Advertisement

ಕೊರೊನಾ ಸಂಕಷ್ಟ: ರಾಜ್ಯ ರಸ್ತೆ ಸಾರಿಗೆ ಘಟಕಕ್ಕೆ ನಷ್ಟ

09:20 PM Mar 16, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳವಾದರೂ ಟಿಕೆಟ್‌ ದರ ಏರಿಸದೇ ನಷ್ಟಕ್ಕೆ ಗುರಿಯಾಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮ ಹಲವು ದಿನಗಳ ಹಿಂದೆಯಷ್ಟೇ ಆರ್ಥಿಕ ನಷ್ಟದಿಂದ ಪಾರಾಗಲು ಬಸ್‌ ಪ್ರಯಾಣ ದರವನ್ನು ಶೇ.12 ರಷ್ಟು ಹೆಚ್ಚಿಸಿದರೂ ಇದೀಗ ಕೊರೊನಾ ವೈರಸ್‌ ಸಂಕಷ್ಟದಿಂದ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತೆ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತೆ ಮಾಡಿದೆ.

Advertisement

ಹೌದು, ಶೇ.12 ರಷ್ಟು ಟಿಕೆಟ್‌ ದರ ಏರಿಸುವ ಮೂಲಕ ಆರ್ಥಿಕ ದರದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಕೊರೊನಾ ವೈರಸ್‌ ಸಂಕಷ್ಟ ಎದುರಾಗಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್‌ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಕುಸಿದು ಕೆಎಸ್‌ಆರ್‌ಟಿಸಿ ಗಳಿಸುವ ಆದಾಯಕ್ಕೆ ಕತ್ತರಿ ಬಿದ್ದಿದೆ.

ಆದಾಯಕ್ಕೆ ಖೋತಾ: ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ಪ್ರಕರಣ ದೃಢಪಡದೇ ಇದ್ದರೂ ದಿನದಿಂದ ದಿನಕ್ಕೆ ಸೃಷ್ಟಿಸುತ್ತಿರುವ ಸಾಕಷ್ಟು ಅವಾಂತರ, ಜಾಲತಾಣಗಳಲ್ಲಿ ಸೋಂಕಿನ ಬಗ್ಗೆ ಹರಡುತ್ತಿರುವ ವದಂತಿ ನಿತ್ಯ ಬಸ್‌ ಪ್ರಯಾಣ ಮಾಡುತ್ತಿದ್ದವರಲ್ಲಿ ಆತಂಕದ ಛಾಯೆ ಮೂಡಿಸಿದೆ. ವಿಶೇಷವಾಗಿ ಕೊರೊನಾ ವೈರಸ್‌ ಭೀತಿ ಹೆಚ್ಚಾದ ಬಳಿಕ ಜಿಲ್ಲೆಯಲ್ಲಿ ಬೆಂಗಳೂರಿಗೆ ನಿತ್ಯ ಪ್ರಯಾಣಿಸುತ್ತಿದ್ದವರ ಸಂಖ್ಯೆ ಕುಸಿದ ಪರಿಣಾಮ ಜಿಲ್ಲೆಯ ಕೆಎಸ್‌ಆರ್‌ಟಿಸಿ ಘಟಕಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೆ ಖೋತಾ ಬಿದ್ದಿದೆ.

ಪ್ರಯಾಣಿಕರ ಸಂಖ್ಯೆ ಇಳಿಕೆ: ಜಿಲ್ಲೆಯಲ್ಲಿ ನಿತ್ಯ ಖಾಸಗಿ ಬಸ್‌ಗಳಿಗಿಂತ ಹೆಚ್ಚು 570 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇದ್ದು ಚಿಕ್ಕಬಳ್ಳಾಪುರದಿಂದ ಬೆಂಗಳೂರು, ಕೋಲಾರ, ತಿರುಪತಿ, ಧರ್ಮಸ್ಥಳ, ದಾವಣಗೆರೆ, ಹುಬ್ಬಳಿ, ಶಿರಾ, ಮೈಸೂರು, ಮಂಡ್ಯ, ಹಾಸನ ಹೀಗೆ ದೂರದ ಊರುಗಳಿಗೆ ನೇರ ಬಸ್‌ ಸೌಕರ್ಯ ಇದ್ದರೂ ಈಗ ಪ್ರಯಾಣಿಸುವರ ಸಂಖ್ಯೆ ಮಾತ್ರ ಕುಸಿಯುವಂತೆ ಮಾಡಿದೆ.

ಜೊತೆಗೆ ಕೊರೊನಾ ವೈರಸ್‌ ಆತಂಕ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಂತೆ ವಿಶೇಷವಾಗಿ ಬೆಂಗಳೂರಿಗೆ ನಿತ್ಯ ಸಂಚರಿಸುವ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗೆ ಬ್ರೇಕ್‌ ಹಾಕಿದ್ದು, ಬೆಂಗಳೂರಿನಲ್ಲಿರುವ ಕೂಲಿ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಬಂದು ಬಿಟ್ಟಿರುವ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಎದುರಾಗುವಂತೆ ಮಾಡಿದೆ.

Advertisement

ಸರ್ಕಾರದ ನಿರ್ಧಾರವು ಕಾರಣ: ಒಂದೆಡೆ ಕೊರೊನಾ ವೈರಸ್‌ ಭೀತಿಯಿಂದ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ಮಾಡುವರ ಸಂಖ್ಯೆ ಕುಸಿದರೆ, ಮತ್ತೂಂದೆಡೆ ಸರ್ಕಾರ ಕೈಗೊಂಡಿರುವ ಹಲವು ನಿರ್ಧಾರಗಳು ಸಹ ಪ್ರಯಾಣಿಕರ ಸಂಖ್ಯೆ ಕುಸಿಯಲಿಕ್ಕೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದು, ವಾರದ ಕಾಲ ಮಾಲ್‌, ಚಿತ್ರ ಮಂದಿರ, ಮದುವೆ, ನಾಮಕಾರಣ, ಸಾರ್ವಜನಿಕ ಸಭೆ, ಸಮಾರಂಭ, ಜನ ಸೇರುವ ಸಂತೆ ಹಾಗೂ ಜಾತ್ರೆ ನಿರ್ಬಂಧಿಸಿರುವುದರ ಪರಿಣಾಮ ಕೆಎಸ್‌ಆರ್‌ಟಿಸಿಗೆ ಕೊರೊನಾ ಆರ್ಥಿಕ ನಷ್ಟ ತಂದೊಡ್ಡಿದೆ.

ಖಾಸಗಿ ಬಸ್‌ಗಳಿಗೆ ಪ್ರಯಾಣಿಕರು ಬರ!: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸಂಕಷ್ಟ ಖಾಸಗಿ ಬಸ್‌ಗಳಿಗೂ ತಟ್ಟಿದೆ. ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರುವುದರ ಜೊತೆಗೆ ವಾರದ ಕಾಲ ನಂದಿಬೆಟ್ಟ, ಜನ ಸೇರುವ ಸಂತೆ, ಜಾತ್ರೆ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಜಿಲ್ಲಾಡಳಿತ ಬ್ರೇಕ್‌ ಹಾಕಿರುವ ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಇದರ ಬಿಸಿ ಖಾಸಗಿ ಬಸ್‌ಗಳ ಮೇಲೆ ತಟ್ಟಿದೆ.

ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಖಾಸಗಿ ಬಸ್‌ ಸಂಚಾರ ಅಧಿಕ ಇದ್ದರೂ ಈಗ ಪ್ರಯಾಣಿಕರ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಬಸ್‌ಗಳಲ್ಲಿ ಹೆಚ್ಚು ಸಂಚರಿಸಿದರೆ ಎಲ್ಲಿ ಕೊರೊನಾ ವೈರಸ್‌ ಹರಡುತ್ತದೆಯೆಂಬ ಭೀತಿ ಪ್ರಯಾಣಿಕರಲ್ಲಿ ಆವರಿಸಿದೆ.

ಜಿಲ್ಲೆಯ ಐದು ಡಿಪೋಗಳಿಂದ ಸುಮಾರು 65 ರಿಂದ 70 ಲಕ್ಷದಷ್ಟು ಹಣ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗುತ್ತಿತ್ತು. ಆದರೆ ಕೊರೊನಾ ವೈರಸ್‌ ಹರಡುವ ಭೀತಿಯಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವರ ಸಂಖ್ಯೆ ಕಡಿಮೆ ಆಗಿದೆ. ನಿತ್ಯ 6 ರಿಂದ 7 ಲಕ್ಷದಷ್ಟು ಆದಾಯ ಕುಸಿತವಾಗಿದೆ. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಘಟಕದಿಂದ ಹೆಚ್ಚು ಆದಾಯ ಬರುತ್ತಿತ್ತು. ಕೊರೊನಾ ಸಂಕಷ್ಟದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಆದಾಯ ಕುಸಿಯುವ ಸಾಧ್ಯತೆ ಇದೆ.
-ವಿ.ಬಸವರಾಜ್‌, ವಿಭಾಗೀಯ ನಿಯಂತ್ರಣಾಧಿಕಾರಿ. ಕೆಎಸ್‌ಆರ್‌ಟಿಸಿ, ಚಿಕ್ಕಬಳ್ಳಾಪುರ

ನಿತ್ಯ ಕನಿಷ್ಠ 10 ರಿಂದ 12 ಸಾವಿರದಷ್ಟು ಹಣ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗುತ್ತಿತ್ತು. ಈಗ ಆರೇಳು ಸಾವಿರಕ್ಕೆ ಬಂದು ನಿಂತಿದೆ. ಪ್ರಯಾಣಿಕರ ಕೊರತೆ ಇದಕ್ಕೆ ಕಾರಣ. ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರ ಜೊತೆಗೆ ಸರ್ಕಾರ ಒಂದು ವಾರ ಬಂದ್‌ ಆಚರಣೆಗೆ ಆದೇಶಿಸಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮೊದಲಿಗಿಂತ ಈಗ ತುಂಬ ಕಡಿಮೆ ಆಗಿದೆ.
-ಬಸವನಗೌಡ ಪಾಟೀಲ್‌, ಕೆಎಸ್‌ಆರ್‌ಟಿಸಿ ನಿರ್ವಾಹಕರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next