ನೋಡ್ತಾ ನೋಡ್ತಾ ಎಕ್ಸಾಂ ಬಂದೇ ಬಿಡ್ತು. ಊರಿಗೆ ಬೆಂಕಿ ಬಿದ್ದ ಮೇಲೆ ಬಾವಿ ತೆಗೆಯೋ ಜಾಯಮಾನ ನಂದು. ಪರೀಕ್ಷೆ ಬಂದಾಗ ಮಾತ್ರ ಪುಸ್ತಕ ಓಪನ್ ಮಾಡೋದು. ಇಲ್ಲಾಂದ್ರೆ ಅದೂR ನನಗೂ ಒಂದು ಮೈಲಿ ಅಂತರ. ಕ್ಲಾಸಲ್ಲಿ ಪಾಠ ಕೇಳದೆ ತರೆಲ ಮಾಡ್ತಾ, ಸಿನೆಮಾ ನೋಡ್ತಾ, ಕ್ಲಾಸ್‌ಗಳಿಗೆ ಬಂಕ್ ಹಾಕ್ತಾ ಇರೋದೇ ನನ್ನ ಫ್ಯಾಷನ್. ಕಾಪಿ ಚೀಟಿ ಅನ್ನೋ ಕಪ್ಪು ಚುಕ್ಕೆ ಇವುಗಳಿಗೆಲ್ಲಾ ಬ್ರೇಕ್ ಹಾಕಿತು. ನನ್ನ ಬೆಸ್ಟ್ ಫ್ರೆಂಡ್‌ಗಳಾದ ಫೇಸ್‌ಬುಕ್, ವಾಟ್ಸಾಪ್ ಹೈಕ್‌ಗಳಿಗೆಲ್ಲಾ ರೆಸ್ಟ್ ಕೊಟ್ಟು ಪುಸ್ತಕ ಅನ್ನೋ ವೈರಿಯನ್ನು ಹತ್ರ ಮಾಡ್ಕೊಂಡೆ, ಓದೋಕೆ ಅಂತ. ಅದೂ ಎಕ್ಸಾಂ ಹಿಂದಿನದಿನ. ತಲೆ-ಬುಡ ಒಂದೂ ತಿಳಿಯಲಿಲ್ಲ.
ರಾತ್ರಿಯೆಲ್ಲಾ ನಿದ್ದೆಗೆಟ್ಟು, ಎದ್ದು ಬಿದ್ದೂ ಓದಿದ್ರೂ ಒಂದಕ್ಷರವೂ ತಲೆಯೊಳಗೆ ಇಳಿಯಲಿಲ್ಲ. ಇನ್ನೇನ್ ಮಾಡೋದು ಅಂತ ಯೋಚಿಸ್ತಿದ್ದಾಗ ಹೊಳೆದಿದ್ದೇ “ಕಾಪಿ’ ಮಂತ್ರ. ಎಲ್ಲರೂ ಹಾಳೆ ಮೇಲೆ ಬರೆದು ಕಿಸೆಯಲ್ಲೋ, ಶೂನಲ್ಲೋ, ಬೆಲ್ಟಲ್ಲೋ ಇಟ್ಕೊಂಡ್ರೆ, ನಾನು ಬುದ್ಧಿವಂತೆ ಥರ ವೈಟ್ ಕಚೀìಫ್ ಮೇಲೆಯೇ ನೀಟಾಗಿ ಬರೆದುಕೊಂಡು ಮರುದಿನ ಎಕ್ಸಾಂ ಹಾಲ್ ಪ್ರವೇಶಿಸಿದೆ. ಕ್ವಶ್ಚನ್ ಪೇಪರ್ ಸಿಕ್ಕಿತು. ಆನ್ಸರ್ ಬರೆಯೋಕೆ ಶುರು ಮಾಡಿದೆ. ಮಧ್ಯ ಮಧ್ಯದಲ್ಲಿ ಕಚೀìಫ್ಅನ್ನು ನೋಡಿಕೊಂಡು ಉತ್ತರ ಬರೆಯತೊಡಗಿದೆ.
ಯಾವ ಗಳಿಗೆಯಲ್ಲಿ ಲೆಕ್ಚರರ್ ದೃಷ್ಟಿ ನನ್ನ ಮೇಲೆ ಬಿತ್ತೋ ಗೊತ್ತಿಲ್ಲ. ಸೀದಾ ಬಳಿ ಬಂದು ನನ್ನನ್ನು ಎಬ್ಬಿಸಿಕೊಂಡು ಪ್ರಿನ್ಸಿಪಾಲರ ಚೇಂಬರ್‌ಗೆ ಕರೆದೊಯ್ದರು. ಮೈಕೈಯೆಲ್ಲಾ ಬೆವೆತು ಗಡ ಗಡ ನಡುಗತೊಡಗಿದೆ. ಕಣ್ಣಲ್ಲಿ ನೀರು ತುಂಬಿತು. ಆದರೆ ಏನೂ ಮಾಡುವ ಹಾಗಿಲ್ಲ. ಫೇಲಾದ್ರೂ ಪರವಾಗಿರಲಿಲ್ಲ, ಕಾಪಿ ಮಾಡೋದು ಬೇಡವಾಗಿತ್ತು ಅಂತ ಆಗ ಅನ್ನಿಸೋಕೆ ಶುರುವಾಯಿತು. ಅವರಿಬ್ಬರ ನಡುವಿನ ಮಾತಿನಲ್ಲಿ “ಡಿಬಾರ್’ ಎನ್ನೋ ಪದ ಕೇಳಿದಾಕ್ಷಣ ಎದೆಬಡಿತ ಇನ್ನೂ ಹೆಚ್ಚಾಯ್ತು. ಕೊನೆಗೆ ರಿಕ್ವೆಸ್ಟ್ ಮಾಡಿ, ಮತ್ತೆ ಆ ತಪ್ಪು ಮಾಡಲ್ಲ ಅಂತ ಪ್ರಾಮಿಸ್ ಮಾಡಿದ ಮೇಲೆ ಪ್ರಿನ್ಸಿಪಾಲರು ನನ್ನ ಮೇಲೆ ಕರುಣೆ ತೋರಿದ್ದು. ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೊರಬಂದೆ. ಅವತ್ತಿನಿಂದ ಓದದೇ ಇದ್ದರೂ ಕಾಪಿ ಮಾಡೋ ಸಾಹಸಕ್ಕೆ ಮಾತ್ರ ಕೈ ಹಾಕಿಲ್ಲ.
– ನಾಗರತ್ನ ಮತ್ತಿಘಟ್ಟ, ಶಿರಸಿ