ಬೆಂಗಳೂರು: ಜೆಡಿಎಸ್‌ಗೆ ಬಿಟ್ಟುಕೊಟ್ಟ ಹಾಗೂ ಜೆಡಿಎಸ್ ಪ್ರಭಾವ ಇರುವ ಕ್ಷೇತ್ರಗಳಲ್ಲಿ, ಭವಿಷ್ಯದಲ್ಲಿ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಲು ಎರಡು ಪಕ್ಷದ ಪ್ರಮುಖರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ ಮಾಡಲು ಬಿಜೆಪಿ ನಿರ್ಧರಿಸಿದೆ.
ಮೈತ್ರಿ ಬಗ್ಗೆ ಹಾಗೂ ರಾಜ್ಯ ನಾಯಕರ ಅಸಹಕಾರದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ.
ಸಮನ್ವಯ ಸಮಿತಿ ರಚಿಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಜತೆಗೆ ತಳಹಂತದಲ್ಲಿ ಮಾಡಬೇಕಾದ ಕಾರ್ಯ ಚಟುವಟಿಕೆಯನ್ನು ನಿರ್ಧರಿಸಲಾಗುತ್ತದೆ. ಎರಡು ಪಕ್ಷಗಳಿಂದ ತಲಾ ಇಬ್ಬರು ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ.
ಸಮನ್ವಯ ಸಮಿತಿ ರಚನೆ ಮಾಡುವ ಬಗ್ಗೆ ಜೆಡಿಎಸ್ ನಾಯಕರಿಗೆ ಈಗಾಗಲೇ ಸಂದೇಶ ಕಳುಹಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಶಿವಮೊಗ್ಗ, ಕಲಬುರಗಿ, ತುಮಕೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮನ್ವಯ ಸಮಿತಿ ರಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಭಾಗವಹಿಸುವ ಸಮಾವೇಶಗಳು, ಪ್ರಚಾರ ಸಭೆಗಳು ಹಾಗೂ ಇನ್ನಿತರ ಸಂಗತಿಗಳನ್ನು ಈ ಸಮಿತಿ ನಿರ್ವಹಿಸುತ್ತದೆ. ಸಮಸ್ಯೆಗಳು ಸೃಷ್ಟಿಯಾದಾಗ ಸಮಾಲೋಚನೆ ಹಾಗೂ ಹಿರಿಯರ ಗಮನ ಸೆಳೆದು ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ಸಮನ್ವಯ ಸಮಿತಿಗೆ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲೂ ಸಮಿತಿ
ಅದೇ ರೀತಿ ಬಿಜೆಪಿಯಲ್ಲಿ ತಲೆದೋರಬಹುದಾದ ಅಸಮಾಧಾನ ಹಾಗೂ ಸಮಸ್ಯೆ ಇತ್ಯರ್ಥಕ್ಕೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಡಾ| ಸಿ.ಎನ್.ಅಶ್ವತ್ಥನಾರಾಯಣ್ ಅವರನ್ನು ಒಳಗೊಂಡ ಆಂತರಿಕ ಸಮಿತಿ ರಚನೆಗೂ ಬಿಜೆಪಿ ಮುಂದಾಗಿದೆ.