಪ, ಬಸವಟ್ಟಿ ಮಲ್ಲೇಶಪ್ಪ, ಮರಿಸ್ವಾಮಿ, ರಾಜಣ್ಣ, ಉಮ್ಮತ್ತೂರು ಬಸವರಾಜು, ಚಿನ್ನಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next