ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ದೇಶದ ಜನತೆ ವಿಷಮ ಪರಿಸ್ಥಿತಿಯಲ್ಲಿ ಬದುಕುವಂತಾಗಿದ್ದು, ಇದನ್ನು ಹೋಗಲಾಡಿಸಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದರು. ಕರ್ನಾಟಕ ವೇದಿಕೆ ವತಿಯಿಂದ ಆಯೋಜಿಸಿದ್ದ ಸಹಿ ಸಂಗ್ರಹ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೀತಿ, ಸಹಬಾಳ್ವೆಯಿಂದ ಬದುಕನ್ನು ಕಾಣಬೇಕಾದ ದೇಶದ ಜನತೆ ಇಂದು ವಿಷಮಯ ವಾತಾವರಣದಲ್ಲಿ ಬದುಕುವಂತಾಗಿದೆ. ರಾಜಕಾರಣಿಗಳು ಅಭಿವೃದ್ಧಿದಾಯಕ ದೇಶದ ಹೆಸರನ್ನು ಹೇಳಿಕೊಂಡು ನಿರುದ್ಯೋಗದ ಅಭಿವೃದ್ಧಿ ಸೃಷ್ಟಿಸುತ್ತಿದ್ದಾರೆ. ಆಮೂಲಕ ದೇಶದಲ್ಲಿ ಬಡವ- ಬಲ್ಲಿದ ಎಂಬ ಅಂತರ ಹೆಚ್ಚಾಗುತ್ತಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೃಷಿ ಆಧಾರಿತ ಕೈಗಾರಿಕೆ ಹೆಚ್ಚಾಗಬೇಕು. ಇದರಿಂದ ದೇಶದಲ್ಲಿ ಉದ್ಯೋಗದ ಸೃಷ್ಟಿಯೂ ಆಗಲಿದೆ ಎಂದರು. ವೇದಿಕೆ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಬೆಣ್ಣೆಹಚ್ಚುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಕೌಶಲ್ಯ ಕರ್ನಾಟಕ ಮತ್ತು ಕೌಶಲ್ಯ ಅಭಿವೃದ್ಧಿ ಎಂಬ ಯೋಜನೆಗಳಿಗೆ ಒತ್ತು ನೀಡಿದೆ. ಹೀಗಿದ್ದರೂ ಉದ್ಯೋಗ ದೊರೆಯದ ಪರಿಣಾಮ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗವಿಲ್ಲದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಮುಂದಿನ ಚುನಾವಣೆಯೊಳಗೆ ಕನಿಷ್ಠ 10 ಲಕ್ಷ ಉದ್ಯೋಗ ಸೃಷ್ಟಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಸಹಿಸಂಗ್ರಹ ಅಭಿಯಾನವನ್ನು ನಡೆಸಲಾಗುತ್ತಿದೆ. ನಂತರ ಸಂಗ್ರಹಗೊಂಡ ವಿದ್ಯಾರ್ಥಿಗಳ ಸಹಿಯನ್ನು ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷದ ಮುಖ್ಯಸ್ಥರಿಗೆ ತಲುಪಿಸಲಿದ್ದು, ಒಂದೊಮ್ಮೆಸರ್ಕಾರ ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಎಲ್ಲಾ ನಿರುದ್ಯೋಗಿಗಳು ಒಟ್ಟು ಗೂಡಿ ಉದ್ಯೋಗವು ಇಲ್ಲ – ಮತದಾನವು ಇಲ್ಲ ಎಂಬ ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಿನ ಚುನಾವಣೆಗೂ ಮುನ್ನ ಉದ್ಯೋಗ ಸೃಷ್ಟಿಸುವಂತೆ ಒತ್ತಾಯಿಸಿ ಹಲವು ವಿದ್ಯಾರ್ಥಿಗಳು ಹಾಗೂ ಯುವಜನರು ಪ್ರಚಾರಾಂದೋಲ ನದಲ್ಲಿ ಪಾಲ್ಗೊಂಡು ಸಹಿ ಹಾಕಿದರು. ಅಲ್ಲದೆ ಬೀದಿ ನಾಟಕ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಯಿತು. ವೇದಿಕೆ ಸಂಚಾಲಕ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಡಾ.ಎಚ್.ವಿ.ವಾಸು, ಮುತ್ತುರಾಜ್, ಚಂದ್ರಮಿಶ್ರ, ಮಲ್ಲಿಗೆ ಮತ್ತಿತರರು ಭಾಗವಹಿಸಿದ್ದರು.