ಪುಣೆ: ಜಿಲ್ಲೆಯ ಪೌಡ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಒಂದು ಶನಿವಾರ(ಆ 24) ಪತನಗೊಂಡಿದ್ದು, ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪುಣೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯೂ ಜೋರಾಗಿತ್ತು. ಬಲವಾದ ಗಾಳಿ ಮತ್ತು ಪ್ರತೀಕೂಲ ಪರಿಸ್ಥಿತಿಯಿಂದಾಗಿ ಘಟನೆ ಸಂಭವಿಸಿರಬಹುದು ಎಂದು ಊಹಿಸಲಾಗಿದೆ.ಹೆಲಿಕಾಪ್ಟರ್ ಖಾಸಗಿ ವಿಮಾನಯಾನ ಕಂಪನಿಗೆ ಸೇರಿತ್ತು. ಅದು ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು.
ಪ್ರತ್ಯಕ್ಷದರ್ಶಿ ಕಮಲೇಶ್ ಸೋಲ್ಕರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು “ಹೆಲಿಕಾಪ್ಟರ್ ಕೆಳಗೆ ಬಿದ್ದಿರುವುದನ್ನು ನಾನು ನೋಡಿದೆ. ಹೆಲಿಕಾಪ್ಟರ್ ಕೆಳಗೆ ಬಿದ್ದ ತತ್ ಕ್ಷಣ ನಾನು ಅದರ ಬಳಿ ಹೋದೆ. ಪೈಲಟ್ ಜತೆ ಮಾತನಾಡಿದೆ. ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವರು ಆತಂಕಗೊಂಡಿದ್ದರು. ಹೆಲಿಕಾಪ್ಟರ್ ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು ಎಂದು ಜನರನ್ನು ಹೆಲಿಕಾಪ್ಟರ್‌ನಿಂದ ದೂರ ಸರಿಯಲು ಹೇಳುತ್ತಿದ್ದರು’ ಎಂದು ಹೇಳಿದ್ದಾರೆ.
ಗ್ಲೋಬಲ್ ವೆಕ್ಟ್ರಾ ಕಂಪನಿಗೆ ಸೇರಿದ AW 139 ಹೆಲಿಕಾಪ್ಟರ್ ಪೈಲಟ್ ಆನಂದ್ ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಡೀರ್ ಭಾಟಿಯಾ, ಅಮರ್‌ದೀಪ್ ಸಿಂಗ್ ಮತ್ತು ಎಸ್‌ಪಿ ರಾಮ್ ಎಂಬ ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.