ಮುಂಬೈ: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ಮತ್ತೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಬಹ್ರೈಚ್ ಮೂಲದ ಹರೀಶ್‌ಕುಮಾರ್ ಬಲಕ್ರಮ್ (23) ಎಂದು ಗುರುತಿಸಲಾಗಿದೆ. ಬಲಕ್ರಮ್ ಮಹಾರಾಷ್ಟ್ರದ ಪುಣೆಯಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಆರೋಪಿಗಳು ಬಾಬಾ ಸಿದ್ದಿಕ್ ಹತ್ಯೆಯ ಸಂಚಿನ ಭಾಗವಾಗಿದ್ದ ಎನ್ನಲಾಗಿದ್ದು ಆತನನ್ನು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಹರ್ಯಾಣ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶ ಮೂಲದ ಧರ್ಮರಾಜ್ ರಾಜೇಶ್ ಕಶ್ಯಪ್ (19), ಇಬ್ಬರೂ ಶೂಟರ್‌ಗಳು ಮತ್ತು ಪುಣೆಯಿಂದ “ಸಹ ಸಂಚುಕೋರ” ಪ್ರವೀಣ್ ಲೋಂಕರ್ ಸೇರಿ ಮೂವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.
ಇನ್ನೋರ್ವ ಶಂಕಿತ ಶೂಟರ್ ಬಹ್ರೈಚ್ ಮೂಲದ ಶಿವಕುಮಾರ್ ಗೌತಮ್ ತಲೆಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರೆದಿದೆ.
ಮುಂಬೈನ ನಿರ್ಮಲ್ ನಗರ ಪ್ರದೇಶದಲ್ಲಿ ಬಾಬಾ ಸಿದ್ದಿಕ್ ಅವರನ್ನು ಮೂವರು ವ್ಯಕ್ತಿಗಳು, ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಶನಿವಾರ(ಅ.೧೨) ರಾತ್ರಿ ಗುಂಡು ಹಾರಿಸಿದ್ದಾರೆ. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Heavy Rain: ಕಾಫಿನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ… ಜನಜೀವನ ಅಸ್ತವ್ಯಸ್ತ