Advertisement

ಕಾಪ್ಟರ್‌ ಪತನ: ಐವರ ಸಾವು

12:06 PM Jan 14, 2018 | |

ಮುಂಬಯಿ: ಒಎನ್‌ಜಿಸಿ ಅಧಿಕಾರಿಗಳನ್ನು ಹೊತ್ತೂಯ್ಯುತ್ತಿದ್ದ ಪವನ್‌ ಹನ್ಸ್‌ ಹೆಲಿಕಾಪ್ಟರ್‌ವೊಂದು ಶನಿವಾರ ಮುಂಬಯಿ ಕರಾವಳಿಯಾಚೆ ಪತನ ಗೊಂಡಿದೆ. ಕಾಪ್ಟರ್‌ನಲ್ಲಿದ್ದ ಐವರು ಅಧಿಕಾರಿಗಳು ಹಾಗೂ ಇಬ್ಬರು ಪೈಲಟ್‌ಗಳೂ ಮೃತಪಟ್ಟಿರುವ ಸಾಧ್ಯತೆ ಯಿದ್ದು, ಐವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಮಟ್ಟದ ಮೂವರು ಅಧಿಕಾರಿಗಳು ಸೇರಿದಂತೆ ಐವರು ಅಧಿಕಾರಿಗಳು ಮತ್ತು ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್‌ ಬೆಳಗ್ಗೆ 10.40ರ ವೇಳೆಗೆ ಮುಂಬಯಿನ ಜುಹು ಹೆಲಿಬೇಸ್‌ನಿಂದ ಟೇಕ್‌ ಆಫ್ ಆಗಿತ್ತು. ಮುಂಬಯಿ ಕರಾವಳಿಯಾಚೆ ಒಎನ್‌ಜಿಸಿಗೆ ಸೇರಿದ ಪ್ರಮುಖ ತೈಲ ಕ್ಷೇತ್ರಗಳಿದ್ದು, ಪವನ್‌ ಹನ್ಸ್‌ ಕಾಪ್ಟರ್‌ ಮೂಲಕವೇ ಪ್ರತಿ ಬಾರಿಯೂ ಕಂಪೆನಿಯ ನೌಕರರು ಮತ್ತು ಅಧಿಕಾರಿಗಳು ಅಲ್ಲಿಗೆ ತೆರಳುತ್ತಿದ್ದರು. ಕರಾವಳಿ ಪ್ರದೇಶದಿಂದ 160 ಕಿ.ಮೀ. ದೂರದಲ್ಲಿರುವ ತೈಲಕ್ಷೇತ್ರದಲ್ಲಿ ಯಾವುದೇ ಕೆಲಸವಿದ್ದರೂ ಕಾಪ್ಟರ್‌ ಮೂಲಕವೇ ತೆರಳಬೇಕು. ಅದರಂತೆ, ಶನಿವಾರ ಬೆಳಗ್ಗೆಯೂ ಕಾಪ್ಟರ್‌ನಲ್ಲಿ ಅಧಿಕಾರಿಗಳು ಹೊರಟಿದ್ದರು. 11 ಗಂಟೆ ವೇಳೆಗೆ ತೈಲಕ್ಷೇತ್ರವನ್ನು ಇವರು ತಲುಪಬೇಕಿತ್ತು. ಆದರೆ, ಕಾಪ್ಟರ್‌ ಟೇಕ್‌ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದು ಸಂಪರ್ಕ ಕಡಿದುಕೊಂಡಿದ್ದು, ಪತನಗೊಂಡಿತು. 

ವಿಷಯ ಗೊತ್ತಾಗುತ್ತಿದ್ದಂತೆ, ನೌಕಾಪಡೆಯ ಐಎನ್‌ಎಸ್‌ ತೇಜ್‌, ನಿಗಾ ವಿಮಾ ಪಿ8ಐ ಹಾಗೂ ಕರಾವಳಿ ರಕ್ಷಣಾ ಪಡೆಯ ನೌಕೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು. ಶನಿವಾರ ಸಂಜೆಯ ವೇಳೆಗೆ ಐವರ ಮೃತದೇಹಗಳು ಪತ್ತೆಯಾಗಿದ್ದು, ಉಳಿದವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದೇ ವೇಳೆ, ವಿಮಾನ ಅಪಘಾತ ತನಿಖಾ ಸಂಸ್ಥೆಯಾದ ಎಎಐಬಿ ಈ ಘಟನೆಯ ಕುರಿತು ತನಿಖೆ ನಡೆಸಲಿದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಹಿಂದೆಯೂ ನಡೆದಿತ್ತು: ಹೆಲಿಕಾಪ್ಟರ್‌ ದುರಂತವು ಒಎನ್‌ಜಿಸಿಗೆ ಹೊಸತಲ್ಲ. 2003ರ ಆಗಸ್ಟ್‌ನಲ್ಲಿ ಎಂಐ-172 ಕಾಪ್ಟರ್‌ ಮುಂಬಯಿ ಕರಾವಳಿಯಾಚೆ ಪತನಗೊಂಡು, ಕಂಪೆನಿಯ 27 ಮಂದಿ ಹಾಗೂ ಪೈಲಟ್‌ ದುರಂತ ಅಂತ್ಯ ಕಂಡಿದ್ದರು. 

ದೋಣಿ ದುರಂತ: ಮೂವರು ಮಕ್ಕಳ ಸಾವು
ಮುಂಬಯಿ :
 ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯ ದಹನು ಕರಾವಳಿಯಲ್ಲಿ ದೋಣಿಯೊಂದು ಮುಳುಗಿ ಶಾಲೆ ಪ್ರವಾಸಕ್ಕೆಂದು ಬಂದಿದ್ದ ಮೂವರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ. 6 ಮಕ್ಕಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇಲ್ಲಿಯ ಪಂಕಾರದ ಪೋಂಡಾ ಶಾಲೆಯ ಒಟ್ಟು 40 ಮಕ್ಕಳು ಖಾಸಗಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. 32 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದೋಣಿ ದಹಾಣು ಕರಾವಳಿ ತೀರದಿಂದ ನೀರಿನಲ್ಲಿ 20 ಮೈಲು ದೂರ ಚಲಿಸಿತ್ತು. ಒಂದೇ ದೋಣಿಯಲ್ಲಿ 40 ಮಕ್ಕಳಿದ್ದ ಕಾರಣ, ಅದು ವಾಲಿಕೊಂಡು ನೀರಲ್ಲಿ ಮುಳುಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ರಾಷ್ಟ್ರಪತಿ ಕೋವಿಂದ್‌ ಅವರು 2 ದಿನಗಳ ಮಹಾರಾಷ್ಟ್ರ ಭೇಟಿಗಾಗಿ ಮುಂಬಯಿಗೆ ಬಂದಿಳಿದಿದ್ದು, ಮೃತ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next