ವಿಜಯಪುರ: ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿ ಸಮರ್ಪಣೆ, ಹೆಮ್ಮೆ ಮತ್ತು ನಿಸ್ವಾರ್ಥದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕು ಎಂದು ಭಾರತೀಯ ನೌಕಾಪಡೆಯ ಉಪ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ತಿಳಿಸಿದರು.
ನಗರದ ಸೈನಿಕ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಯುಎಚ್-3ಎಚ್ ಹೆಲಿಕಾಪ್ಟರ್ ಸ್ಥಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಜೀವನದಲ್ಲಿ ಯಶಸ್ವಿಯಾಗಲು ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ವಿದ್ಯಾರ್ಥಿಗಳು ಹೋರಾಟದ ಮನೋಭಾವ ಪ್ರದರ್ಶಿಸಬೇಕು ಮತ್ತು ಶ್ರೇಷ್ಠತೆಯ ಗುರಿ ಹೊಂದಿರಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ, ಈ ಶಾಲೆಯಲ್ಲಿ ತಾವು ಕಲಿತ ದಿನಗಳನ್ನೂ ನೆನಪಿಸಿಕೊಂಡ ಅವರು, ತಮ್ಮ ಆರು ದಶಕಗಳ ಜೀವನ ಪಯಣದಲ್ಲಿ ಈ ಶಾಲೆಗೆ ವಿಶೇಷ ಸ್ಥಾನವಿದೆ ಎಂದರು. ಅಲ್ಲದೇ, ಸೈನಿಕ ಶಾಲೆಯಲ್ಲಿ ಯುಎಚ್-3ಎಚ್ ಹೆಲಿಕಾಪ್ಟರ್ ಸ್ಥಾಪನೆಯು ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ನ ಶ್ರೀಮಂತ ಕಾರ್ಯಾಚರಣೆ ಪರಂಪರೆಗೆ ಸಂದ ಗೌರವ. ಶಾಲೆಯ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಮತ್ತು ಕೆಡೆಟ್‌ಗಳೊಂದಿಗೆ ಸಂವಾದ ನಡೆಸಿದರು.
ಇದಕ್ಕೂ ಮುನ್ನ ಉಪ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ರನ್ನು ಪ್ರಿನ್ಸಿಪಾಲ್, ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್ ಬರಮಾಡಿಕೊಂಡರು. ಶಾಲೆಯ ಇತ್ತೀಚಿನ ಬೆಳವಣಿಗೆಗಳು ಮತ್ತು ಶೈಕ್ಷಣಿಕ ಪ್ರಗತಿ ವಿವರಿಸಿದರು. ಜತೆಗೆ ಸೈನಿಕ ಶಾಲೆಯ ಕೆಡೆಟ್‌ಗಳು ಆಕರ್ಷಕ ಗೌರವ ವಂದನೆ ಸಲ್ಲಿಸಿದರು.
ಹೆಲಿಕಾಪ್ಟರ್ ಇತಿಹಾಸ
ಸೈನಿಕ ಶಾಲೆಯ ಆವರಣದಲ್ಲಿ ಸ್ಥಾಪಿಸಲಾದ ಯುಎಚ್-3ಎಚ್ ಹೆಲಿಕಾಪ್ಟರ್ ಭಾರತೀಯ ನೌಕಾಪಡೆಗೆ ಸೇರಿದ್ದು. 2007ರಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. 2009ರ ಮಾರ್ಚ್ 24ರಂದು ಮೊದಲ ಬಾರಿ ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವಳಿ ಎಂಜಿನ್, ಬಹು ಪಾತ್ರದ ಹೆಲಿಕಾಪ್ಟರ್ ಆಗಿದ್ದು, ಇದು ನೌಕಾಪಡೆಯ ಸೀಲಿಫ್ಟ್ ಸಾಮರ್ಥ್ಯವನ್ನು ಹೆಚ್ಚಿಸಿತ್ತು. ಪ್ರತಿಕೂಲ ಸಮುದ್ರತೀರದಲ್ಲಿ ಯುದ್ಧ ಪಡೆಗಳ ತರಬೇತಿ ಜತೆಗೆ ಅನೇಕ ಕಾರ್ಯಾಚರಣೆಗಳಲ್ಲಿ ತನ್ನ ಪಾತ್ರವನ್ನು ವಹಿಸಿ, ರಾಷ್ಟ್ರಕ್ಕೆ ಸೇವೆ ಸಲ್ಲಿಸಿದೆ.