Advertisement

ವಾಣಿಜ್ಯ ವಹಿವಾಟಿಗೆ ಕೊರೊನಾ ಗ್ರಹಣ

09:38 PM Mar 15, 2020 | Lakshmi GovindaRaj |

ಮೈಸೂರು: ಜಗತ್ತಿನಾದ್ಯಂತ ತನ್ನ ಪ್ರಾಬಲ್ಯ ವಿಸ್ತರಿಸಿರುವ ಕೊರೊನಾ ವೈರಸ್‌ ಭೀತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನ ವಾಣಿಜ್ಯ ವಹಿವಾಟಿಗೆ ಭಾರೀ ಹಿನ್ನೆಡೆಯಾಗಿದೆ. ವಾರಂತ್ಯವಾದರೆ ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನತ್ತ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಪ್ರವಾಸಿ ತಾಣ ಸೇರಿದಂತೆ ನಗರದ ವಾಣಿಜ್ಯೋದ್ಯಮ ಚಟುವಟಿಕೆಗಳು ಶೇ.80ರಷ್ಟು ಸ್ತಬ್ಧವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

Advertisement

ಕೊರೊನಾ ವೈರಸ್‌ ಹಬ್ಬುವ ಭೀತಿ ಹಿನ್ನೆಲೆ ದೇಶಾದ್ಯಂತ ಮುನ್ನೆಚ್ಚರಿಕೆಯಾಗಿ ತೆಗೆದುಕೊಂಡ ಕ್ರಮಗಳಿಂದಾಗಿ ಜನರು ಮನೆಯಿಂದ ಹೆಚ್ಚು ಹೊರಬರುವುದು ಕಡಿಮೆಯಾಗಿರುವುದು ಒಂದೆಡೆಯಾದರೆ, ಶಾಲಾ-ಕಾಲೇಜುಗಳು, ಮಾಲ್‌, ಥಿಯೇಟರ್‌, ಕಲ್ಯಾಣ ಮಂದಿರ, ಪಾರ್ಟಿ ಹಾಲ್‌, ಕ್ಲಬ್‌ಗಳು ಬಂದಾದ ಹಿನ್ನೆಲೆ ಜನ ಸಂಚಾರವೂ ಕಡಿಮೆಯಾಗಿದೆ.

ವಾರಾಂತ್ಯದಲ್ಲಿ ಬೆಂಗಳೂರಿನಿಂದ ಭಾರೀ ಪ್ರಮಾಣದಲ್ಲಿ ಮೈಸೂರಿಗೆ ಬರುತ್ತಿದ್ದ ಟೆಕ್ಕಿಗಳು ಕಾಣದಂತಾಗಿದ್ದಾರೆ. ಪರಿಣಾಮ ಮೈಸೂರು ಭಾಗದ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕಾರಂಜಿಕೆರೆ, ನಂಜನಗೂಡು, ತಲಕಾಡು, ಟಿಬೇಟಿಯನ್‌ ಕ್ಯಾಂಪ್‌, ನಾಗರಹೊಳೆ ಸಫಾರಿ ಕೇಂದ್ರ ಹಾಗೂ ಐತಿಹಾಸಿಕ ಪ್ರಸಿದ್ಧ ದೇಗುಲಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.

ಬಿಕೋ ಎನ್ನುತ್ತಿವೆ ವಾಣಿಜ್ಯ ಕೇಂದ್ರಗಳು: ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವ್ಯಾಪಾರ ವಹಿವಾಟಿಗೆ ಗ್ರಹಣ ಹಿಡಿದಂತಾಗಿದ್ದು, ಮದ್ಯದಂಗಡಿಗಳನ್ನು ಹೊರತುಪಡಿಸಿ ಹೋಟೇಲ್‌, ಫಾಸ್ಟ್‌ಫ‌ುಡ್‌, ವಾಣಿಜ್ಯ ಮಳಿಗೆಗಳು, ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆಗಳು ವ್ಯಾಪಾರ ಮತ್ತು ಪ್ರಾಯಾಣಿಕರಿಲ್ಲದೇ ಸೊರಗಿವೆ. ಈಗಾಗಲೆ ಕೆಲವು ವಾಣಿಜ್ಯ ಮಳಿಗೆಗಳು, ಹೋಟೆಲ್‌ ಸ್ವಯಂಪ್ರೇರಿತವಾಗಿ ಬಂದ್‌ ಮಾಡಿರುವುದು ವಿಶೇಷ.

ಗ್ರಾಮದೇವತೆಗಳಿಗೂ ಕೊರೊನಾ ಸಂಕಟ: ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯುತ್ತಿದ್ದ ಗ್ರಾಮ ದೇವತೆಗಳ ಹಬ್ಬ, ಉತ್ಸವ ಹಾಗೂ ಜಾತ್ರೆಗಳಿಗೂ ಕೊರೊನಾ ಭೀತಿ ಎದುರಾಗಿದ್ದು, ಈಗಾಗಲೇ ಹಲವು ಉತ್ಸವ ಮತ್ತು ಜಾತ್ರೆಗಳನ್ನು ಮುಂದೂಡಲಾಗಿದೆ. ಇನ್ನೂ ಕೆಲವೆಡೆ ಗ್ರಾಮಸ್ಥರೇ ಸೇರಿ ಹಬ್ಬ ಮತ್ತು ಉತ್ಸವವನ್ನು ನಡೆಸುವಂತಾಗಿದೆ.

Advertisement

ದೇಗುಲಗಳಿಗೆ ಬಾರದ ಭಕ್ತರು: ಜಿಲ್ಲೆಯ ಐತಿಹಾಸಿಕ ದೇವಾಲಯಗಳು ಸೇರಿದಂತೆ ನಗರದ ಪ್ರಮುಖ ದೇವಾಲಯಗಳು ಪ್ರವಾಸಿಗರು ಮತ್ತು ಭಕ್ತರು ಇಲ್ಲದೇ ಬಣಗುಡುತ್ತಿದ್ದವು. ನಗರದ ಚಾಮುಂಡೇಶ್ವರಿ ದೇಗುಲ, ನಂಜನಗೂಡು ಶ್ರೀಕಂಠೇಶ್ವರ ದೇಗುಲ ಸೇರಿದಂತೆ ಹಲವು ದೇವಾಲಯಗಳು ಖಾಲಿ ಖಾಲಿಯಾಗಿದ್ದು, ಅಪರೂಪಕ್ಕೆ ಬರುವ ಭಕ್ತರು ದೇಗುಲಗಳಲ್ಲಿ ಶೀಘ್ರವಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ.

ಕೊರೊನಾ ಬೆದರಿಕೆಗೆ ಜಗ್ಗದ ಬಾರ್‌ಗಳು: ಜಗತ್ತಿನಾದ್ಯಂತ ಎಲ್ಲಾ ಕ್ಷೇತ್ರಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ, ಮದ್ಯ ಮಾರಾಟ ಕ್ಷೇತ್ರ ಮಾತ್ರ ಎಂದಿನಂತಿದೆ. ನಗರದಲ್ಲಿರುವ ಎಲ್ಲಾ ಬಾರ್‌ ಮತ್ತು ವೈನ್‌ಸ್ಟೋರ್‌ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಜನರು ತಮಗಿಷ್ಟವಾದ ಬ್ರಾಂಡ್‌ ಕೊಂಡುಕೊಳ್ಳುವಲ್ಲಿ ನಿರತರಾಗಿರುವುದು ಸಾಮಾನ್ಯವಾಗಿದೆ. ಕೊರೊನಾ ವೈರಸ್‌ ಎಲ್ಲಾ ವ್ಯಾಪಾರ ವಹಿವಾಟಿಗೂ ಪೆಟ್ಟು ನೀಡಿದ್ದರೂ, ಮದ್ಯದಂಗಡಿ ಮಾತ್ರ ಸುಲಲಿತವಾಗಿ ನಡೆಯುತ್ತಿದೆ ಎಂಬುದು ಬಾರ್‌ ಮಾಲೀಕರ ಅಭಿಪ್ರಾಯ.

ನೆಲಕಚ್ಚಿದ ಮಾಂಸೋದ್ಯಮ: ಕೊರೊನಾ ವೈರಸ್‌ ಜೊತೆಗೆ ಹಕ್ಕಿ ಜ್ವರ ಭೀತಿ ಎಂಬ ವದಂತಿಯಿಂದಾಗಿ ಜನರು ಮಾಂಸ ಕೊಳ್ಳುವುದುನ್ನು ನಿಲ್ಲಿಸಿರುವುದರಿಂದ ಕೋಳಿ, ಮೀನು, ಮೇಕೆ ಮಾಂಸ ಮಾರಾಟಕ್ಕೆ ಹೊಡೆತ ಬಿದ್ದಿದೆ. 180 ರೂ. ಇದ್ದ ಕೋಳಿ ಮಾಂಸದ ಬೆಲೆ 110 ರೂ.ಗೆ ಇಳಿಕೆಯಾಗಿದ್ದಾರೂ, ಮಾಂಸದಂಗಡಿಯತ್ತ ಜನರು ಸುಳಿದಾಡುತ್ತಿಲ್ಲ. ಒಟ್ಟಾರೆ ಕೊರೊನಾ ವೈರಸ್‌ ಜೊತೆಗೆ ಹಕ್ಕಿ ಜ್ವರ ಭೀತಿ ಎಂಬ ವದಂತಿಯಿಂದಾಗಿ ಮಾಂಸ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next