ಶಿವಮೊಗ್ಗ: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ನಾಯಕರ ವರ್ತನೆಯನ್ನು ಖಂಡಿಸಿ ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಮಹಾವೀರ ಸರ್ಕಲ್‌ನಲ್ಲಿ ಮಾವನ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತದಿಂದ ರಚನೆಯಾಗಿದ್ದು, ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿ ಉತ್ತಮ ಕೆಲಸ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಪ್ರಜಾಪ್ರಭುತ್ವಕ್ಕೆ ಅವಮಾನ ಎಂಬಂತೆ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ರಾಜೀನಾಮೆ ಕೊಡಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕೆಲಸವನ್ನು ಕಳೆದ 6 ತಿಂಗಳಿನಿಂದ ಮಾಡುತ್ತಲೇ ಬಂದಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನವಾಗಿದೆ. ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡು ಅವಮಾನವಾದರೂ ಕೂಡ ತಮ್ಮ ವರ್ತನೆಯನ್ನು ಬಿಟ್ಟಿಲ್ಲ. ಅವರಿಗೆ ಬುದ್ಧಿ ಬರುವುದಿಲ್ಲ. ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಸರ್ಕಾರದ ಜೊತೆಗೆ ಸಹಕಾರ ನೀಡಿ ಈ ನಾಡಿನ ರೈತರ, ಬಡವರ ನೆರವಿಗೆ ಧಾವಿಸುವುದನ್ನು ಬಿಟ್ಟು ಐಷಾರಾಮಿ ಹೊಟೇಲ್‌ಗಳಲ್ಲಿ ಸೇರಿಕೊಂಡು ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಬಿಜೆಪಿ ಶಾಸಕರ ಮತ್ತು ಮುಖಂಡರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ಶಾಸಕರು ಯಾರೂ ಸ್ವಯಂಪ್ರೇರಿತವಾಗಿ ಹೋಗಿಲ್ಲ. ಇವರಿಗೆ ಆಮಿಷ ತೋರಿಸಲಾಗಿದೆ. ಈ ತಂತ್ರಕ್ಕೆ ಕಾಂಗ್ರೆಸ್ ಶಾಸಕರು ಬಲಿಯಾಗುವುದಿಲ್ಲ ಎಂದು ಮತ್ತೂಮ್ಮೆ ತೋರಿಸಿದ್ದಾರೆ. ಬಿಜೆಪಿ ಮತ್ತೂಮ್ಮೆ ತನ್ನ ಮರ್ಯಾದೆಯನ್ನು ಕಳೆದುಕೊಂಡಿದೆ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ವಹಿಸಿದ್ದರು. ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್, ವಿಶ್ವನಾಥ ಕಾಶಿ, ಎಚ್.ಸಿ. ಯೋಗೇಶ್, ಎಸ್.ಪಿ. ದಿನೇಶ್, ಕೆ.ದೇವೇಂದ್ರಪ್ಪ, ರಮೇಶ್ ಹೆಗ್ಡೆ, ವಿಜಯಲಕ್ಷ್ಮೀ ಪಾಟೀಲ್, ಪಲ್ಲವಿ, ಆರೀಫುಲ್ಲಾ, ಎಲ್. ರಾಮೇಗೌಡ, ಸಿ.ಎಚ್. ಚಂದ್ರಭೂಪಾಲ್, ವೈ.ಎಚ್. ನಾಗರಾಜ್ ಇನ್ನಿತರರು ಇದ್ದರು.